ಚಳ್ಳಕೆರೆಯಲ್ಲಿ ಬಂಡೆ ಬಸವೇಶ್ವರನ ರಥೋತ್ಸವಕ್ಕೆ ಹರಿದ ಭಕ್ತರ ದಂಡು

| Published : Dec 29 2024, 01:18 AM IST

ಚಳ್ಳಕೆರೆಯಲ್ಲಿ ಬಂಡೆ ಬಸವೇಶ್ವರನ ರಥೋತ್ಸವಕ್ಕೆ ಹರಿದ ಭಕ್ತರ ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆಯಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಶ್ರೀಬಂಡೇಬಸವೇಶ್ವರಸ್ವಾಮಿಯ ಜಾತ್ರೆ ವೈಭವದಿಂದ ನಡೆಯಿತು. ಜಾತ್ರೆಗೆ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶದಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಕಾಲುವೇಹಳ್ಳಿ ಗ್ರಾಮದಲ್ಲಿ ನಡೆವ ಜಾತ್ರೆ । ರಂಜಿಸಿದ ಜಾನಪದ ತಂಡಗಳು

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರತಿವರ್ಷದಂತೆ ಈ ವರ್ಷವೂ ತಾಲೂಕಿನ ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಶ್ರೀಬಂಡೇಬಸವೇಶ್ವರಸ್ವಾಮಿಯ ಜಾತ್ರೆ ವೈಭವದಿಂದ ನಡೆಯಿತು. ಜಾತ್ರೆಗೆ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶದಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ವಿಶೇಷವೆಂದರೆ ಬಂಡೆಬಸವೇಶ್ವರಸ್ವಾಮಿ ಜಾತ್ರೆಯ ದಿನದಂದೇ ಗ್ರಾಮದ ಶ್ರೀಆಂಜನೇಯಸ್ವಾಮಿ, ನೀಲಕಂಠೇಶ್ವರಸ್ವಾಮಿ, ಕಾಳಿಕಾದೇವಿ ದೇವಸ್ಥಾನಗಳಲ್ಲೂ ಸಹ ವಿಶೇಷ ಎಲೆಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶನಿವಾರ ಬೆಳಗಿನ ಜಾವ ಗ್ರಾಮದ ಕೆರೆಯಂಗಳದಲ್ಲಿ ಗಂಗಾಪೂಜೆಯಲ್ಲಿ ಭಕ್ತರು ಹಾಗೂ ಸುಹಾಸಿನಿಯರು ಪಾಲ್ಗೊಂಡು ಭಕ್ತಿಯಿಂದ ಪೂಜೆ ಅರ್ಪಿಸಿದ ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶ್ರೀಬಂಡೆಬಸವೇಶ್ವರಸ್ವಾಮಿಯ ಪಲಕ್ಕಿ ಉತ್ಸವವನ್ನು ನಡೆಸಲಾಯಿತು. ಮಹಾಮಂಗಳಾರತಿ, ರುದ್ರಾಭಿಷೇಕ, ನಂತರ ಪ್ರಸಾದ ವಿನಿಯೋಗ ನಡೆಸಲಾಯಿತು. ಮೆರವಣಿಗೆಯೂದ್ದಕ್ಕೂ ಕೋಲಾಟ, ಭಜನೆ, ಚಂಡಿವಾದ್ಯ, ಗೊಂಬೆಕುಳಿತ, ನಂದಿಕೋಲು, ಡೊಳ್ಳುಕುಣಿತ, ಕೀಲುಕುದುರೆ ಮುಂತಾದ ಜಾನಪದ ಕಲಾತಂಡಗಳು ಮೆರವವಣಿಗೆಗೆ ಮೆರತುತಂದವು.

ಗ್ರಾಮದ ಶ್ರೀಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಆಂಜನೇಯಸ್ವಾಮಿ ಭಜನಾಮಂಡಳಿಯಿಂದ ಭಜನಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಸಂಜೆ ಸುಮಾರು ೫ ಗಂಟೆಗೆ ಬಂಡೆಬಸವೇಶ್ವರಸ್ವಾಮಿಯ ರಥೋತ್ಸವ ದೇವಸ್ಥಾನದ ಆವರಣದಿಂದ ಸಾವಿರಾರು ಭಕ್ತರ ಜಯಕಾರಗಳೊಂದಿಗೆ ಆರಂಭಿಸಲಾಯಿತು. ಗ್ರಾಮದ ಮುಖಂಡ ರೇಣುಕಸ್ವಾಮಿ ರಥದ ಮೇಲ್ಭಾಗ ಕಳಸ ಸ್ಥಾಪನೆ ಮಾಡಿದರು. ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದರು. ಬಸವೇಶ್ವರಸ್ವಾಮಿ ಹಾಗೂ ಪಕ್ಕದ ಎಲ್ಲಾ ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಗ್ರಾಮದೆಲ್ಲೆಡೆ ಕೇಸರಿ ಬಾವುಟಗಳು ರಾರಾಜಿಸಿದವು.

ಮುಕ್ತಿಬಾವುಟ ಹರಾಜು:

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀಸ್ವಾಮಿಯ ರಥದ ಮೇಲೆ ಅಲಂಕರಿಸಿದ್ದ ಮುಕ್ತಿ ಬಾವುಟವನ್ನು ಸಾರ್ವಜನಿಕವಾಗಿ ಹರಾಜು ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಎನ್.ಗಾದ್ರಿಪಾಲಯ್ಯ ೪೧ ಸಾವಿರ ರು.ಗೆ ಮುಕ್ತಿಬಾವುಟವನ್ನು ಹರಾಜಿನಲ್ಲಿ ಪಡೆದರು.

ಗ್ರಾಮದ ಮುಖಂಡರಾದ ಕೆ.ಪಿ.ಭೂತಯ್ಯ, ಜಾಜೂರು ಹನುಮಂತಪ್ಪ, ಮಹಂತೇಶ್‌ ನಾಯಕ, ಕೆ.ಒ.ಪಾಲಣ್ಣ, ಜೆ.ಪಿ.ಜಯಪಾಲಯ್ಯ, ಕಾಲುವೇಹಳ್ಳಿ ರಂಗಸ್ವಾಮಿ, ಜಿ.ಕೆ.ರಾಮಣ್ಣ, ನೀಲಕಂಠಶೆಟ್ಟಿ, ಡಿ.ಆರ್.ತಿಮ್ಮಣ್ಣ, ಕರಿಬಸಯ್ಯ, ಪಿ.ಶ್ರೀನಿವಾಸ್, ರವಿ, ರಾಘವೇಂದ್ರ, ರಾಕೇಶ್, ಸೊಪ್ಪಿನಪಾಲಯ್ಯ, ರಾಘವೇಂದ್ರ ಮುಂತಾದವರು ಪಾಲ್ಗೊಂಡಿದ್ದರು.