ರಸ್ತೆ ದುರಸ್ತಿಗೆ ಆಗ್ರಹಿಸಿ ಇಂದು ಕವಲೂರು ಬಂದ್

| Published : Oct 01 2024, 01:41 AM IST

ಸಾರಾಂಶ

ನಮ್ಮೂರಿಗೆ ಬರುವ ಯಾವ ರಸ್ತೆಯೂ ಸರಿಯಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವುದು ಎಂದರೇ ಸರ್ಕಸ್ ಮಾಡಿದಂತೆ. ಹೀಗಾಗಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಅ. 1 ರಂದು ಕವಲೂರು ಗ್ರಾಮ ಬಂದ್ ಕರೆ ನೀಡಲಾಗಿದೆ.

ಕಲ್ಪವೃಕ್ಷ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ

2 ಸಾವಿರಕ್ಕೂ ಅಧಿಕ ಮಹಿಳೆಯರೇ ಪ್ರತಿಭಟನೆಯಲ್ಲಿ ಭಾಗಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ನಮ್ಮೂರಿಗೆ ಬರುವ ಯಾವ ರಸ್ತೆಯೂ ಸರಿಯಿಲ್ಲ. ರಸ್ತೆಯಲ್ಲಿ ಸಂಚಾರ ಮಾಡುವುದು ಎಂದರೇ ಸರ್ಕಸ್ ಮಾಡಿದಂತೆ. ಹೀಗಾಗಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಅ. 1 ರಂದು ಕವಲೂರು ಗ್ರಾಮ ಬಂದ್ ಕರೆ ನೀಡಲಾಗಿದೆ ಎಂದು ಕಲ್ಪವೃಕ್ಷ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.

ನಗರದ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಸುರೇಶ ಸಿಂದೋಗಿ, ಕಾರ್ಯದರ್ಶಿ ಶೋಭಾ ಬಿಳಗಿ, ಉಪಾಧ್ಯಕ್ಷೆ ರೇಣುಕಾ ಜೋಗಿನ, ರತ್ಮಾ ಹಾಗೂ ಶರಣಪ್ಪ ಜಡಿ ಈ ಮಾಹಿತಿ ನೀಡಿದರು.

ಶಾಸಕರು, ಅಧಿಕಾರಿಗಳು, ಸಚಿವರಿಗೆ ಮನವಿ ಕೊಟ್ಟು ಸಾಕಾಗಿದೆ. ನಮ್ಮೂರು ರಸ್ತೆ ಎಷ್ಟು ಹದಗೆಟ್ಟು ಹೋಗಿದೆ ಎಂದರೇ ಅದರಲ್ಲಿ ಸಂಚಾರ ಮಾಡುವುದು ಸಾಧ್ಯವೇ ಇಲ್ಲ ಎನ್ನುವಂತೆ ಆಗಿದೆ. ಕಳೆದ ಹದಿನೈದು ವರ್ಷಗಳಿಂದ ರಸ್ತೆ ದುರಸ್ತಿಯನ್ನೇ ಮಾಡಿಲ್ಲ. ಯಾರನ್ನು ಕೇಳಿದರೂ ಮಾಡುತ್ತೇವೆ ಎನ್ನುತ್ತಾರೆಯೇ ಹೊರತು ಮಾಡುವುದೇ ಇಲ್ಲ.

ರಸ್ತೆ ಸರಿಯಾಗಿಲ್ಲದ್ದರಿಂದ ಬಸ್ಸುಗಳು ಬರುವುದು ಬಂದಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿತ್ತು. ಈಗ ಹೇಗೋ ಸಂಚಾರ ಮಾಡುತ್ತವೆ. ಆದರೆ, ಸಮಯಕ್ಕೆ ಸರಿಯಾಗಿ ಚಲಿಸುವುದೇ ಇಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುವಾಗ ಜಿಲ್ಲಾಸ್ಪತ್ರೆಗೆ ಬಾಣಂತಿ ಸಾಗಿಸಲು ಮುಂದಾದಾಗ ದಾರಿಯಲ್ಲಿಯೇ ಸಾವನ್ನಪ್ಪಿದ್ದಳು. ದಾರಿಯಲ್ಲಿಯೇ ಹೆರಿಗೆಗಳು ಆಗುತ್ತವೆ. ಅಷ್ಟು ರಸ್ತೆ ಹದಗೆಟ್ಟು ಹೋಗಿದೆ ಎಂದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ಈಗಾಗಲೇ ಗ್ರಾಮದ ಹಿರಿಯರು, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಆದರೂ ಸಹ ದುರಸ್ತಿ ಮಾಡಿಲ್ಲ. ಹೀಗಾಗಿ, ಈಗ ನಾವು ನಮ್ಮೂರು ಕವಲೂರು ಗ್ರಾಮವನ್ನೇ ಬಂದ್ ಮಾಡುತ್ತೇವೆ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಹಾಗಂತ ನಾವು ಯಾರ ವಿರುದ್ಧವೂ ಪ್ರತಿಭಟನೆ ಮಾಡುತ್ತಿಲ್ಲ. ನಮ್ಮದು ರಸ್ತೆ ದುರಸ್ತಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಅ. 1 ರಂದು ಇಡೀ ಗ್ರಾಮವನ್ನು ಬಂದ್ ಮಾಡಿ, ಎಲ್ಲ ರಸ್ತೆಗಳಲ್ಲಿಯೂ ಸಂಚಾರ ನಿಲ್ಲಿಸಿ, ಹೋರಾಟ ಮಾಡುತ್ತೇವೆ ಎಂದು ಹೇಳಿದರು.

30ಕೆಪಿಎಲ್21 ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು.