ಸಾರಾಂಶ
ಹನಿ ರಕ್ತ ಇರುವುವರೆಗೂ ಹೋರಾಟ: ಸುರೇಶ್ ಕುಮಾರ್ । ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ನರಸಿಹಂರಾಜಪುರವಿಶ್ವ ಹಿಂದೂ ಪರಿಷತ್, ಬಜರಂಗದಳ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆ, ಗ್ಯಾರೇಜ್ ಸಂಪೂರ್ಣ ಬಂದ್ ಆಗಿದ್ದವು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್, ಹಿಂದೂ ಧರ್ಮದ ರಕ್ಷಣೆಗಾಗಿ ದೇಹದಲ್ಲಿ ಒಂದು ಹನಿ ರಕ್ತ ಇರುವುವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.ಕಾಶ್ಮೀರದ ಪೆಹಾಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆಯಾದ ನಂತರ ಈಗ ಮಂಗಳೂರಿನಲ್ಲಿ ಹಿಂದೂ ಯುವಕ ಸುಹಾಸ್ ಶೆಟ್ಟಿಯ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದವರು ಪಹಾಲ್ಗಾಂನಲ್ಲಿ ಹಿಂದೂಗಳ ದಾರುಣ ಹತ್ಯೆಯನ್ನು ಭದ್ರತಾ ಲೋಪ ಎನ್ನುತ್ತಾರೆ. ಈಗ ಮಂಗಳೂರಿನಲ್ಲಿ ಭದ್ರತಾ ಲೋಪ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಗೃಹ ಸಚಿವರು ಸುಹಾಸ್ ಶೆಟ್ಟಿನ್ನು ರೌಡಿಶೀಟರ್ ಎಂದು ಕರೆದಿದ್ದಾರೆ. ಪ್ರಸ್ತುತ ಕೊಲೆಯಾದ ಸುಹಾಸ್ ಶೆಟ್ಟಿ ಮನೆಗೆ ಸಚಿವರು ಭೇಟಿ ನೀಡಿಲ್ಲ, ಪರಿಹಾರ ಸಹ ನೀಡಿಲ್ಲ. ಶಿವಮೊಗ್ಗ, ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಹಿಂದೂಗಳ ಮೇಲೆ ಹಲ್ಲೆಯಾದಾಗ ಅರೋಪಿಗಳನ್ನು ಅಮಾಯಕರು ಎಂದು ಮುಖ್ಟಮಂತಿಗಳು, ಗೃಹ ಸಚಿವರು ಬಣ್ಣನೆ ಮಾಡುತ್ತಾರೆ. ಕಾಶ್ಮೀರದಲ್ಲಿ ಕೊಲೆಯಾದವರು ಹಿಂದೂಗಳು ಎನ್ನದೆ ಪ್ರವಾಸಿಗರು ಎನ್ನುತ್ತಾರೆ. ಅವರು ಹಿಂದೂಗಳು ಎಂದಿದ್ದಕ್ಕೆ ಕೊಲೆಯಾಗಿದ್ದಾರೆ. ಶೃಂಗೇರಿ ಶ್ರೀ ಮಠದಿಂದ ಕಾಶ್ಮೀರದಲ್ಲಿ ಕೊಲೆಯಾದ ಎಲ್ಲಾ 22 ಜನರ ಕುಟುಂಬದವರಿಗೂ 2 ಲಕ್ಷ ರು. ಪರಿಹಾರ ನೀಡಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಯ ಪ್ರಕರಣದ ಸತ್ಯ ಹೊರ ಬರಬೇಕಾದರೆ ಈ ಪ್ರಕರಣವನ್ನು ಎನ್‌ಐಎನಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.ಮಾಜಿ ಸಚಿವ ಡಿ.ಎನ್.ಜೀವರಾಜ್, ವಿಶ್ವ ಹಿಂದೂ ಪರಿಷತ್ ಮುಖಂಡ ಮೂಡಬಾಗಿಲು ಸಚಿನ್, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೋಣನಕೆರೆ ಸತ್ಯನಾರಾಯಣ, ಜಿಲ್ಲಾ ಸಹ ಕಾರ್ಯದರ್ಶಿ ಮದನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಡಿಗೇಶ್ವರ ಅಭಿಷೇಕ್, ತಾ.ಕಾರ್ಯದರ್ಶಿ ಅರುಣಕುಮಾರ್ ಜೈನ್, ತಾ.ಬಿಜೆಪಿ ಅಧ್ಯಕ್ಷ ನೀಲೇಶ್, ತಾ.ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಪ್ರೀತಂ, ನಗರ ಅಧ್ಯಕ್ಷ ಸುರಭಿ ರಾಜೇಂದ್ರ, ತಾ.ವಕ್ತಾರ ಎನ್.ಎಂ.ಕಾಂತರಾಜ್, ಬಿಜೆಪಿ ಮುಖಂಡರಾದ ಅರುಣಕುಮಾರ್, ಆಶೀಶ್ ಕುಮಾರ್, ಕೆಸವಿ ಮಂಜುನಾಥ್, ಮಂಜುನಾಥ್ ಲಾಡ್, ಎ.ಬಿ.ಮಂಜುನಾಥ್, ಎನ್.ಡಿ.ಪ್ರಸಾದ್, ಎಚ್.ಡಿ.ಲೋಕೇಶ್, ಶ್ರೀನಾಥ್, ಕೈಮರ ರಾಜೇಂದ್ರ ಕುಮಾರ್, ಅಶ್ವನ್, ನಾ.ಮ.ನಾಗೇಶ್, ಅವಿನಾಶ್, ಪ್ರಸನ್ನ ಮತ್ತಿತರರು ಇದ್ದರು.
ಸಂಪೂರ್ಣ್ ಬಂದ್ಎನ್ಆರ್ ಪುರದಲ್ಲಿ ನಡೆಸಿದ ಬಂದ್ ಯಶಸ್ವಿಯಾಗಿದೆ. ಆಟೋ ರಿಕ್ಷಾ ಬೀದಿಗಿಳಿಯಲಿಲ್ಲ. ಬಸ್ಸುಗಳು ವಿರಳವಾಗಿ ಓಡಾಡಿದವು. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಸರ್ಕಾರಿ ಕಚೇರಿಗಳು ತೆರೆದಿದ್ದವು. ಬ್ಯಾಂಕ್ ಗಳು ಅರ್ಧ ಬಾಗಿಲು ಹಾಕಿ ವ್ಯವಹಾರ ಮಾಡಿದರು. ಮೆಡಿಕಲ್ ಶಾಪ್, ಆಸ್ಪತ್ರೆ, ಅಂಚೆ ಕಚೇರಿ ಎಂದಿನಂತೆ ತೆರೆದಿದ್ದವು. ಕಾರು, ಬೈಕ್ ಗಳು ಓಡಾಟ ನಡೆಸಿದವು.