ಕರವೇ ಪ್ರವೀಣ್ ಶಟ್ಟಿ ಬಣದ ಅಧ್ಯಕ್ಷ ವಿ.ಎಸ್. ಬೋಜೇಗೌಡ ಮಾತನಾಡಿ, ದಿಢೀರನೆ ಬಂದ್ ನಡೆಸುವುದಕ್ಕಿಂತ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುವುದು ಸೂಕ್ತ. ಮೊದಲು ಶಾಸಕರ ಮನೆ ಮುಂದೆ ಸಾಂಕೇತಿಕ ಧರಣಿ ನಡೆಸಿ, ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕು. ಇದಕ್ಕೂ ಸ್ಪಂದನೆ ದೊರೆಯದಿದ್ದರೆ ಬೇಲೂರು ಬಂದ್ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಆನೆ- ಮಾನವ ಸಂಘರ್ಷಕ್ಕೆ ಪರಿಹಾರ, ಬಗರ್ ಹುಕುಂ ಸಮಸ್ಯೆ, ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಸೆಪ್ಟೆಂಬರ್ 17ರ ಗುರುವಾರ ಬೇಲೂರು ತಾಲೂಕು ಬಂದ್ ಗೆ ಕರೆ ನೀಡಲಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತರು ಹಾಗೂ ವಿವಿಧ ಸಂಘಟನೆಗಳ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆ ಹಾಗೂ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಇದರ ಜೊತೆಗೆ ಬಗರ್ ಹುಕುಂ ಸಮಸ್ಯೆಯೂ ರೈತರನ್ನು ಕಾಡುತ್ತಿದೆ. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳ ನಡುವೆಯೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಬೇಲೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು ಸೇರಿ ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್ 17ರ ಗುರುವಾರ ಬೇಲೂರು ಬಂದ್ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬಂದ್ ನಡೆಸಿದ ಬಳಿಕವೂ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯಲು ಮುಂದಿನ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಸೇರಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ಮಲೆನಾಡು ಭಾಗದಲ್ಲಿ ಮಳೆ ಕೊರತೆಯಿಂದ ಜೋಳ ಸೇರಿ ವಿವಿಧ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಜೋಳದ ಬೆಳೆ ಬಹುತೇಕ ನಾಶವಾಗಿದ್ದು, ರೈತರು ಮಾಡಿರುವ ಬಂಡವಾಳವೂ ವಾಪಸ್ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಇಲ್ಲಿಯೇ ಪ್ರತಿಭಟನೆ, ಬಂದ್ ನಡೆಸುವುದರಿಂದ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಗಮನವನ್ನು ನೇರವಾಗಿ ಸೆಳೆಯುವಂತೆ ಹೋರಾಟ ರೂಪಿಸಬೇಕು. ಉಸ್ತುವಾರಿ ಸಚಿವರು ಇರುವ ಸ್ಥಳದಲ್ಲೇ ಸಭೆ ನಡೆಸಿ, ಬೇಲೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಡ ಹೇರಬೇಕು ಎಂದರು.ಡಾ. ರಾಜಕುಮಾರ್ ಸಂಘದ ಅಧ್ಯಕ್ಷ ಬಿ.ಆರ್. ತೀರ್ಥಂಕರ್ ಮಾತನಾಡಿ, ಬೇಲೂರು ತಾಲೂಕಿನ ರೈತರನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಕಾರಣವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಹೋರಾಟ ಆರಂಭಿಸಿದ ಬಳಿಕ ಜಿಲ್ಲಾಧಿಕಾರಿ ಅಥವಾ ಸಂಬಂಧಿಸಿದ ಸಚಿವರು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕರವೇ ಪ್ರವೀಣ್ ಶಟ್ಟಿ ಬಣದ ಅಧ್ಯಕ್ಷ ವಿ.ಎಸ್. ಬೋಜೇಗೌಡ ಮಾತನಾಡಿ, ದಿಢೀರನೆ ಬಂದ್ ನಡೆಸುವುದಕ್ಕಿಂತ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುವ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುವುದು ಸೂಕ್ತ. ಮೊದಲು ಶಾಸಕರ ಮನೆ ಮುಂದೆ ಸಾಂಕೇತಿಕ ಧರಣಿ ನಡೆಸಿ, ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕು. ಇದಕ್ಕೂ ಸ್ಪಂದನೆ ದೊರೆಯದಿದ್ದರೆ ಬೇಲೂರು ಬಂದ್ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಗಿರಿಯಪ್ಪ ಶೆಟ್ಟಿ, ಮುಖಂಡರಾದ ಬಸವರಾಜು, ಸಿದ್ದೇಗೌಡ, ಕರವೇ ಕಾರ್ಯದರ್ಶಿ ಖಾದರ್, ಸಮದ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಜಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರೈತ ಮುಖಂಡರು ಇದ್ದರು.