ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆ.ಬೆಟ್ಟಹಳ್ಳಿಯ ಪ್ರಸಿದ್ಧ ಶ್ರೀಲಕ್ಷ್ಮಿದೇವಿಯ ಬಂಡಿ ಉತ್ಸವದ ಜಾತ್ರಾ ಮಹೋತ್ಸವ ಬುಧವಾರ ಸಾವಿರಾರು ಭಕ್ತ ಸಮೂಹದಲ್ಲಿ ವಿಜೃಂಭಣೆಯಿಂದ ನಡೆಯಿತು.

ಹಾರೋಹಳ್ಳಿ-ಶಂಭೂವಿನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕರೆ ಗ್ರಾಮದ ಎತ್ತಿನ ಬಂಡಿಗಳ ಉತ್ಸವಗಳು ಪಾಲ್ಗೊಂಡಿದ್ದವು. ಈ ವೇಳೆ ನೂರಾರು ಭಕ್ತರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಕೆ.ಬೆಟ್ಟಹಳ್ಳಿಯ ಬಂಡಿಉತ್ಸವಕ್ಕೆ ಹಾರೋಹಳ್ಳಿ, ಶಂಭೂನಹಳ್ಳಿ, ಡಾಮಡಹಳ್ಳಿ, ಹುಲ್ಕೆರೆ, ಹುಲ್ಕೆರೆಕೊಪ್ಪಲು, ಶ್ಯಾದನಹಳ್ಳಿ, ಎಂ.ಬೆಟ್ಟಹಳ್ಳಿ, ಚಾಗಶೆಟ್ಟಹಳ್ಳಿ, ವಡ್ಡರಹಳ್ಳಿ, ಹರವು, ಅರಳಕುಪ್ಪೆ ಗ್ರಾಮಗಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಮಂಗಳವಾರ ರಾತ್ರಿಯೇ ಹಣ್ಣಿನ ಹೆಡಿಗೆಗಳನ್ನು ಎತ್ತಿನ ಬಂಡಿ ಮೂಲಕ ಆಯಾ ಗ್ರಾಮಸ್ಥರು ಶ್ರೀಲಕ್ಷ್ಮಿದೇವಿ ದೇವಸ್ಥಾನಕ್ಕೆ ತಂದು ಪದ್ಧತಿಯಂತೆ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಎತ್ತಿನ ಬಂಡಿಯಲ್ಲಿ ಭಕ್ತರು ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಎತ್ತಿನ ಬಂಡಿಯಲ್ಲಿ ತರಲಾಗಿದ್ದ ಹೂ, ಹಣ್ಣುಗಳನ್ನು ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನೂರಾರು ಭಕ್ತರು ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು.


ಬುಧವಾರ ಜಾತ್ರೆ ಅಂಗವಾಗಿ ಲಕ್ಷ್ಮಿದೇವಿ ದೇವಸ್ಥಾನದ ಎದುರು ಅಪಾರ ಜನಸ್ತೋಮ ಭಾಗವಹಿಸಿತ್ತು. ದೇವರ ಪೂಜೆಗಳನ್ನು ಹೊತ್ತು ದೇವಸ್ಥಾನದ ಸುತ್ತ ಮೆರವಣಿಗೆ ನಡೆಸುವಾಗ ಭಕ್ತರು ಹಣ್ಣು ಜವನಗಳನ್ನು ದೇವರಿಗೆ ಸರ್ಮಪಿಸಿ ಹಣ್ಣು ಪೂಜೆ ಪುನಸ್ಕಾರ ಸಲ್ಲಿಸಿದರು.

ಹೂ ಹೊಂಬಾಳೆಯಿಂದ ಸಿದ್ದಗೊಂಡಿದ್ದ ಐದು ಗ್ರಾಮಗಳ ‘ಕನ್ನಂಕಾಡಿ’ ಹಾಗೂ ‘ಪೂಜೆ ಕುಣಿತ’ಗಳು ಮೆರವಣಿಗೆಯಲ್ಲಿ ಸಾಗಿದ್ದವು. ಈರ ಮಕ್ಕಳು ಹಾಗೂ ದೇವರಗುಡ್ಡರುಗಳು ಚಕ್ರಬಳೆ ಬಡಿದು ಒಲಿದು ಬಾರೆ ಒಲಿದು ಬಾರೆ ತಾಯಿಲಕ್ಷ್ಮಿದೇವಿ ಒಲಿದು ಬಾರೆ......’ ಎಂದು ಹಾಡಿ ಓಲೈಸಿದರು. ಇದರೊಂದಿಗೆ ಗೊರವರ ಕುಣಿತ, ತಮಟೆಯ ಮೇಳಗಳು ಮೇಳೈಸಿದವು. ಹರಕೆ ಹೊತ್ತ ಹೆಣ್ಣುಮಕ್ಕಳು ಬಾಯಿಬೀಗ ಹಾಕಿಸಿಕೊಂಡು ದೇವಸ್ಥಾನದ ಸುತ್ತಸುತ್ತಿ ಭಕ್ತಿ ಪ್ರದರ್ಶಿಸಿದರು.

ಪೂಜಾಕುಣಿತ, ಪೂಜಾ ವಿಧಾನಗಳು ಮುಗಿಯುತ್ತಿದ್ದಂತೆಯೇ ಜಾತ್ರೆಯ ಮುಖ್ಯಭಾಗ ಎತ್ತಿನ ಬಂಡಿ ಉತ್ಸವವನ್ನು ದೇವರ ಗುಡ್ಡರು ಮುನ್ನಡೆಸಿದಾಗ ಯುವಕರು ಪಟಾಕಿ ಸಿಡಿಸಿ ಊಘೇ ಊಘೇ ಎಂದು ಕೂಗಿ ಪುಸಲಾಯಿಸಿದರು. ಎತ್ತುಗಳನ್ನು ಬಂಡಿಯನ್ನು ಹೊತ್ತು ಲಕ್ಷ್ಮೀದೇವಿ ದೇವಸ್ಥಾನದ ಸುತ್ತ ಮೂರು ಸುತ್ತಿದವು.

ಬಂಡಿ ಉತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿ ಸುತ್ತಲೂ ಪೊಲೀಸರು ಹಗ್ಗದಿಂದ ಜನರನ್ನು ತಡೆಹಿಡಿದು ನಿಯಂತ್ರಿಸಿದರು. ಇದರ ನಡುವೆಯೂ ಸಹ ಭಕ್ತರು ಮುನ್ನುಗ್ಗಿ ಬಂಡಿ ಉತ್ಸವವನ್ನು ನೋಡಲು ಮುಗಿಬಿದ್ದರು.