ರಾಜ್ಯ ಸರ್ಕಾರ ಉಳುಮೆ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಎನ್ಒಸಿ ಕೊಡಿಸಲು ವಿಫಲವಾಗಿದೆ. ಶಾಸಕರು ಕೂಡ ರೈತರ ಈ ವಿಚಾರದಲ್ಲಿ ಗಟ್ಟಿ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಕಳೆದ ೭ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರ ಭೂಮಿಗೆ ಬಂಡೀಪುರ ಅರಣ್ಯ ಇಲಾಖೆ ಎನ್ಒಸಿ ಕೊಡುತ್ತಿಲ್ಲದ ಕಾರಣ ನ.೨೦ ರಂದು ಬಂಡೀಪುರ ಸಫಾರಿ ಬಂದ್ ಮಾಡುತ್ತೇವೆ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಮಲ್ಲಯ್ಯನಪುರ ಎಚ್ಚರಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕಳೆದ ೮೬ ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.೨೦ರ ಶುಕ್ರವಾರ ರಾತ್ರಿ ೯ ಗಂಟೆಯಿಂದ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿ ಸಫಾರಿ ಬಂದ್ ಮಾಡಲು ರೈತಸಂಘ ನಿರ್ಧರಿಸಿರುವುದಾಗಿ ಎಚ್ಚರಿಸಿದದರು.
ರಾಜ್ಯ ಸರ್ಕಾರ ಉಳುಮೆ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಎನ್ಒಸಿ ಕೊಡಿಸಲು ವಿಫಲವಾಗಿದೆ. ಶಾಸಕರು ಕೂಡ ರೈತರ ಈ ವಿಚಾರದಲ್ಲಿ ಗಟ್ಟಿ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.ರೈತರಿಗೆ ಅರಣ್ಯ ಇಲಾಖೆ ಎನ್ಒಸಿ ಕೊಡುವತನಕ ಸಫಾರಿ ನಡೆಸಲು ಬಿಡುವುದಿಲ್ಲ ಎಂದು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು. ಸಾಗುವಳಿಗೆ ಅರಣ್ಯ ಇಲಾಖೆ ಎನ್ಒಸಿ ನೀಡದಿರುವುದೇ ಕಾರಣವಾಗಿರುವ ಹಿನ್ನೆಲೆ ಇನ್ಮುಂದೆ ರೈತರು ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಹೇಳಿದರು.
ಅಂಕಿ-ಅಂಶ ಕೊಡುತ್ತಿಲ್ಲ: ೧೦ ಸಾವಿರಕ್ಕೂ ಅಧಿಕ ಅರ್ಜಿಗಳಿವೆ. ಆದರೆ ಅಧಿಕಾರಿಗಳು ಒಂದು ಬಾರಿ ೬೦-೭೦ ಅಂತಾರೆ. ಇನ್ನೊಂದು ಬಾರಿ ೧೭೮ ಇವೆ ಅಂತಾರೆ. ಎನ್ಒಸಿ ಕೊಡುವುದಕ್ಕೆ ೩ ಸಾವಿರ ಅರ್ಜಿ ತಿರಸ್ಕೃತಗೊಂಡಿವೆ ಎನ್ನುತ್ತಾರೆ. ಇನ್ನುಳಿದ ೮ ಸಾವಿರ ಅರ್ಜಿಗಳಿಗೆ ಎನ್ಒಸಿ ಕೊಡಬೇಕು. ಆದರೆ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಹೇಳಿದರು.ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಪ್ರತಿಭಟನಾ ಸ್ಥಳಕ್ಕೆ ಸೌಜನ್ಯಕ್ಕೂ ಬಂದಿಲ್ಲ. ರೈತರ ಪ್ರತಿಭಟನೆ ನಡೆಸುವ ವಿಚಾರ ಅಧಿಕಾರಿಗಳಿಗೆ ಗೊತ್ತಿದೆಯೋ ಇಲ್ಲವೋ ಎಂದು ಬೇಸರ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ಮುಖಂಡರಾದ ಮಹದೇವಪ್ರಸಾದ್, ರಾಜಶೇಖರ್, ಕುಮಾರ್, ಚಂದ್ರು, ಗಂಗಾಧರ್, ಅರುಣ್ ಇತರರು ಪಾಲ್ಗೊಂಡಿದ್ದರು.
ಕೆರೆ ನೀರಲ್ಲೂ ವಿಫಲ: ರೈತಸಂಘಗುಂಡ್ಲುಪೇಟೆ: ತಾಲೂಕಿನ ಕೆರೆ ನೀರಿನ ವಿಚಾರದಲ್ಲೂ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಆರೋಪಿಸಿದರು.
ಸ್ಥಳೀಯ ಶಾಸಕರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದ್ದರು. ಆದರೆ ಗಾಂಧಿ ಗ್ರಾಮದ ಕೆರೆಗಳಿಗೂ ನೀರು ಬಿಟ್ಟಿಲ್ಲ. ಆಲಂಬೂರು ೩ ಮತ್ತು ೪ ನೇ ಹಂತದ ಕೆರೆಗಳಿಗೆ ಪೈಪ್ಲೈನ್ ಆಗುತ್ತದೆ, ಡಿಸೆಂಬರ್ ಮೊದಲ ವಾರದಲ್ಲಿ ಕೆರೆಗೆ ನೀರು ಬಿಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ರೈತಸಂಘ ಕಾದು ನೋಡುತ್ತದೆ ಎಂದು ತಿಳಿಸಿದರು. ಈ ವಿಚಾರದಲ್ಲೂ ಕೂಡ ಶಾಸಕರು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಜಿಲ್ಲಾಡಳಿತ ಏನೂ ಕೆಲಸವನ್ನೇ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.