- ಸಫಾರಿಗೆ ಶೇ.50ರಷ್ಟು ವಾಹನಗಳ ಮಾತ್ರ ಬಳಕೆ । ಟ್ರಿಪ್‌ಗಳ ಸಂಖ್ಯೆಯೂ ಶೇ.50ರಷ್ಟು ಕಟ್‌ । ಬೆಳಗ್ಗೆ, ಸಂಜೆ ತಲಾ ಒಂದೊಂದೇ ಟ್ರಿಪ್‌

---ಹೊಸ ಆದೇಶದ ಪ್ರಕಾರ ಬೆಳಗ್ಗೆ ಹಾಗೂ ಸಂಜೆ ಮಾತ್ರ 1 ಟ್ರಿಪ್‌ ಸಫಾರಿ ನಡೆಯಲಿದ್ದು, ಶೇ.50ರಷ್ಟು ವಾಹನಗಳಿಗೆ ಅವಕಾಶ ಮಾಡಿದ್ದೇವೆ.

- ಬಿ.ಎಂ. ಮಲ್ಲೇಶ್‌, ವಲಯ ಅರಣ್ಯಾಧಿಕಾರಿ

---

ಏನೇನು ಬದಲಾವಣೆ?


ಬೆಳಗ್ಗೆ ಮತ್ತು ಸಂಜೆ ತಲಾ 2 ಟ್ರಿಪ್‌ಗಳ ಬದಲಿಗೆ 1 ಟ್ರಿಪ್‌

31 ವಾಹನಗಳ ಬದಲಿಗೆ 15 ಮಾತ್ರ ಸಫಾರಿಗೆ ಪ್ರವೇಶ

ಆದೇಶಪತ್ರ ಸೇರಲು ತಡವಾಗಿದ್ದಕ್ಕೆ ಸಫಾರಿ 1 ದಿನ ಲೇಟ್‌

ಬೆಳಗ್ಗೆ 6.30 ಗಂಟೆಗೆ, ಮಧ್ಯಾಹ್ನ 3.30 ಗಂಟೆಗೆ ಸಫಾರಿ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸತತ 107 ದಿನಗಳ ಕಾಲ ಬಂದ್‌ ಆಗಿದ್ದ ಬಂಡೀಪುರ ಸಫಾರಿ ಪುನಾರಂಭಕ್ಕೆ ಮುಹೂರ್ತ ಕೂಡಿಬಂದಿದ್ದು, ಹೊಸ ಆದೇಶದ ಪ್ರಕಾರ ಶನಿವಾರ (ಫೆ.21) ಬದಲು ಭಾನುವಾರ (ಫೆ.22ಕ್ಕೆ) ಶುರುವಾಗಲಿದೆ. ಹೊಸ ಆದೇಶದ ಅನ್ವಯ ಬೆಳಗ್ಗೆ ಮತ್ತು ಸಂಜೆ ತಲಾ 1 ಟ್ರಿಪ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಬಂಡೀಪುರ ಸಫಾರಿಯಲ್ಲಿ 107 ದಿನಗಳ ಹಿಂದೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತಲಾ 2 ಟ್ರಿಪ್‌ಗೆ ಅರಣ್ಯ ಇಲಾಖೆಯ ೧೯ ವಾಹನ, ಜೆಎಲ್‌ಆರ್‌ನ 12 ವಾಹನಗಳು ಸಂಚರಿಸುತ್ತಿದ್ದವು.

ಆದರೀಗ ಫೆ.21ರ ಹೊಸ ಆದೇಶದ ಪ್ರಕಾರ ಪ್ರತಿ ದಿನ ಬೆಳಗ್ಗೆ 6.30 ಹಾಗೂ ಮಧ್ಯಾಹ್ನ 3.30ಕ್ಕೆ ತಲಾ 1 ಟ್ರಿಪ್‌ ಸಫಾರಿಗೆ ಅವಕಾಶ ಸಿಕ್ಕಿದೆ. ಅರಣ್ಯ ಇಲಾಖೆಯ 9 ವಾಹನ, ಜೆಎಲ್‌ಆರ್‌ನ 6 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಹೊಸ ಆದೇಶ ಹೀಗಿದೆ?

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್‌ ಪುಷ್ಕರ್‌ ಅವರು ಶನಿವಾರವೇ ಬಂಡೀಪುರದಲ್ಲಿ ಸಫಾರಿ ಪುನಾರಂಭಕ್ಕೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಕಲಂ 28ರಲ್ಲಿ ಅನುಮತಿಸಿದ್ದರೂ, ಆದೇಶದ ಪ್ರತಿ ಬಂಡೀಪುರ ಅರಣ್ಯ ಇಲಾಖೆಗೆ ಶನಿವಾರ (ಫೆ.22) ತಲುಪಿದ ಹಿನ್ನಲೆ ಭಾನುವಾರ ಸಫಾರಿ ಆರಂಭವಾಗಲಿದೆ.

ಫೆ.21ರಂದು ಮೈಸೂರಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಮೈಸೂರು, ಚಾಮರಾಜನಗರ, ಕೊಡಗು ವಿಭಾಗದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕೆಲ ಷರತ್ತುಗಳನ್ನು ವಿಧಿಸಿ ಕಟ್ಟುನಿಟ್ಟಾಗಿ ಸಫಾರಿ ಆರಂಭಿಸಲು ಸೂಚನೆ ಹೊರಡಿಸಿದ್ದರು.

೧೦೭ ದಿನ ಸ್ಥಗಿತ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿ 4 ಮಂದಿ ರೈತರು ಸಾವನ್ನಪ್ಪಿದ ಹಿನ್ನಲೆ ರಾಜ್ಯ ಸರ್ಕಾರ ಕಳೆದ ವರ್ಷ ನ.7ರಂದು ತಾತ್ಕಾಲಿಕವಾಗಿ ಸಫಾರಿ ಸ್ಥಗಿತಗೊಳಿಸಿತ್ತು.

---

ಸಫಾರಿ ಆರಂಭಕ್ಕೆ ಷರತ್ತುಗಳಿವು!

೧. ಸುಪ್ರೀಂ ಕೋರ್ಟ್‌ನ ಸಫಾರಿ ಕುರಿತ ಆದೇಶ ಕಡ್ಡಾಯ ಪಾಲನೆ

೨. ವನ್ಯಜೀವಿ/ ಹುಲಿ ಪ್ರಾಧಿಕಾರ ಮಾರ್ಗಸೂಚಿಗಳ ಪಾಲಿಸುವುದು

೩. ಸಫಾರಿಯ ಆದಾಯದಲ್ಲಿ ಶೇ.35ರಷ್ಟು ಜನ ಕಲ್ಯಾಣಕ್ಕೆ ಬಳಕೆ

೪. ಮಾನವ-ಮೃಗ ಸಂಘರ್ಷ ತಡೆಗೆ ಸಮರ್ಪಕ ಕ್ರಮ ಕೈಗೊಳ್ಳುವಿಕೆ

೫. 2 ತಿಂಗಳಲ್ಲಿ ವಾಹನಗಳಿಗೆ ಜಿಪಿಎಸ್‌, ಡ್ಯಾಷ್‌ ಕ್ಯಾಂ ಅಳವಡಿಕೆ

೬. ಸಫಾರಿಯಲ್ಲಿ ಬಳಸುತ್ತಿದ್ದ ವಾಹನಗಳ ಪೈಕಿ ಶೇ.50ರಷ್ಟು ಸಫಾರಿಗೆ

7. ಶೇ.50ರಷ್ಟು ಮಾನವ-ಪ್ರಾಣಿ ಸಂಘರ್ಷ, ಕಾಡ್ಗಿಚ್ಚು ತಡೆಗೆ ಮೀಸಲು

8. ಸಫಾರಿ ವಾಹನಗಳ ಪೈಕಿ ಆದ್ಯತೆಯಲ್ಲಿ ಬಸ್ಸುಗಳನ್ನೇ ಬಳಸತಕ್ಕದ್ದು

---