ಪ್ರತಿ ವರ್ಷಾಂತ್ಯ ಹಾಗೂ ಆರಂಭದ ವಾರಗಳಲ್ಲಿ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ, ಸಂಜೆ ಸಮಯದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ, ವನ್ಯಜೀವಿ ಸಂಘರ್ಷದ ಹಿನ್ನೆಲೆ ಬಂಡೀಪುರ ಸಫಾರಿ ಸ್ಥಗಿತಗೊಂಡು ೭೫ ದಿನಗಳಾದವು. ೨೦೨೫ ಕಳೆದು ಹೋಗಿ ೨೦ ದಿನಗಳು ಕಳೆದರೂ ಸಫಾರಿ ಇನ್ನೂ ಆರಂಭವಾಗಿಲ್ಲ.

೨೦೨೬ ಹೊಸ ವರ್ಷದ ಶುರುವಿನಲ್ಲಿ ಸಫಾರಿ ಆರಂಭವಾಗುತ್ತದೆ ಎಂದು ನಂಬಿದ್ದ ರೆಸಾರ್ಟ್‌, ಹೋಟೆಲ್‌ ಮಾಲೀಕರು ಹಾಗೂ ಬಂಡೀಪುರ ಅರಣ್ಯ ಇಲಾಖೆಗೆ ನಿರಾಸೆ ತರಿಸಿರುವುದಂತೂ ಸುಳ್ಳಲ್ಲ . ಹೊಸ ವರ್ಷದಲ್ಲಾದರೂ ೨೦೨೫ರ ಸಂಕಷ್ಟದ ದಿನಗಳನ್ನು ಮರೆಯಲು ಸಫಾರಿ ಆರಂಭವಾಗಬೇಕಿತ್ತು ಎಂಬ ಮಾತು ಸಾರ್ವಜನಿಕವಾಗಿ ಕೇಳಿ ಬಂದಿದೆ.

ಪ್ರತಿ ವರ್ಷಾಂತ್ಯ ಹಾಗೂ ಆರಂಭದ ವಾರಗಳಲ್ಲಿ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ, ಸಂಜೆ ಸಮಯದಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದೆ.

ವರ್ಷಾಂತ್ಯದಲ್ಲಿ ಪ್ರವಾಸಿಗರು ಬಂಡೀಪುರ ಸಫಾರಿಗೆ ದಾಂಗುಡಿ ಇಡುತ್ತಿದ್ದರು. ಪ್ರತಿ ನಿತ್ಯ ಲಕ್ಷಾಂತರ ರುಪಾಯಿ ಆದಾಯ ಸಫಾರಿಯಿಂದ ಅರಣ್ಯ ಇಲಾಖೆಗೆ ಬರುತ್ತಿತ್ತು. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ ಹಾಗೂ ನವೆಂಬರ್‌ ೬ ರೊಳಗೆ ಹುಲಿ ದಾಳಿಗೆ ನಾಲ್ಕು ಜನರು ಬಲಿಯಾದ ಹಿನ್ನೆಲೆ ಸಫಾರಿಯನ್ನು ಅರಣ್ಯ ಇಲಾಖೆ ನಿಲ್ಲಿಸಿತು.

ಸದಾ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಬಂಡೀಪುರ ಸಫಾರಿ ಕೇಂದ್ರ ಬಿಕೋ ಎನ್ನುತ್ತಿರುವ ಜೊತೆಗೆ ಅರಣ್ಯ ಇಲಾಖೆ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಪ್ರವಾಸೋದ್ಯಮ ನಂಬಿದ ರೆಸಾರ್ಟ್‌ ಹಾಗೂ ಹೋಟೆಲ್‌ಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ.

ವ್ಯಾಪಾರವೇ ಇಲ್ಲ:

ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಟೀ ಸ್ಟಾಲ್‌, ನಂದಿನಿ ಕ್ಷೀರ ಕೇಂದ್ರ, ಫುಡ್‌ ಚಾಟ್ಸ್‌, ಹಾಂಡಿ ಕ್ರಾಫ್ಟ್‌ ಹಾಗೂ ಇನ್ನಿತರೆ ವ್ಯಾಪಾರಿಗಳಿಗೆ ಪ್ರವಾಸಿಗರಿಲ್ಲದೇ ವಹಿವಾಟು ಇಲ್ಲದಂತಾಗಿದೆ. ಸಫಾರಿ ಕೇಂದ್ರದ ಮುಂದೆ ಹಾದು ಹೋಗುವ ಮೈಸೂರು- ಊಟಿ ಹೆದ್ದಾರಿ ಬದಿಯ ಅಂಗಡಿಗಳಿಗೆ ವ್ಯಾಪಾರ ಇಲ್ಲ. ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬರದ ಕಾರಣ ಎಲ್ಲೆಡೆ ಬಿಕೋ ಎನ್ನುತ್ತಿದೆ.ಸಫಾರಿಗೆ ಪರ, ವಿರೋಧ:

ಬಂಡೀಪುರ ಸಫಾರಿ ಕೇಂದ್ರ ಆರಂಭಿಸಲು ಹೋಟೆಲ್‌ ಹಾಗೂ ರೆಸಾರ್ಟ್‌ ಮಾಲೀಕರು ಸಚಿವ, ಶಾಸಕ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದೂ ಆಗಿದೆ. ಆದರೆ ರೈತ ಸಂಘಟನೆಗಳು ಮಾತ್ರ ಸಫಾರಿ ಕೇಂದ್ರ ಆರಂಭಿಸಬೇಡಿ ಎಂದು ಆಗ್ರಹಿಸಿವೆ.

ಇದರಿಂದ ಪ್ರವಾಸೋದ್ಯಮ ನಂಬಿದ ಹೋಟೆಲ್, ರೆಸಾರ್ಟ್‌, ಅಕ್ರಮ ಹಾಗೂ ಸಕ್ರಮ ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸಫಾರಿ ಬಂಡೀಪುರದಲ್ಲಿಲ್ಲ ಎಂಬ ಕಾರಣದಿಂದ ಪ್ರವಾಸಿಗರು ಬರುತ್ತಿಲ್ಲ ಎಂಬ ಕೊರಗು ಹೋಟೆಲ್‌ ಹಾಗೂ ರೆಸಾರ್ಟ್‌ ಮಾಲೀಕರಿಗಿದೆ.

ಆದಾಯ ಇಲ್ಲ: ಕಳೆದ ೭೫ ದಿನಗಳಿಂದ ಸಫಾರಿ ಸ್ಥಗಿತಗೊಂಡ ಕಾರಣ ಅರಣ್ಯ ಇಲಾಖೆಗೆ ಕನಿಷ್ಠ ಆರೇಳು ಕೋಟಿ ರುಪಾಯಿ ಆದಾಯ ನಷ್ಟವಾಗಿದೆ ಎಂದು ಹೆಸರೇಳಲಿಚ್ಛಿಸದ ಅರಣ್ಯ ಇಲಾಖೆ ಸಿಬ್ಬಂದಿಯೋರ್ವ ತಿಳಿಸಿದ್ದಾರೆ.

------

ಬಂಡೀಪುರ ಸಫಾರಿ ಸದ್ಯಕ್ಕೀಗ ಸ್ಥಗಿತಗೊಂಡು ೭೫ ದಿನಗಳಾಗಿದ್ದು, ಸಫಾರಿ ಮತ್ತೆ ಆರಂಭಿಸುವ ಸಂಬಂಧ ಅಧ್ಯಯನ ನಡೆಸಲು ತಜ್ಞರ ಸಮಿತಿ ಸಭೆ ನಡೆದಿದೆ. ಸಫಾರಿ ಆರಂಭ ಸಂಬಂಧ ಕೇಂದ್ರ ಕಚೇರಿಯಿಂದ ಮಾಹಿತಿ ಕೇಳಿತ್ತು. ಸಫಾರಿ ಕ್ಯಾರಿಂಗ್‌ ಕೆಪ್ಯಾಸಿಟಿ ಸಂಬಂಧ ಮಾಹಿತಿ ನೀಡಲಾಗಿದೆ.

ಎಸ್.ಪ್ರಭಾಕರನ್‌, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ