26ಕ್ಕೆ ಭೂಮಿ ಸತ್ಯಾಗ್ರಹಕ್ಕಾಗಿ ಬೆಂಗಳೂರು ಚಲೋ

| Published : Nov 20 2025, 01:00 AM IST

26ಕ್ಕೆ ಭೂಮಿ ಸತ್ಯಾಗ್ರಹಕ್ಕಾಗಿ ಬೆಂಗಳೂರು ಚಲೋ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಿಂದಲೂ ಸಾಕಷ್ಟು ಜನರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೊಸಪೇಟೆ: ಸಾಮಾಜಿಕ ನ್ಯಾಯವಾಗಿ ಭೂಮಿ ಹಕ್ಕು ನೀಡಲು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನ.26ರಂದು ಭೂಮಿ ಸತ್ಯಾಗ್ರಹಕ್ಕಾಗಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನೆ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ವಸತಿ ಹಕ್ಕಿಗಾಗಿ ಬಗರ್ ಹುಕುಂ ಸಾಗುವಳಿದಾರರಿಂದ ಇಡೀ ರಾಜ್ಯದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿ ಬೃಹತ್ ಹೋರಾಟ ನಡೆಸಲಾಗುವುದು. ಜಿಲ್ಲೆಯಿಂದಲೂ ಸಾಕಷ್ಟು ಜನರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸಪೇಟೆ ಭಾಗದ ವಿವಿಧ ಹಳ್ಳಿಗಳು ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜನರು ನ್ಯಾಯ ಕೊಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದರು.

ಜಿಲ್ಲೆಯ ಶಾಸಕರೇ ಈ ಸಮಿತಿಗೆ ಅಧ್ಯಕ್ಷರು, ಜನರಿಗೆ ನ್ಯಾಯ ಕೊಡಬೇಕೆಂಬ ಕಿಂಚಿತ್ತು ಕಾಳಜಿ ಇದ್ದರೆ ನೀವು ಪಟ್ಟಾ ಕೊಡಬೇಕು. ಈಗಾಗಲೇ ಸಾಗುವಳಿ ಮಾಡುತ್ತಿರುವ ಜನರ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು. ಬಿಜೆಪಿಯವರು ಮೋಸ ಮಾಡಿದ್ದಕ್ಕೆ ಕಾಂಗ್ರೆಸ್ ಗೆ ಜನರು ಅವಕಾಶ ನೀಡಿದ್ದಾರೆ. ಆದರೆ, ಇವರು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹೊಸಪೇಟೆಯ ಶಾಸಕರು ಕೂಡ ಮನೆಯಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಜನರ ಅಭಿವೃದ್ಧಿ ಕೆಲಸ ಮಾಡುವ ಇಚ್ಛಾಶಕ್ತಿ ಇರಬೇಕು ಎಂದು ಹೇಳಿದರು.

ವಸತಿ ರಹಿತರಿಗೆ ಮೆಗಾ ವಸತಿ ಯೋಜನೆ ಘೋಷಣೆಯಾಗಬೇಕು. ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ಧ ಹಕ್ಕು ಸಿಗಬೇಕು. ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಬೇಕು. ಇದಕ್ಕಾಗಿ ಸಾಗುವಳಿದಾರರು ಈ ಬಾರಿ ಗಟ್ಟಿಯಾಗಿ ನಿಂತು ಹೋರಾಟ ಮಾಡದಿದ್ದರೆ ಭೂಮಿ ಸಿಗುವುದಿಲ್ಲ. ಎಲ್ಲ ಜನರು ನಿಮ್ಮ ಭೂಮಿ, ವಸತಿಗಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಈ ಸರ್ಕಾರ ಮೋಸ ಮಾಡಲಿದೆ ಎಂದು ದೂರಿದರು.

ಮುಖಂಡ ಮಹೇಶ್ ದೇವರಮನಿ ಮಾತನಾಡಿ, ದಮನಿತ ಸಮುದಾಯವನ್ನು ಸ್ವಾವಲಂಬಿಗೊಳಿಸಲು ಸರ್ಕಾರ ಅವರಿಗೆ ಭೂಮಿ ಹಕ್ಕು ಕೊಡಬೇಕು. ಸಂವಿಧಾನ ಮತ್ತು ಇಂತಹ ವಿಷಯಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವಸಂತರಾಜ್ ಕಹಳೆ, ಬಾಣದ ಕೃಷ್ಣ, ಸಣ್ಣ ಮಾರೆಪ್ಪ, ಹಾರಕಬಾವಿ ತಿಪ್ಪೇಸ್ವಾಮಿ, ಬಾಣದ ಮಾರುತಿ, ಫಯಾಜ್ ಮತ್ತಿತರರಿದ್ದರು.