ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರದ ಕುರಿತು ಆಗಸ್ಟ್1ರಿಂದ 3ರ ವರೆಗೆ ನಗರದಲ್ಲಿ ‘ಬೆಂಗಳೂರು ಇಂಡಿಯಾ ನ್ಯಾನೋ’ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.ಸಮ್ಮೇಳನದ 13ನೇ ಆವೃತ್ತಿಯ ಕುರಿತು ಮಾಹಿತಿ ಹಂಚಿಕೊಂಡ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಜವಾಹರ್‌ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗಳು ಜಂಟಿಯಾಗಿ ಸಮ್ಮೇಳನ ಆಯೋಜಿಸಿವೆ. ಸುಸ್ಥಿರ ಅಭಿವೃದ್ಧಿ ಕುರಿತಾದ ಈ ಸಮ್ಮೇಳನದಲ್ಲಿ 25 ಚರ್ಚೆಗಳು, 75 ಭಾಷಣಕಾರರು, 200 ಪ್ರತಿನಿಧಿಗಳು, 6 ಜಿಐಎ ದೇಶಗಳು, 50 ಪ್ರದರ್ಶಕರು, 175 ಪೋಸ್ಟರ್‌ಗಳು ಮತ್ತು 2,500 ಆಸಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತಾಪಮಾನ ಹೆಚ್ಚಳ, ನೈಸರ್ಗಿಕ ವಿಕೋಪಗಳು, ಹವಾಮಾನ ಬದಲಾವಣೆ, ಬರಿದಾಗುತ್ತಿರುವ ಇಂಧನ ಮೂಲ ಮತ್ತು ಆರೋಗ್ಯ ಸಮಸ್ಯೆಗಳು ಇಂದು ಗಂಭೀರವಾಗಿ ಜಗತ್ತನ್ನು ಕಾಡುತ್ತಿವೆ. ಪರಿಸರ ಸಂರಕ್ಷಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಲೋಪ-ದೋಷಗಳು ಬಯಲಾಗಿವೆ. ಹೀಗಾಗಿ, ನಾವು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕು ಎಂದು ಸಚಿವ ಬೋಸರಾಜು ಹೇಳಿದರು.ನ್ಯಾನೊ ತಂತ್ರಜ್ಞಾನ ಗಾತ್ರ ಸಣ್ಣದಿದ್ದರೂ ದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗಲಿದೆ. ಸಂಶೋಧಕರು ಮತ್ತು ವಿಜ್ಞಾನಿಗಳು, ಶಿಕ್ಷಣ ತಜ್ಞರು, ಉದ್ಯಮದ ನಾಯಕರು, ನೀತಿ ನಿರೂಪಕರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ನಾಯಕರನ್ನು ಒಗ್ಗೂಡಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗುವ ಭರವಸೆ ಇದೆ ಎಂದು ಸಚಿವರು ಹೇಳಿದರು.
ಸಮ್ಮೇಳನದ ವಿಶೇಷತೆಗಳುನ್ಯಾನೊ ತಂತ್ರಜ್ಞಾನದಲ್ಲಿನ ಅತ್ಯಾಧುನಿಕ ಬೆಳವಣಿಗೆಗಳು, ಹವಾಮಾನ, ಇಂಧನ, ಆರೋಗ್ಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳಲ್ಲಿ ಪ್ರಗತಿಗಳ ಬಗ್ಗೆ ಪ್ರಮುಖ ಅಂಶಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ. ಐಐಎಸ್ಸಿ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖರು ಭಾಗವಹಿಸುತ್ತಾರೆ. ನ್ಯಾನೋ ಫ್ಯಾಬ್ರಿಕೇಶನ್, ನ್ಯಾನೊ ಕ್ಯಾರೆಕ್ಟರೈಸೇಶನ್ ಮತ್ತು ನ್ಯಾನೊ ಬಯಾಲಜಿ ಸೇರಿದಂತೆ ವಿವಿಧ ಪ್ರಮುಖ ವಿಷಯಗಳು ಕುರಿತು ಚರ್ಚೆಯಾಗಲಿದೆ. ನ್ಯಾನೋ ಫಾರ್ ದಿ ಯಂಗ್ ಪ್ರೋಗ್ರಾಂ ಕಾರ್ಯಕ್ರಮದಡಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ 175ಕ್ಕೂ ಹೆಚ್ಚು ಯುವ ಸಂಶೋಧಕರಿಗೆ ತಮ್ಮ ನವೀನ ಸಂಶೋಧನಾ ಪೋಸ್ಟರ್‌ಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಪ್ರಶಸ್ತಿ ಗೌರವಗಳುನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್‌ಗಳಿಂದ ಆಗಿರುವ ಇತ್ತೀಚಿನ ಆವಿಷ್ಕಾರಗಳು, ಉತ್ಪನ್ನಗಳು ಮತ್ತು ತಂತ್ರಜ್ಞಾನಗಳು, ಟೆಕ್ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಾಗುತ್ತದೆ. ಸಾಧಕರಿಗೆ ಪ್ರೊ. ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೊ ಸೈನ್ಸ್ ಅವಾರ್ಡ್’,‘ಬೆಂಗಳೂರು ಇಂಡಿಯಾ ನ್ಯಾನೊ ಇನ್ನೋವೇಶನ್ ಅವಾರ್ಡ್’ ನೀಡಲಾಗುತ್ತಿದೆ. ಇದಲ್ಲದೇ, ನ್ಯಾನೊ ಸೈನ್ಸ್ ವಿಭಾಗದಲ್ಲಿ ಅತ್ಯುತ್ತಮ ಸಂಶೋಧಕರಿಗೆ ನ್ಯಾನೊ ಎಕ್ಸಲೆನ್ಸ್ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.