ಸಾರಾಂಶ
15ಕ್ಕೂ ಹೆಚ್ಚು ಸಂಶೋಧನಾ ಕೃತಿಗಳು, ವಿಮರ್ಶಾ ಕೃತಿಗಳು, ಸಂಕಲನಗಳು ಹಾಗೂ ಸಂಪಾದನಾ ಕೃತಿಗಳನ್ನು ಹೊರತಂದಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿಯ ಸಹ ಸದಸ್ಯರನ್ನಾಗಿ ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಜಾನಪದ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಆರ್. ಚೇತನಾ ಅವರನ್ನು ನೇಮಕ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಕೆ.ಆರ್. ದುರ್ಗಾದಾಸ್ ಹೇಳಿದ್ದಾರೆ.ಡಾ.ಎಚ್.ಆರ್. ಚೇತನಾ ಅವರು ಸಂಶೋಧಕರಾಗಿ, ಬೋಧಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ ಜಾನಪದ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ
ನೀಡಿದ್ದಾರೆ. ಗ್ರಾಮಾಂತರಂಗ, ಕನ್ನಡದ ವೆರಿಯಾರ್ ಎಲ್ವಿನ್ ಎಚ್.ಎಲ್. ನಾಗೇಗೌಡ ಮುಂತಾದ ಕೃತಿಗಲನ್ನು ರಚಿಸಿ ಹೊರತಂದಿದ್ದಾರೆ.ಜಾನಪದ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕರ್ನಾಟಕದ ಜಾನಪದ ನೃತ್ಯಗಳು, ಸಮುದ್ರ ರಾಜನ ಮಗಳು ಮತ್ತು ಇತರ ಜನಪದ ಕಥೆಗಳು, ಹೆಳವರು ಹೇಳಿದ ಕರಿರಾಜನ ಕಥೆ, ಕುವೆಂಪು ಸಾಹಿತ್ಯದಲ್ಲಿ ಕುಟುಂಬ ಪರಿಕಲ್ಪನೆ, ಮೂಡಲಪಾಯ ಯಕ್ಷಗಾನ ಸೇರಿದಂತೆ 15ಕ್ಕೂ ಹೆಚ್ಚು ಸಂಶೋಧನಾ ಕೃತಿಗಳು, ವಿಮರ್ಶಾ ಕೃತಿಗಳು, ಸಂಕಲನಗಳು ಹಾಗೂ ಸಂಪಾದನಾ ಕೃತಿಗಳನ್ನು ಹೊರತಂದಿದ್ದಾರೆ. ಉತ್ತಮ ಸಂಘಟಕರಾದ ಇವರಿಗೆ ಅನೇಕ ಜಾನಪದ ಕಮ್ಮಟಗಳನ್ನು ನಡೆಸಿಕೊಟ್ಟ ಅನುಭವವಿದೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿ, ಡಾ. ಹಾಮಾನಾಯುವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.