ಸಾರಾಂಶ
-ಜನಸ್ಪಂದನಾ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ
-ಆಡಳಿತ ಯಂತ್ರ ದುರ್ಬಳಕೆ ಕನ್ನಡಪ್ರಭ ವಾರ್ತೆ ಚನ್ನಪಟ್ಟಣಚನ್ನಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರಿ ಸಂತೆಯಂತೆ ಜನಸ್ಪಂದನಾ ಸಭೆ ನಡೆಸಿದ್ದಾರೆ. ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಜನಸ್ಪಂದನಾ ಸಭೆ ನಡೆಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಯೋಜನೆ ಇಲ್ಲದೇ ಮಾಡಿರುವ ಕಾರ್ಯಕ್ರಮ ಇದಾಗಿದೆ. ಸರ್ಕಾರಿ ಯಂತ್ರ ಬಳಸಿಕೊಂಡು ಜನರಿಗೆ ಮನೆ ನಿವೇಶನದ ಆಸೆ ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಉಪಚುನಾವಣೆಗಾಗಿ ಜನಸ್ಪಂದನಾ ಸಭೆ:
ಕಳೆದ ಒಂದು ವರ್ಷದಿಂದ ಡಿ.ಕೆ.ಶಿವಕುಮಾರ್ ಒಂದು ಬಾರಿಯೂ ಚನ್ನಪಟ್ಟಣಕ್ಕೆ ಬರಲಿಲ್ಲ. ೪೦ ವರ್ಷಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ಸಾಕಷ್ಟು ಅಧಿಕಾರ ಅನುಭವಿಸಿರುವ ಡಿ.ಕೆ.ಶಿವಕುಮಾರ್‌ಗೆ ಆಗೆಲ್ಲ ಚನ್ನಪಟ್ಟಣದ ನೆನಪಾಗಲಿಲ್ಲ. ಚನ್ನಪಟ್ಟಣದ ಅಭಿವೃದ್ಧಿಗೆ ಡಿಕೆಶಿ ಕೊಡುಗೆ ಏನು ಇಲ್ಲ. ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಕುರಿತು ಕಾಳಜಿ ತೋರದ ಅವರಿಗೆ ಇದೀಗ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರೀತಿ ಮೂಡಿದೆ ಎಂದು ವ್ಯಂಗ್ಯವಾಡಿದರು.ಶಿಷ್ಟಾಚಾರ ಉಲ್ಲಂಘನೆ:
ಜನಸ್ಪಂದನಾ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ನೀಡದೇ ಒನ್‌ಮ್ಯಾನ್ ಶೋನಂತೆ ಡಿಕೆಶಿ ಸಭೆ ನಡೆಸುತ್ತಿದ್ದಾರೆ. ಎಲ್ಲ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಖರ್ಚಿನಲ್ಲಿ ಪಕ್ಷದ ಪ್ರಚಾರ ನಡೆಸಿದ್ದಾರೆ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಡೆಯದ ಜನಸ್ಪಂದನ ಚನ್ನಪಟ್ಟಣದಲ್ಲಿ ವಿಶೇಷವಾಗಿ ನಡೆಯುತ್ತಿರುವುದು ಯಾಕೆ ಎಂದು ಎಲ್ಲರಿಗೂ ಗೊತ್ತು. ಶಿಷ್ಟಾಚಾರ ಉಲ್ಲಂಘಿಸುವುದು ಮುಂದುವರಿಸಿದರೆ ಮುಂದಿನ ಬಾರಿ ವೇದಿಕೆಗೆ ನುಗ್ಗಿ ಪ್ರಶ್ನಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಚುನಾವಣೆಗಾಗಿ ಡ್ರಾಮಾ:ಡಿಕೆಶಿ ಜನರಿಗೆ ನಿವೇಶನ, ಮನೆ ನಿರ್ಮಿಸುವ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ಆಸೆ ತೋರಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮಾಗಡಿ, ರಾಮನಗರದಲ್ಲಿ ಕೂಪನ್ ಕೊಟ್ಟು ಗೆದ್ದರು. ಇದೀಗ ಅದೇ ರೀತಿ ಚನ್ನಪಟ್ಟಣದಲ್ಲಿ ಜನರ ಮಾಹಿತಿ ಸಂಗ್ರಹಿಸಿ ಜನರಿಗೆ ಆಸೆ ಆಮಿಶ ಒಡ್ಡುತ್ತಿದ್ದಾರೆ. ಡಿಕೆಶಿ ಅವರ ರಾಜಕೀಯವನ್ನು ಚನ್ನಪಟ್ಟಣ ಜನ ನೋಡಿದ್ದಾರೆ. ಅಷ್ಟು ಸುಲಭವಾಗಿ ಕ್ಷೇತ್ರದ ಜನ ನಂಬೋದಿಲ್ಲ. ಅವರ ಡ್ರಾಮಾವನ್ನು ನಾನು ಖಂಡಿಸುತ್ತೇನೆ ಎಂದರು.
ಡಿಕೆಶಿ ಸುಳ್ಳು ಹೇಳುವುದು ಬಿಡಲಿ:ಈಗ ಚನ್ನಪಟ್ಟಣದಲ್ಲಿ ಕುರ್ಚಿ ಖಾಲಿ ಇದೆ. ಆದ್ದರಿಂದ ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಸುಳ್ಳು ಹೇಳುತ್ತಿದ್ದಾರೆ. ಖಾಲಿಯಾಗಿರುವ ಹುದ್ದೆ ತುಂಬುವರು ಜನತೆ ಎಂಬುದು ಅವರಿಗೆ ಗೊತ್ತಿಲ್ಲವೇ? ಜನರಿಗೆ ಅರ್ಜಿ ಕೊಡಿ ನಿವೇಶನ ಕೊಡುತ್ತೇನೆ, ಮನೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಿಂದೆ ನಾನು ಮತ್ತು ಕುಮಾರಸ್ವಾಮಿ ಕಿತ್ತಾಡಿಕೊಂಡು ಚನ್ನಪಟ್ಟಣಕ್ಕೆ ಸಾವಿರಾರು ಮನೆಗಳನ್ನು ಮಂಜೂರು ಮಾಡಿಸಿದೆವು. ಆದರೆ, ನಾವ್ಯಾರು ಅರ್ಜಿ ಪಡೆಯಲಿಲ್ಲ. ಗ್ರಾಪಂ ಮೂಲಕ ಫಲಾನುಭವಿಗಳಿಗೆ ಹಂಚಿಕೆ ಮಾಡಿಸಿದೆವು. ಈ ರೀತಿ ಸುಳ್ಳು ಹೇಳುವುದನ್ನು ಬಿಟ್ಟು ನೇರವಾಗಿ ಗ್ರಾಪಂಗಳಿಗೆ ಹಣ ಬಿಡುಗಡೆ ಮಾಡಿಸಲಿ ಎಂದು ಆಗ್ರಹಿಸಿದರು.
ಡಿಕೆಶಿ ಸಾಕ್ಷಿಗುಡ್ಡೆ ಏನೂ ಇಲ್ಲ:ಚನ್ನಪಟ್ಟಣದಿಂದ ರಾಜಕಾರಣ ಆರಂಭಿಸಿದರೂ ಅವರು ಚನ್ನಪಟ್ಟಣಕ್ಕೆ ಏನೂ ಮಾಡಿಲ್ಲ. ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಸಾಕ್ಷಿಗುಡ್ಡೆ ಏನೂ ಇಲ್ಲ. ಕೇವಲ ಚುನಾವಣೆ ಸಮಯದಲ್ಲಿ ಬಂದು ಜಾತ್ರೆ ಮಾಡುತ್ತಿದ್ದಾರೆ. ಚನ್ನಪಟ್ಟಣದ ಗ್ರಾಮೀಣ ಭಾಗದಲ್ಲೂ ನಿವೇಶನದ ಕೊರತೆ ಇಲ್ಲ, ನಗರಪ್ರದೇಶದಲ್ಲಿ ಇದೆ. ಇದು ಚನ್ನಪಟ್ಟಣ ಮಾತ್ರವಲ್ಲ ರಾಜ್ಯದ ಎಲ್ಲಾ ಪಟ್ಟಣಗಳಲ್ಲೂ ಇದೆ. ನಿವೇಶನ ಹಂಚಿಕೆಗೆ ಸಾಕಷ್ಟು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಜಾಗ ಗುರುತಿಸಬೇಕಾಗುತ್ತದೆ. ಇದು ಎರಡುಮೂರು ತಿಂಗಳಲ್ಲಿ ನಡೆಯುವ ಕೆಲಸವಲ್ಲ ಸುಮ್ಮನ್ನೆ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡಬೇಡಿ ಎಂದು ಟೀಕಿಸಿದರು.
ಜಿಲ್ಲೆ ಹೆಸರು ಬದಲಾವಣೆಯಿಂದ ಪ್ರಯೋಜನವಿಲ್ಲ:
ರಾಮನಗರ ಜಿಲ್ಲೆ ರಚಿತವಾಗಿ ೧೮ ವರ್ಷವಾಗಿದ್ದು, ಜನರು ಜಿಲ್ಲೆಯ ಹೆಸರನ್ನು ಒಪ್ಪಿಕೊಂಡಿದ್ದಾರೆ. ಹಿಂದೆ ನಮ್ಮ ಜನ ತಮ್ಮ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಅಲೆದಾಡಬೇಕಿತ್ತು. ಜಿಲ್ಲೆಯಾದ ಮೇಲೆ ಎಲ್ಲ ಕಚೇರಿಗಳು ಇಲ್ಲೇ ಆರಂಭಗೊಂಡಿವೆ. ಬೆಂಗಳೂರಿನವರು ಎಂದರೆ ನಮಗೇನು ಕೋಡು ಮೂಡುವುದಿಲ್ಲ. ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇವೆ ಎನ್ನುವವರು ರಾಮನಗರ ಜಿಲ್ಲೆಯ ಕನಕಪುರದಿಂದ ಗೆದ್ದು ನಮ್ಮ ಜಿಲ್ಲೆಯ ಉಸ್ತುವಾರಿ ತೆಗೆದುಕೊಳ್ಳುವುದನ್ನು ಬಿಟ್ಟು ಬೆಂಗಳೂರು ಉಸ್ತುವಾರಿ ತೆಗೆದುಕೊಂಡಿದ್ದು ಯಾಕೆ ಎಂದು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಪ್ರಶ್ನಿಸಿದರು.ಉಪಚುನಾವಣೆ ವೇಳೆಗೆ ಸರ್ಕಾರವೇ ಇರಲ್ಲ: ಸಿಪಿವೈ
ಚನ್ನಪಟ್ಟಣ ಉಪಚುನಾವಣೆ ಘೋಷಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಆದರೆ, ಚುನಾವಣೆಯವರೆಗೆ ಸರ್ಕಾರ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಯೋಗೇಶ್ವರ್ ಮತ್ತೆ ಸರ್ಕಾರ ಪತನ ಕುರಿತು ಭವಿಷ್ಯ ನುಡಿದರು.
ಚನ್ನಪಟ್ಟಣಕ್ಕೆ ಬಂದರೆ ಇಲ್ಲಿಂದಲೇ ರಾಜಕೀಯ ಜೀವನ ಅಂತ್ಯವಾಗುತ್ತದೆ ಎಂದು ನಾನು ಡಿ.ಕೆ.ಶಿವಕುಮಾರ್‌ಗೆ ಮೊದಲೇ ಎಚ್ಚರಿಕೆ ನೀಡಿದ್ದೆ. ಇದೀಗ ಅವರ ಸರ್ಕಾರ ಕುಸಿಯುವ ಹಂತ ತಲುಪಿದೆ. ಸರ್ಕಾರದಲ್ಲಿ ಸಾಕಷ್ಟು ಗೊಂದಲ ಇದೆ. ವಾಲ್ಮೀಕಿ ನಿಗಮದ ಹಗರಣ, ಮೂಡಾ ಹಗರಣ ಹೀಗೆ ಸಾಕಷ್ಟು ಹಗರಣಗಳು ಬಯಲಿಗೆ ಬರುತ್ತಿವೆ. ಡಿ.ಕೆ.ಶಿವಕುಮಾರ್ ಅವರು ಎರಡೆರಡು ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಿಎಂ ಡಿಸಿಎಂ ಮಧ್ಯೆ ಸಹ ಆಂತರಿಕ ಸಮರವಿದೆ ಎಂದು ವಾಗ್ದಾಳಿ ನಡೆಸಿದರು.