ಶಿವಮೊಗ್ಗದಿಂದ-ಚೆನ್ನೈಗೆ ಶೀಘ್ರ ಹೊಸ ರೈಲು: ಸಂಸದ ಬಿ.ವೈ.ರಾಘವೇಂದ್ರ

| Published : Jul 06 2024, 12:49 AM IST

ಶಿವಮೊಗ್ಗದಿಂದ-ಚೆನ್ನೈಗೆ ಶೀಘ್ರ ಹೊಸ ರೈಲು: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗದಿಂದ ಚೆನ್ನೈಗೆ ಹೊಸ ರೈಲು ಮಂಜೂರಾಗಿದ್ದು, ಶೀಘ್ರದಲ್ಲೇ ಇದಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದಿಂದ ಚೆನ್ನೈಗೆ ಹೊಸ ರೈಲು ಮಂಜೂರಾಗಿದ್ದು, ಶೀಘ್ರದಲ್ಲೇ ಇದಕ್ಕೆ ಚಾಲನೆ ಕೂಡ ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರೈಲ್ವೆ ಸಚಿವ ಸರ್ಕಾರ ರಚನೆಯಾಗಿ ಒಂದು ತಿಂಗಳ ಒಳಗೆ ಶಿವಮೊಗ್ಗ – ಚೆನ್ನೈ ನಡುವೆ ಹೊಸ ರೈಲು ಮಂಜೂರು ಮಾಡಿದ್ದಾರೆ. ಈ ರೈಲು ಸಂಜೆ 4 ಗಂಟೆಗೆ ಶಿವಮೊಗ್ಗದಿಂದ ಹೊರಟು ಮರು ದಿನ ಬೆಳಗ್ಗಿನ ಜಾವ 4.45ಕ್ಕೆ ಚೆನ್ನೈ ತಲುಪಲಿದೆ. ಚೆನ್ನೈನಿಂದ ರಾತ್ರಿ 11.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 1ಕ್ಕೆ ಶಿವಮೊಗ್ಗ ತಲುಪಲಿದೆ ಎಂದು ತಿಳಿಸಿದರು.

ಜಿಲ್ಲೆಗೆ ಹೊಸ ರೈಲ್ವೆ ಸಂಪರ್ಕ ಮತ್ತು ಯೋಜನೆ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಮನವಿಗೆ ಸವಿವರಿಂದ ಪೂರಕ ಸ್ಪಂದನೆಯೂ ಸಿಕ್ಕಿದೆ. ಅದರಂತೆ ಶಿವಮೊಗ್ಗ – ಬೀರೂರು ಮಧ್ಯೆ 62 ಕಿ.ಮೀ. ರೈಲ್ವೆಮಾರ್ಗ ಡಬ್ಲಿಂಗ್‌ ಕಾರ್ಯಕ್ಕೆ ನೈಋತ್ಯ ರೈಲ್ವೆ ವತಿಯಿಂದ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಚೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಮರುದಿನವೇ 1258 ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರ ಯೋಜನೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದರು.

ಕೇಂದ್ರ ಸರ್ಕಾರದ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್‌ ಗಡ್ಕರಿರವರಿಗೆ ನೀಡಿದ ಮನವಿ ಮೇರೆಗೆ 2024-25 ನೇ ಸಾಲಿನಲ್ಲಿ ತೆಗೆದುಕೊಳ್ಳಲು ರಾಜ್ಯಕ್ಕೆ ನೀಡಿದ ಓಟ್ಟು 8006 ಕೋಟಿ ರು. ಅನುದಾನದ ಪೈಕಿ ಶಿವಮೊಗ್ಗ ಜಿಲ್ಲೆಗೆ 2623 ಕೋಟಿ ರು. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.ಬೈಂದೂರಿನಿಂದ ರಾಣೆಬೆನ್ನೂರು ವರೆಗೆ ಹಲವು ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗಿದ್ದು, ಬಾಕಿ ಉಳಿದ ಭಾಗಗಳಲ್ಲಿ ದ್ವಿ ಪಥ ರಸ್ತೆ ನಿರ್ಮಾಣ ಪೂರ್ಣಗೊಳಿಸಲು 900 ಕೋಟಿ ರು., ಸಾಗರದಿಂದ ಮರಕುಟಕ ವರೆಗೆ (ಸಿಗಂಧೂರು ಸೇತುವೆ ಮೂಲಕ) ದ್ವಿಪಥ ರಸ್ತೆಯನ್ನು ಸಾಗರ ಪಟ್ಟಣದ ಬೈಪಾಸ್ ಸೇರಿ ನಿರ್ಮಾಣ ಮಾಡಲು 920 ಕೋಟಿ ರು., ಆಗುಂಬೆ ಘಾಟಿ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಗಲೀಕರಣ ಮಾಡಲು 403 ಕೋಟಿ ರು., ತಾಳಗುಪ್ಪ ಚೂರಿಕಟ್ಟೆಯಿಂದ ಸಾಗರದವರೆಗೆ ಮತ್ತು ಸಾಗರದಿಂದ ಆನಂದಪುರವರೆಗೆ ದ್ವಿ ಪಥ ರಸ್ತೆ ನಿರ್ಮಾಣ ಮಾಡಲು 400 ಕೋಟಿ ರು. ಕಾಮಗಾರಿಗೆ ಅನುಮೋದನೆ ಸಿಕ್ಕಿದೆ ಎಂದು ವಿವರಿಸಿದರು.

ಬೀರೂರುವರೆಗೆ ಮಾರ್ಗ ಡಬ್ಲಿಂಗ್‌ ಪ್ರಸ್ತಾವನೆ:

ಶಿವಮೊಗ್ಗ – ಬೀರೂರು ಮಧ್ಯೆ 62 ಕಿ.ಮೀ ರೈಲ್ವೆ ಮಾರ್ಗ ಡಬ್ಲಿಂಗ್‌ ಕಾರ್ಯಕ್ಕೆ ನೈಋತ್ಯ ರೈಲ್ವೆ ವತಿಯಿಂದ ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಚೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಮರುದಿನವೇ 1258 ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರ ಯೋಜನೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.

ಶಿವಮೊಗ್ಗದಿಂದ ಕರಾವಳಿಗೆ ಸಂಪರ್ಕಕ್ಕೆ ಪ್ಲಾನ್:

ಶಿವಮೊಗ್ಗದಿಂದ ಕರಾವಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಪ್ರಯತ್ನ ಆರಂಭಿಸಲಾಗಿದೆ. ಶಿವಮೊಗ್ಗ – ಬೀರೂರು – ಕಡೂರು ಮೂಲಕ ಸಕಲೇಶಪುರ ಮತ್ತು ಬೇಲೂರಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಇದರಿಂದ ಮಂಗಳೂರು, ಸುಬ್ರಹ್ಮಣಕ್ಕೆ ನೇರ ರೈಲ್ವೆ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದರು.