ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು- ಮುಂಬೈ ನಡುವೆ ನೂತನ ವಂದೇ ಭಾರತ್ ಸ್ಲೀಪರ್ ರಾತ್ರಿ ರೈಲನ್ನು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ.ಬೆಂಗಳೂರು ಎಸ್ಎಂವಿಟಿ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ನೂತನ ದ್ವಿಸಾಪ್ತಾಹಿಕ ರೈಲಿಗೆ ಭಾನುವಾರ ವರ್ಚುವಲ್ ವಿಧಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದ ಜನರ ದೀರ್ಘ ಕಾಲದ ಬೇಡಿಕೆಯನ್ನು ಈ ರೈಲು ಸಂಚಾರದ ಮೂಲಕ ಈಡೇರಿಸಿದ್ದೇವೆ. ಜನರ ಅಪೇಕ್ಷೆಯಂತೆ ಬೆಂಗಳೂರಿನಿಂದ ಮುಂಬೈಗೆ ಶೀಘ್ರ ವಂದೇ ಭಾರತ್ ರೈಲನ್ನೂ ಒದಗಿಸಲಾಗುವುದು. ಇದು ಕರ್ನಾಟಕಕ್ಕೆ ಅನೇಕ ಸಾಧ್ಯತೆಗಳನ್ನು ತೆರೆಯಲಿದೆ ಎಂದು ಹೇಳಿದರು.ಮಂಗಳೂರಿಗೆ ವಂದೇ ಭಾರತ್:
ಬೆಂಗಳೂರನ್ನು ಕರಾವಳಿ ಕರ್ನಾಟಕ ಮೂಲಕ ಮಡಗಾಂವ್‌ವರೆಗೆ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರವನ್ನು ಶೀಘ್ರ ಆರಂಭಿಸಲು ಯೋಜಿಸಲಾಗಿದೆ. ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಘಾಟ್ ಪ್ರದೇಶದಲ್ಲಿ ವಿಶೇಷ ಬ್ರೇಕಿಂಗ್ ಸಿಸ್ಟಮ್ ಅಳವಡಿಸುವ ಕೆಲಸ ನಡೆಯುತ್ತಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.2 ಗಂಟೆಯೊಳಗೆ ಹೈದರಾಬಾದ್, 73 ನಿಮಿಷದಲ್ಲಿ ಚೆನ್ನೈಗೆ ಯಾನ!
ಬೆಂಗಳೂರಿನಿಂದ ಹೈದರಾಬಾದ್ ಹಾಗೂ ಚೆನ್ನೈಗೆ ನೂತನ ಬುಲೆಟ್ ಟ್ರೈನ್ ಕಾರಿಡಾರ್ ಯೋಜನೆಯನ್ನು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದು ಸಾಕಾರವಾದರೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಕೇವಲ 2 ಗಂಟೆ ಅವಧಿಯಲ್ಲಿ ಹಾಗೂ ಬೆಂಗಳೂರಿನಿಂದ ಚೆನ್ನೈಗೆ 73 ನಿಮಿಷಗಳಲ್ಲಿ ಸಂಚಾರ ಮಾಡಬಹುದು. ದೇಶದಲ್ಲಿ ಒಟ್ಟು 7 ಸಾವಿರ ಕಿಮೀ ಬುಲೆಟ್ ಟ್ರೈನ್ ಯೋಜನೆಯ ಗುರಿ ಹೊಂದಲಾಗಿದ್ದು, ಅದರಲ್ಲಿ ಈವರೆಗೆ 4000 ಕಿಮೀ ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.ಮುಂಬೈ- ಬೆಂಗಳೂರು ಹೈಸ್ಪೀಡ್ ರೈಲು:
ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ ಮಾರ್ಗವಾಗಿ ಮುಂಬೈ- ಬೆಂಗಳೂರು ನಡುವೆ ಹೈಸ್ಪೀಡ್ ರೈಲು/ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಿಸುವಂತೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಕ್ಷಿಪ್ರ ಸಂಪರ್ಕ ಕಲ್ಪಿಸುವುದರಿಂದ ಉದ್ಯೋಗ, ಉದ್ಯಮ, ಹೂಡಿಕೆ ಮತ್ತು ಅವಕಾಶಗಳ ವಿಷಯದಲ್ಲಿ ಅತ್ಯಂತ ಮಹತ್ವದ ಬದಲಾವಣೆ ಸಾಧ್ಯವಾಗಲಿದೆ. ರಾಜ್ಯದ ಬೆಳವಣಿಗೆಯ ಇತಿಹಾಸದಲ್ಲಿ ಉತ್ತರ ಕರ್ನಾಟಕವು ತನ್ನ ಅರ್ಹ ಪಾಲನ್ನು ಪಡೆಯಲೇಬೇಕಿದೆ. ಕರ್ನಾಟಕವು 1 ಟ್ರಿಲಿಯನ್ ಆರ್ಥಿಕತೆಯ ಗುರಿ ಸಾಧಿಸಬೇಕಾದರೆ ಉತ್ತರ ಮತ್ತು ಮಧ್ಯ ಕರ್ನಾಟಕವನ್ನು ಹಿಂದೆ ಬಿಡಲು ಸಾಧ್ಯವಿಲ್ಲ. ಆದ್ದರಿಂದ ಕ್ಷಿಪ್ರ ಸಂಚಾರ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.