ಕನ್ನಡಪ್ರಭ ವಾರ್ತೆ ಬೆಂಗಳೂರುಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ ಬೆಂಗಳೂರಿನಿಂದ ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಪಾರ್ಥೀವ ಶರೀರವನ್ನು ಹೊತ್ತ ವಾಹನ ಸಾಗಿದ ದಾರಿಯಲ್ಲಿ ಭಾರೀ ಜನಸ್ತೋಮ ನೆರೆದಿತ್ತು.
ಬೆಂಗಳೂರು- ಮಂಗಳೂರು ಹೆದ್ದಾರಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ತುಮಕೂರು ಜಿಲ್ಲೆಯ ಕುಣಿಗಲ್ ವ್ಯಾಪ್ತಿಯ ನಾಗಮಂಗಲ, ಬೆಳ್ಳೂರು ಕ್ರಾಸ್, ಹಾಸನ ಜಿಲ್ಲೆಯ ಗಡಿ ಹಿರಿಸಾವೆ ಸೇರಿದಂತೆ ಪಾರ್ಥೀವ ಶರೀರ ಹೊತ್ತ ವಾಹನದ ಮಾರ್ಗದಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾವುಕರಾಗಿ ತಮ್ಮ ನೆಚ್ಚಿನ ‘ಅಮ್ಮ’ನಿಗೆ ಅಂತಿಮ ನಮನ ಸಲ್ಲಿಸಿದರು.ಎಚ್.ಡಿ.ದೇವೇಗೌಡರ ಕಾರನ್ನು ಸುತ್ತುವರಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ತೀವ್ರ ಭಾವುಕರಾಗಿ ಸಾಂತ್ವನ ಹೇಳಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೆರೆದಿದ್ದ ಜನರನ್ನು ಕಂಡು ಭಾವುಕರಾಗಿ ಕೈಮುಗಿದು ತೆರಳಿದರು.ಪಕ್ಷದ ಭೇದ-ಭಾವ ಮರೆತು ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಧಾವಿಸಿ ಬಂದು ಚನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಪಕ್ಷಾತೀತವಾಗಿ ಹರಿದುಬಂದ ಗಣ್ಯರು:ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ಡಾ। ಕೆ.ಶ್ರೀನಿವಾಸಮೂರ್ತಿ ಅವರು ಪಾರ್ಥಿವ ಶರೀರಕ್ಕೆ ಪುಪ್ಪಾರ್ಚನೆ ಮಾಡಿ ಭಾವಪೂರ್ಣ ಗೌರವ ಸಮರ್ಪಿಸಿದರು.ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್ ಕೇಂದ್ರದ ಬಳಿ ಅಂತಿಮ ನಮನ ಸಲ್ಲಿಸಿದರು. ಹಿರಿಸಾವೆ, ಚನ್ನರಾಯಪಟ್ಟಣ, ಶಾಂತಿಗ್ರಾಮ, ಹಾಸನ, ಮೊಸಳೆ ಹೊಸಹಳ್ಳಿ ಮಾರ್ಗವಾಗಿ ಹೊಳೆನರಸೀಪುರಕ್ಕೆ ವಾಹನ ಆಗಮಿಸಿತು.ಗೌಡರ ಹುಟ್ಟೂರು ಬಳಿ ಚೆನ್ನಮ್ಮ ಅಂತ್ಯಕ್ರಿಯೆ:ಮೃತರಾದ ಚೆನ್ನಮ್ಮ ಅವರ ಅಂತ್ಯಸಂಸ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟೂರಾದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಬಳಿ ಪುತ್ರ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ನೇತೃತ್ವದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಇಂದು (ಜು.20)ರಂದು ಹರದನಹಳ್ಳಿ ಸಮೀಪದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಬಳಿ ಇರುವ ದೇವೇಗೌಡರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪ್ರಾಥಮಿಕ, ಪ್ರೌಢ ಹಾಗೂ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಾಸ್ತುತಜ್ಞ ಹರಿಪ್ರಸಾದ್ ಅವರು ಶಾಸಕ ಎಚ್.ಡಿ.ರೇವಣ್ಣ ಅವರೊಂದಿಗೆ ಚರ್ಚೆ ಮಾಡಿ ಅಂತ್ಯಕ್ರಿಯೆ ನಡೆಯುವ ಸ್ಥಳ ನಿಗದಿ ಮಾಡಿದ್ದಾರೆ.ಅಳುತ್ತಲೇ ಬಂದ ರೇವಣ್ಣ:
‘ನಿನ್ನೆ ಬೆಳಗ್ಗೆ ವೈದ್ಯರು ಮೂವತ್ತು ಪರ್ಸೆಂಟ್ ಗುಣಮುಖರಾಗಿದ್ದಾರೆ ಎಂದರು. ನಾನು ತಿರುಪತಿಗೆ ಹೋಗಿ ಬಂದು ಕೊನೆಯದಾಗಿ ಮಾತನಾಡಿಸಿದೆ’ ಎಂದು ತಾಯಿ ಚೆನ್ನಮ್ಮ ಅವರನ್ನು ನೆನೆದು ಕಣ್ಣೀರಿಟ್ಟ ರೇವಣ್ಣ ಅವರು, ಮನೆಗೆ ಯಾರೇ ಬಂದು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಕೈಯ್ಯಲ್ಲಿ ಇದ್ದದ್ದನ್ನು ನೀಡಿ ಕಳುಹಿಸುತ್ತಿದ್ದರು. ನಾನು ಮಹಾ ತಾಯಿಯನ್ನು ಕಳೆದುಕೊಂಡಿದ್ದೇನೆ’ ಎಂದು ಕಣ್ಣೀರು ಹಾಕಿದರು.ಚೆನ್ನಮ್ಮ ಅಂತ್ಯಸಂಸ್ಕಾರ ನಡೆಯುವ ಸ್ಥಳದ ಸಮೀಪ ಮೈಸೂರಿನಿಂದ ತರಿಸಿರುವ 4000 ಕುರ್ಚಿ ಹಾಕಲು ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಮಧ್ಯಾಹ್ನ ೨ ಗಂಟೆ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.
ಚೆನ್ನಮ್ಮ ನಿಧನದ ಹಿನ್ನೆಲೆಯಲ್ಲಿ ಮೃತರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹೊಳೆನರಸೀಪುರದಲ್ಲಿ ಸೋಮವಾರ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.