ಬಿಜೆಪಿಗೆ ಶಕ್ತಿ ಕೊಟ್ಟಿದ್ದೇ ಬಂಗಾರಪ್ಪ: ಮಧು ಬಂಗಾರಪ್ಪ

| Published : Apr 18 2024, 02:21 AM IST / Updated: Apr 18 2024, 02:22 PM IST

Madhu Bangarappa

ಸಾರಾಂಶ

ಯಡಿಯೂರಪ್ಪರೇ ಬಂಗಾರಪ್ಪರಿಂದ ಶಕ್ತಿ ತುಂಬಿಸಿಕೊಂಡಿದ್ದು. ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದರಲ್ಲ. ಮೂರನೇ ಸ್ಥಾನಕ್ಕೆ ಆಗ ಬಿಜೆಪಿ ತಳ್ಳಲ್ಪಟ್ಟಿತ್ತಲ್ಲ, ಆಗ ನಿಮಗೆ ಶಕ್ತಿ ಇರಲಿಲ್ವಾ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆ ಎಸೆದರು.

  ಶಿವಮೊಗ್ಗ :   ಬಂಗಾರಪ್ಪ ಬಂದ್ದದರಿಂದ ಬಿಜೆಪಿಗೆ ಶಕ್ತಿ ಹೆಚ್ಚಾಗಿತ್ತೇ ಹೊರೆತು ಬಿಜೆಪಿಯಿಂದ ಬಂಗಾರಪ್ಪ ಸಂಸದರಾಗಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿ.ವೈ.ರಾಘವೇಂದ್ರ ಅವರು ಬಂಗಾರಪ್ಪರನ್ನು ಎಂಪಿ ಮಾಡಿದ್ದು ಬಿಜೆಪಿ ಎಂದು ಹೇಳಿದ್ದಾರೆ. ಬಂಗಾರಪ್ಪ ಎಂಪಿ ಆಗಿದ್ದಾಗ ರಾಘವೇಂದ್ರ ಅವರಿಗೆ ರಾಜಕೀಯ ಅನುಭವವೇ ಇರಲಿಲ್ಲ. ಯಡಿಯೂರಪ್ಪರೇ ಬಂಗಾರಪ್ಪರಿಂದ ಶಕ್ತಿ ತುಂಬಿಸಿಕೊಂಡಿದ್ದು. ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದರಲ್ಲ. ಮೂರನೇ ಸ್ಥಾನಕ್ಕೆ ಆಗ ಬಿಜೆಪಿ ತಳ್ಳಲ್ಪಟ್ಟಿತ್ತಲ್ಲ, ಆಗ ನಿಮಗೆ ಶಕ್ತಿ ಇರಲಿಲ್ವಾ? ಬಿಜೆಪಿಗೆ ಶಕ್ತಿ ಕೊಟ್ಟಿದ್ದು ಬಂಗಾರಪ್ಪ. ಯಡಿಯೂರಪ್ಪ ಕುಟುಂಬ ಬಂಗಾರಪ್ಪ ಋಣದಲ್ಲಿದೆ ಎಂದು ಹರಿಹಾಯ್ದರು. 

2004ರಲ್ಲಿ ರಾಘವೇಂದ್ರ ಮತ್ತು ಅವರಣ್ಣ ಎಲ್ಲಿದ್ದರು. ಬಂಗಾರಪ್ಪ ಮಗ ನಾನು ನೀರಿಗಾಗಿ ರಕ್ತ ಕೊಟ್ಟು ಪಾದಯಾತ್ರೆ ಮಾಡಿದ್ದೇನೆ. ನಿಮ್ಮ ಜೀವನದಲ್ಲಿ ಎಷ್ಟು ಪಾದಯಾತ್ರೆ ಮಾಡಿದ್ದೀರಿ. ನಿಮ್ಮ ಅಧಿಕಾರದಲ್ಲಿ ಎಂಪಿಎಂ ಮಾರಿ ವ್ಯವಹಾರ ಮಾಡಲು ಹೋಗಿದ್ದು, ವಿಮಾನ ನಿಲ್ದಾಣ ಮಾರಲು ಹೋಗಿದ್ದು ಎಲ್ಲವೂ ನಮಗೆ ಗೊತ್ತಿದೆ. ಜಿಲ್ಲಾ ಆಸ್ಪತ್ರೆಯನ್ನು ರಾಜಕಾರಣದ ಸ್ವಾರ್ಥಕ್ಕೆ ಶಿಕಾರಿಪುರಕ್ಕೆ ಒಯ್ದಿದ್ದರು. ಜಿಲ್ಲಾ ಆಸ್ಪತ್ರೆ ಜಿಲ್ಲಾ ಕೇಂದ್ರದಲ್ಲೇ ಇರಬೇಕು ಎಂದು ಬಂಗಾರಪ್ಪ ಮೆಗ್ಗಾನ್‌ ಆಸ್ಪತ್ರೆಯನ್ನಾಗಿ ಮಾಡಿದರು. ಸಿಮ್ಸ್ ಕೂಡ ಕಾಂಗ್ರೆಸ್ ಕೂಸು. ಮೆಗ್ಗಾನ್‌ ಆಸ್ಪತ್ರೆ ಕಟ್ಟುವಾಗ ಎಂ ಸ್ಯಾಂಡ್, ಜಲ್ಲಿ ಕಥೆ ಗೊತ್ತಿದೆ. ನೀವು ಏನೇನೂ ಮಾಡಿದ್ದೀರಿ ಎಲ್ಲವನ್ನೂ ಬಯಲಿಗೆ ತರಬೇಕಾಗುತ್ತದೆ. ಬಂಗಾರಪ್ಪ ಅವರ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ತೊಳೆಯೋ ಮಾತಾಡಿ ಅವರೇ ಭ್ರಷ್ಟಾಚಾರಿಗಳಾಗಿದ್ದಾರೆ. ಜಿಲ್ಲೆಯಲ್ಲಿ 7 ಕೋಟಿ ಹಣ ಗೃಹಲಕ್ಷ್ಮೀದು ಜನರಿಗೆ ಹೋಗ್ತಿದೆ. ನಾವೇನಿದ್ರೂ ಕ್ಲೀನ್. ನಮಗೆ ವಾಷಿಂಗ್ ಪೌಡರ್ ಅವಶ್ಯಕತೆ ಇಲ್ಲ. ಪಂಚ ಗ್ಯಾರಂಟಿಗಳು ಜನರ ಮನೆ ಬೆಳಕಾಗಿವೆ. ಗ್ಯಾರಂಟಿ ಮನೆಮನೆಗೆ ತಲುಪಿಸೋ ಕಾರ್ಯ ಮಾಡುತ್ತೇವೆ. ರಾಜ್ಯ ಗ್ಯಾರೆಂಟಿ ಕೊಟ್ಟು ಯಶಸ್ವಿಯಾಗಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈಗ ಕೇಂದ್ರದ ಗ್ಯಾರಂಟಿ ಕೊಡುತ್ತಿದ್ದೇವೆ. ಗಾಂಧಿ ಫ್ಯಾಮಿಲಿ ಬಗ್ಗೆ ಮಾತಾಡೋ ಯೋಗ್ಯತೆ ರಾಘವೇಂದ್ರ ಅವರಿಗೆ ಇಲ್ಲ. 

ರಾಹುಲ್ ಗಾಂಧಿ ಅವರ ಅಜ್ಜಿ, ತಂದೆ ಈ ದೇಶಕ್ಕಾಗಿ ರಕ್ತ ಕೊಟ್ಟು ಹೋಗಿದ್ದಾರೆ. ಈಗ ದೇಶ ಒಂದು ಮಾಡಲು ರಾಹುಲ್‌ ಗಾಂಧಿ ಅವರು ಜೋಡೋಯಾತ್ರೆ ಮಾಡಿದ್ದಾರೆ ಎಂದರು, ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ಪ್ರಸನ್ನಕುಮಾರ್‌, ಜಿ.ಡಿ.ಮಂಜುನಾಥ್‌, ಕಲಗೋಡು ರತ್ನಾಕರ್‌, ಬಿ.ಎ.ರಮೇಶ್‌ ಹೆಗಡೆ, ಚಂದ್ರಭೂಪಾಲ್‌. ಎಚ್‌.ಪಿ.ಗಿರೀಶ್‌ ಮತ್ತಿತರರು ಇದ್ದರು. 

ಮೊದಲು ಈಶ್ವರಪ್ಪಗೆ ಉತ್ತರಿಸಿ: ಸಂಸದ ರಾಘವೇಂದ್ರರಿಗೆ ಶರಾವತಿ ಸಮಸ್ಯೆ ಬಗ್ಗೆ ಸುಳ್ಳು ಹೇಳ್ತಾನೇ ಇದಾರೆ. ಕೆ.ಎಸ್‌.ಈಶ್ವರಪ್ಪ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರು ಇವತ್ತು ಈಶ್ವರಪ್ಪ ಅವರೇ ಪಕ್ಷ ಶುದ್ದೀಕರಣ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷ ಕಟ್ಟಿದವರನ್ನು ತುಳಿದು ಮೇಲೆ ಬಂದಿದ್ದು ನೀವು. ಮೊದಲು ಈಶ್ವರಪ್ಪ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಮಧು ಬಂಗಾರಪ್ಪ ಹರಿಹಾಯ್ದರು.

20 ರಿಂದ ‘ಗ್ಯಾರಂಟಿ’ ಡ್ರೈವ್ ಶುರು: ಚಂದ್ರಭೂಪಾಲ ಮುಂದಾಳತ್ವದಲ್ಲಿ, ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಐದು ದಿನ ಗ್ಯಾರೆಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ನಡೆಯಲಿದೆ. ಏ.20ರಿಂದ ಗ್ಯಾರಂಟಿ ಡ್ರೈವ್ ಆರಂಭ ಆಗಲಿದೆ. ಶಿಕ್ಷಣ ಇಲಾಖೆಯನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಸಂತೋಷ ಪಟ್ಟಿದ್ದಾರೆ. ಅವರು ನನ್ನನ್ನು ಹೊಗಳಿದ್ದಾರೆ. ಇದರಿಂದ ನನ್ನಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗಿದೆ. ಅವರು ಒಳ್ಳೆ ಮಾತಾಡಿದ್ದು ನನ್ನ ಭಾಗ್ಯ ಎಂದು ಮಧು ಬಂಗಾರಪ್ಪ ಹೇಳಿದರು.

ರಾಜ್ಯದ ಮನೆಮನೆಗೆ ಗ್ಯಾರಂಟಿಗಳನ್ನು ತಲುಪಿಸಬೇಕು: ಮಧು ಬಂಗಾರಪ್ಪ ಕರೆ 

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರದ ಎಐಸಿಸಿಯಿಂದ ಜಾರಿಗೊಳಿಸಲಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಬೂತ್ ಮಟ್ಟದ ಪ್ರತಿ ಮನೆಗಳಿಗೆ ತಲುಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರ ಗ್ಯಾರಂಟಿ ಯೋಜನೆ ಪ್ರಚಾರ ಸಮಿತಿ ರಚಿಸಿ, ಕಾರ್ಯಕರ್ತರಿಗೆ ಬೂತ್ ಮಟ್ಟದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಗ್ಯಾರಂಟಿ ಯೋಜನೆಗಳು ಬಡ ಕುಟುಂಬ ಸದಸ್ಯರಿಗೆ ವರದಾನವಾಗಿವೆ. ಆದ್ದರಿಂದ, ಬೂತ್ ಮಟ್ಟದ ಪ್ರತಿ ಮನೆಗಳಿಗೆ ಹೋಗಿ ಮತಯಾಚಿಸಬೇಕು ಎಂದರು.ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಕ್ಕ ಪರ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸರ್ಕಾರದ ಋಣ ನಮ್ಮ ಮೇಲಿದೆ. ಆ ಋಣ ತೀರಿಸಲು ಅವಕಾಶ ಸಿಕ್ಕಿದೆ. ಖಂಡಿತ ಗೀತಾ ಶಿವರಾಜಕುಮಾರ ಅವರಿಗೆ ಬೆಂಬಲಿಸುವುದಾಗಿ ಮತದಾರರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಕೇಂದ್ರ ಕಾಂಗ್ರೆಸ್ ಪಕ್ಷ ಪ್ರಣಾಳಿಯನ್ನು ಪ್ರತಿ ಮನೆಗಳಿಗೂ ತಲುಪಿಸಬೇಕು. ಯೋಜನೆಗಳ ಕುರಿತ ಅರಿವು ಮೂಡಿಸಬೇಕು. ಬೂಟ್ ಮಟ್ಟದಲ್ಲಿ ಹಳ್ಳಿಗಳಿಗೆ ತೆರಳಿ ಗ್ಯಾರಂಟಿ ಯೋಜನೆಯ ಕರಪತ್ರ ಅಂಟಿಸಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್ ಗ್ಯಾರಂಟಿಯ ಜಿಲ್ಲಾ ಮಟ್ಟದ ಗ್ಯಾರಂಟಿ ಹಬ್ಬ ಆಚರಿಸಬೇಕು. ಇದೇ,ರೀತಿ ತಾಲೂಕು, ಬೂತ್, ಮಟ್ಟದಲ್ಲಿಯೂ ತಮಟೆ ಭಾರಿಸುವ ಮೂಲಕ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ, ಕಾಂಗ್ರೆಸ್ ಅಭ್ಯರ್ಥಿ ಗೀತಾ, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್‌, ರಮೇಶ್ ಹೆಗ್ಡೆ, ಚಂದ್ರಭೂಪಾಲ್ ಸೇರಿ ಕಾರ್ಯಕರ್ತರು ಇದ್ದರು.