ಸಾರಾಂಶ
ಸೊರಬ: ರಾಜ್ಯದಲ್ಲಿ ರೈತರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಉಚಿತ ವಿದ್ಯುತ್ ನೀಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಗುರುವಾರ ತಾಲೂಕಿನ ಕಡಸೂರು ಗ್ರಾಮದಲ್ಲಿ ೫೩ ಕೋಟಿ ರು. ವೆಚ್ಚದಲ್ಲಿ ವರದಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುವ ಸರಣಿ ಬ್ಯಾರೇಜ್ ನಿರ್ಮಾಣದ ಭೂಮಿಪೂಜೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಂಗಾರಪ್ಪ ಹೊಂದಿದ್ದ ಜನಪರ ಕಾಳಜಿ ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದ ತಾಲೂಕಿನ ರೈತರಿಗೆ ಶಾಶ್ವತ ನೀರಾವರಿನ ವ್ಯವಸ್ಥೆ ಕಲ್ಪಿಸಲು ನೂರಾರು ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುವುದು. ತಾಲೂಕು ಸೇರಿದಂತೆ ಶಿರಾಳ ಕೊಪ್ಪ ಪಟ್ಟಣಕ್ಕೆ ಶರಾವತಿ ನದಿಯಿಂದ ನೀರು ಪೂರೈಸಲು ಸುಮಾರು ೬೦೦ ಕೋಟಿ ರು. ವೆಚ್ಚದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.ಆರು ಬ್ಯಾರೇಜ್ ನಿರ್ಮಾಣದಿಂದ ಸಾಗರ ತಾಲೂಕಿನ ತಾಳಗುಪ್ಪ ಹಾಗೂ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಸುಮಾರು ೫೦ ಹಳ್ಳಿಗಳ ೩೦೦೦ ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ ಆಗಲಿದೆ ಎಂದರು.
ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಕ್ಷೇತ್ರದಲ್ಲಿ ೧೩೦೦ ಕೆರೆಗಳಿಗೂ ವರ್ಷ ಪೂರ್ತಿ ನೀರು ತುಂಬಿಸುವ ಯೋಜನೆಗೂ ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.ನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಎಂ.ಎಸ್.ಬೋಸರಾಜ, ರಾಜ್ಯದಾದ್ಯಂತ ಬರಗಾಲ ಪೀಡಿತ ಪ್ರದೇಶಗಳನ್ನು ಗುರುತಿಸಿ ಮೂಲ ನೀರಾವರಿ ವ್ಯವಸ್ಥೆ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಆದ್ಯತೆ ನೀಡಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಭೂಮಿಯಲ್ಲಿ ಅಂತರ್ಜಲ ಕಡಿಮೆಯಾಗಿದ್ದು, ನದಿ, ಹಳ್ಳಕೊಳ್ಳಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರು ಸಕಾಲಕ್ಕೆ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿ ಎಂಬ ನಿಟ್ಟಿನಲ್ಲಿ ಸರಣಿ ಸೇತುವೆ ಜೊತೆಗೆ ಬ್ಯಾರೇಜ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.ಸಚಿವ ಮಧು ಬಂಗಾರಪ್ಪ ಅವರು ವಿಶೇಷವಾಗಿ ಜಿಲ್ಲೆಯ ನೀರಾವರಿಗೆ ಆಸಕ್ತಿ ತೋರಿ ತಾಲೂಕಿನ ದಂಡಾವತಿ ಯೋಜನೆ ಬದಲಾಗಿ ಸಮಗ್ರವಾಗಿ ಏತ ನೀರಾವರಿ ಯೋಜನೆ ನಿರ್ಮಾಣದ ಮೂಲಕ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಮುಂದಾಗಿದ್ದಾರೆ. ನಾನೂ ಕೂಡ ಅವಶ್ಯವಿರುವ ನೀರಾವರಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದಾಗಿ ತಿಳಿಸಿದರು.೧೮೦೦ ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಶಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿದ್ದು, ಕೂಡಲೇ ಯೋಜನೆ ಅನುಷ್ಠಾನ ಗೊಳಿಸಲಾಗುವುದು ಎಂದರು.ಸಣ್ಣ ನೀರಾವರಿ ಮುಖ್ಯ ಎಂಜಿನಿಯರ್ ಪ್ರಕಾಶ್ ಶ್ರೀಹರಿ, ಎಚ್.ಎಂ.ಸ್ವಾಮಿ, ಚರಣ್, ಸಂಜೀವರಾಜು, ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ತಾಲೂಕು ಅಧ್ಯಕ್ಷ ಜೈಶೀಲಗೌಡ ಅಂಕರವಳ್ಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಸದಾನಂದಗೌಡ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಪ್ರದೀಪಕುಮಾರ್, ಮಾಜಿ ಜಿ.ಪಂ. ಸದಸ್ಯ ತಬಲಿ ಬಂಗಾರಪ್ಪ, ರತ್ನಾಕರ್ ಕಲಗೋಡು, ಕೆ.ಪಿ.ರುದ್ರಗೌಡ, ಸತ್ಯನಾರಾಯಣ ಕಡಸೂರು, ಹುಲ್ತಿಕೊಪ್ಪ ಗಣಪತಿ, ಕೆ.ವಿ.ಗೌಡ, ದಯಾನಂದಗೌಡ, ಕಲ್ಲಂಬಿ ಹಿರಿಯಣ್ಣ, ರಮೇಶ ಇಕ್ಕೇರಿ ಇದ್ದರು.
ಕಡಸೂರು ಗ್ರಾಮದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಗುರುಮೂರ್ತಿ, ಪೂರ್ಣಿಮಾ ಭಾವೆ ಮತ್ತು ಸಂಗಡಿಗರು ರೈತಗೀತೆ ಹಾಡಿದರು. ಕಡಸೂರು ಪ್ರೌಢಶಾಲೆ ವಿದ್ಯಾರ್ಥಿನಿ ಅಕ್ಷತಾ ಪ್ರಾರ್ಥಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಸ್ವಾಗತಿಸಿದರು.ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದರೂ ತಾಲೂಕಿನ ನೀರಾವರಿ ಯೋಜನೆ ಪೂರ್ಣ ಮಾಡಲಿಲ್ಲ. ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಾನೇ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ತಂದಿದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ತಾವು ನೀರಾವರಿ ಸಚಿವರಾಗಿ ಇಂತಹ ಯೋಜನೆಗಳನ್ನು ಪೂರ್ಣಗೊಳಿಸಲಿಲ್ಲವೇಕೆ ? ತಾಲೂಕಿಗೆ ಮಂಜೂರಾದ ಎಲ್ಲಾ ಯೋಜನೆಗಳು ತಮ್ಮವೇ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ– ಮಧು ಬಂಗಾರಪ್ಪ, ಉಸ್ತುವಾರಿ ಸಚಿವ