ಬೆಳಗ್ಗೆ ೫ರಿಂದ ಆರಂಭವಾಗುವ ರೈಲುಗಳು ಹತ್ತು ಗಂಟೆಯವರೆಗೂ ಬರುವ ರೈಲುಗಳಲ್ಲಿ ಸಂಚಾರ ಮಾಡುವರು. ಆದರೆ ಇಷ್ಟು ಪ್ರಯಾಣಿಕರು ಸಂಚರಿಸುವ ಮೆಮೊ ರೈಲುಗಳಲ್ಲಿ ಸ್ವಚ್ಛತೆ ಮಾಯವಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಾರಿಕುಪ್ಪಂನಿಂದ ಪಟ್ಟಣದ ಮೂಲಕ ನಿತ್ಯ ಬೆಂಗಳೂರಿಗೆ ಸಂಚರಿಸುವ ಮೆಮೊ ರೈಲಿನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ದುರ್ನಾತದಲ್ಲೆ ಸಂಚರಿಸುವಂತಾಗಿದೆ.ಕೆಜಿಎಫ್, ಬಂಗಾರಪೇಟೆ ತಾಲೂಕುಗಳಿಂದ ನಿತ್ಯ ಉದ್ಯೋಗಕ್ಕಾಗಿ ಬೆಂಗಳೂರಿಗೆ 25 ಸಾವಿರಕ್ಕೂ ಹೆಚ್ಚಿನ ಜನರು ರೈಲುಗಳ ಮೂಲಕ ಸಂಚಾರ ಮಾಡುವರು.ಬೆಳಗ್ಗೆ ೫ರಿಂದ ಆರಂಭವಾಗುವ ರೈಲುಗಳು ಹತ್ತು ಗಂಟೆಯವರೆಗೂ ಬರುವ ರೈಲುಗಳಲ್ಲಿ ಸಂಚಾರ ಮಾಡುವರು. ಆದರೆ ಇಷ್ಟು ಪ್ರಯಾಣಿಕರು ಸಂಚರಿಸುವ ಮೆಮೊ ರೈಲುಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಬೋಗಿಗಳ ತುಂಬಾ ತ್ಯಾಜ್ಯಗಳು ತುಂಬಿರುತ್ತದೆ. ಇದರಿಂದ ಪ್ರಯಾಣಿಕರು ಆಸನಗಳಲ್ಲಿ ಕೂರಲು ಹಿಂದೆ ಮುಂದೆ ನೋಡುವಂತಾಗಿದೆ. ಇದಲ್ಲದೆ ಶೌಚಾಲಯಗಳಲ್ಲಿಯೂ ಸಹ ದುರ್ನಾತದಿಂದ ಕೂಡಿರುತ್ತದೆ. ಶೌಚಾಲಯಗಳಿವೆ ಆದರೆ ಒಂದರಲ್ಲಿಯೂ ನೀರಿಲ್ಲದೆ ಅನೈರ್ಮಲ್ಯ ತಾಂಡವಾಡುತ್ತಿದೆ. ಹೀಗಾಗಿ ಮೂಗು ಮುಚ್ಚಿಕೊಂಡೇ ಪ್ರಯಾಣಿಸುವಂತಾಗಿದೆ ಎಂಬುದು ಪ್ರಯಾಣಿಕರ ಅಳಲು.ಬೆಳಗ್ಗೆ ರೈಲು ಹೊರಡುವ ಮುನ್ನ ಸ್ವಚ್ಛಗೊಳಿಸಲು ಗುತ್ತಿಗೆ ಪಡೆದಿರುವವರ ಸಿಬ್ಬಂದಿ ಎಲ್ಲಾ ಬೋಗಿಗಳನ್ನು ಸ್ವಚ್ಛಗೊಳಿಸಿ ಶೌಚಾಲಯಗಳಲ್ಲಿ ನೀರು ತುಂಬಬೇಕು, ಒಂದು ದಿನ ತುಂಬಿದರೆ ಎರಡು ಮೂರು ದಿನ ನೀರು ತುಂಬುವುದಿಲ್ಲ, ಎರಡು ದಿನಕ್ಕೊಮ್ಮೆ ಬೋಗಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂಬುದು ನಿತ್ಯ ರೈಲುಗಳಲ್ಲಿ ಪ್ರಯಾಣ ಮಾಡುವವರ ಆರೋಪವಾಗಿದೆ. ನಿತ್ಯ ಪ್ರಯಾಣಿಕರ ಜೊತೆ ಹೊಸ ಪ್ರಯಾಣಿಕರಂತೂ ಯಾಕಪ್ಪ ಈ ರೈಲನ್ನು ಹತ್ತಿದಿವೀ ಎಂದು ಕೊರಗುವಂತಾಗಿದೆ, ಅಷ್ಟರ ಮಟ್ಟಿಗೆ ಮೆಮೊ ರೈಲುಗಳಲ್ಲಿ ಸ್ವಚ್ಛತೆ ಇದೆ.ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಇಲಾಖೆಗೆ ಆದಾಯ ತಂದು ಕೊಡುವ ನಿಲ್ದಾಣವಿದ್ದರೆ ಅದು ಬಂಗಾರಪೇಟೆ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಪ್ರಯಾಣಿಕರಿಗೆ ಮಾತ್ರ ಯಾವುದೇ ಅನುಕೂಲಗಳನ್ನು ಇಲಾಖೆ ಕಲ್ಪಿಸದೆ ಕಡೆಗಣಿಸಿರುವುದು ಪ್ರಯಾಣಿಕರ ಕಂಗಣ್ಣಿಗೆ ಗುರಿಯಾಗಿದೆ. ಬೋಗಿಗಳಲ್ಲಿ ಸ್ವಚ್ಛಗೊಳಿಸಿದ ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿ ಸಿಬ್ಬಂದಿಯೇ ವಿಲೇವಾರಿ ಮಾಡಬೇಕು, ಆದರೆ ತ್ಯಾಜ್ಯಗಳು ತುಂಬಿದ ಚೀಲಗಳನ್ನು ಸಿಬ್ಬಂದಿ ಪ್ಲಾಟ್ ಫಾರಂನಲ್ಲೆ ಬಿಟ್ಟು ಹೋಗುವರು ಎರಡು ದಿನಗಳಾದರೂ ಅದು ನಿಲ್ದಾಣದಲ್ಲೆ ಕೊಳೆಯುತ್ತಿರುತ್ತದೆ.ಸುಮಾರು 22 ಕೋಟಿ ವೆಚ್ಚದಲ್ಲಿ ಅಮೃತ ಭಾರತದಡಿ ಇಲ್ಲಿನ ನಿಲ್ದಾಣಕ್ಕೆ ಹೊಸ ರೂಪ ನೀಡಲು ರೈಲ್ವೆ ಇಲಾಖೆ ಕಾಮಗರಿ ಕೈಗೊಂಡಿದೆ, ಈಗಾಗಲೇ ಎರಡನೇ ಟಿಕೆಟ್ ಕೌಂಟರ್ ಸಹ ಸಿದ್ದವಾಗಿದ್ದು ಅದೂ ಸಹ ಸದ್ದಿಲ್ಲದೆ ಕಾರ್ಯ ಆರಂಭವಾಗಿದೆ. ಆದರೆ ರೈಲು ಬೋಗಿಗಳಲ್ಲಿ ಸ್ವಚ್ಛತೆ ಮಾಯವಾಗಿ ದುರ್ತಾನ ಬೀರುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಪಟ್ಟಣದ ನಿಲ್ದಾಣದಲ್ಲಿ ಬೋಗಿಗಳ ಶೌಚಾಲಯಗಳಿಗೆ ನೀರು ತುಂಬು ಸೌಲಭ್ಯವಿದೆ, ಆದರೆ ನೀರಿಲ್ಲದೆ ಅದು ಸ್ಥಗಿತವಾಗಿದೆ. ಬೆಂಗಳೂರು ನಿಲ್ದಾಣದಿಂದ ಮಾತ್ರ ನೀರು ತುಂಬಿಸಿಕೊಂಡು ಬರಬೇಕು, ಕೆಲ ರೈಲುಗಳು ಮೆಜೆಸ್ಟಿಕ್ ನಿಲ್ದಾಣಕ್ಕೆ ಹೋಗದೆ ವೈಟ್ ಫೀಲ್ಡ್, ಇಲ್ಲ ಕೆಆರ್‌ಪುರಂ ನಿಲ್ದಾಣದಲ್ಲೆ ಕೊನೆಗೊಳ್ಳುವುದರಿಂದ ಬೋಗಿಗಳ ಶೌಚಾಲಯಕ್ಕೆ ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.ಇದು ರೈಲುಗಳ ಕಥೆಯಾದರೆ ನಿಲ್ದಾಣದಲ್ಲೆ ಸಾರ್ವಜನಿಕ ಶೌಚಾಲಯಗಳಿದ್ದರೂ ನಿರ್ವಹಣೆ ಇಲ್ಲದೆ ಕೆಲವು ಕಡೆ ಬೀಗ ಹಾಕಲಾಗಿದೆ, ಕಾರ್ಯನಿರ್ವಹಿಸುವ ಕಡೆ ನಿರ್ವಹಣೆ ಇಲ್ಲದೆ ದುರ್ನಾತದಿಂದ ಕೂಡಿದೆ ಇದರಿಂದ ಹಿರಿಯ ನಾಗರೀಕರು, ಮಹಿಳಾ ಪ್ರಯಾಣಿಕರು ತಮ್ಮ ದೇಹ ಬಾದೆ ತೀರಿಸಿಕೊಳ್ಳಲು ಹೆಣಗಾಡುವಂತಾಗಿದೆ.