ದೇವಸ್ಥಾನದ ನೌಕರ ಎಚ್.ಆರ್.ಮಂಜುನಾಥ್ ಆಲಿಯಾಸ್ ವೆಂಕಟೇಶಪ್ಪ ಎಂಬಾತನೇ ಸದ್ಯ ಪೊಲೀಸರ ಅತಿಥಿಯಾಗಿರುವ ಆರೋಪಿ.
ಸಿಸಿಟಿವಿಯಲ್ಲಿ ಕಳ್ಳತನ ಸೆರೆ । ಪೊಲೀಸ್ ಅತಿಥಿಯಾದ ಆರೋಪಿ । ಭಕ್ತರ ಕಾಣಿಕೆ ಹಣಕ್ಕೆ ಕನ್ನ
ಕನ್ನಡಪ್ರಭ ವಾರ್ತೆ ಬೇತಮಂಗಲಇಲ್ಲಿನ ಬಂಗಾರು ತಿರುಪತಿ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಹಣಕ್ಕೆ ದೇವಸ್ಥಾನದ ನೌಕರನೇ ಕನ್ನ ಹಾಕಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ನಾಚಿಕೆಗೇಡು ಘಟನೆ ನಡೆದಿದೆ.
ದೇವಸ್ಥಾನದ ನೌಕರ ಎಚ್.ಆರ್.ಮಂಜುನಾಥ್ ಆಲಿಯಾಸ್ ವೆಂಕಟೇಶಪ್ಪ ಎಂಬಾತನೇ ಸದ್ಯ ಪೊಲೀಸರ ಅತಿಥಿಯಾಗಿರುವ ಆರೋಪಿಯಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ವಾರ್ಷಿಕ ಕೋಟ್ಯಂತರ ರು.ಗಳ ಆದಾಯವಿದೆ. ಈ ಹಿಂದೆ ಇದ್ದ ಇಒ ಮತ್ತು ಪೇಷ್ಕರ್ ದೇಗುಲ ಹುಂಡಿ ಹಣ ಹಾಗೂ ಸೇವಾ ಶುಲ್ಕ ದುರುಪಯೋಗಪಡಿಸಿಕೊಂಡು ಕರ್ತವ್ಯದಿಂದ ವಜಾಗೊಂಡಿದ್ದ ಪ್ರಕರಣ ಮಾಸುವ ಮುನ್ನವೇ ಕಳ್ಳತನ ಪ್ರಕರಣವು ದೇವಾಲಯ ಹೆಸರಿಗೆ ಕಳಂಕ ತಂದೊಡ್ಡಿದೆ.ದೇವಾಲಯದ ಹುಂಡಿ ಹಣ ಚೀಲಗಳಿಗೆ ತುಂಬಿಸಿ, ಎಣಿಕೆ ಮಾಡುವ ಸಿಬ್ಬಂದಿಗೆ ನೀಡುವ ಜವಾಬ್ದಾರಿ ಆರೋಪಿ ಮಂಜುನಾಥ್ ಮತ್ತು ಇತರೆ ನೌಕರರಿಗೆ ನೀಡಲಾಗಿತ್ತು. ಆದರೆ, ಹಣ ವರ್ಗಾಯಿಸುವ ನೆಪದಲ್ಲಿ ಈತ ಕೈಗೆ ಸಿಕ್ಕಷ್ಟು ನೋಟುಗಳನ್ನು ಯಾರಿಗೂ ತಿಳಿಯದಂತೆ ಜಾಣ್ಮೆಯಿಂದ ತನ್ನ ಜೇಬಿಗೆ ಇಳಿಸಿಕೊಳ್ಳುತ್ತಿದ್ದನು. ಅಧಿಕಾರಿಗಳು ಎಚ್ಚೆತ್ತು ತಕ್ಷಣ ಪರಿಶೀಲನೆ ನಡೆಸಿದಾಗ ೩,೧೦೦ ರು. ಹಣ ಪತ್ತೆಯಾಗಿದೆ ಎಂದು ಇಓ ಮಂಜುನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಎಡಿಸಿ ಮಂಗಳಾ ಮಾತನಾಡಿ, ಕಳ್ಳತನ ಬಗ್ಗೆ ಸ್ಥಳೀಯ ಇಓ ಪೊಲೀಸರಿಗೆ ದೂರು ನೀಡಿದ್ದು, ಅವರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಆರೋಪಿ ಮಂಜುನಾಥ್‌ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಕಳ್ಳನ ಸೆರೆ:
ಅಲ್ಲೇ ಇದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸೇವಾಕರ್ತರು ಈತನ ಕೈಚಳಕ ಸೂಕ್ಷ್ಮವಾಗಿ ಗಮನಿಸಿ, ತಕ್ಷಣವೇ ಆತನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಕಳ್ಳತನ ಜಗಜ್ಜಾಹೀರಾಗಿದೆ.ಸಿಸಿಟಿವಿಯಲ್ಲಿ ಕಳ್ಳತನ ಲೈವ್ ಸೆರೆ:
ನೌಕರ ಮಂಜುನಾಥ್ ತನ್ನ ಜೇಬಿಗೆ ಹಣ ತುರುಕಿಕೊಳ್ಳುತ್ತಿದ್ದ ಸಂಪೂರ್ಣ ದೃಶ್ಯಾವಳಿ ದೇವಸ್ಥಾನದ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅತ್ಯಂತ ಸ್ಪಷ್ಟವಾಗಿ ಸೆರೆಯಾಗಿವೆ. ಇದು ಕಳ್ಳತನಕ್ಕೆ ಬಲವಾದ ಸಾಕ್ಷ್ಯ ಒದಗಿಸಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಬೇತಮಂಗಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆಯು ಇಂತಹ ಭ್ರಷ್ಟ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭಕ್ತರ ಕಾಣಿಕೆ ಹಣಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಾರ್ವಜನಿಕರು ಹಾಗೂ ಭಕ್ತಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಗಳ ಅಕ್ರಮ ಕಟಾವು ಲಿಂಕ್:ಹುಂಡಿ ಕಳ್ಳತನದ ಬೆನ್ನಲ್ಲೇ ಈ ಹಿಂದೆ ನಡೆದಿದ್ದ ಲಕ್ಷಾಂತರ ರು. ಮೌಲ್ಯದ ನೀಲಗಿರಿ ಮರಗಳ ಅಕ್ರಮ ಕಟಾವು ಪ್ರಕರಣದ ನಡುವೆ ನಿಕಟ ಸಂಬಂಧವಿರುವುದು ಈಗ ಸ್ಪಷ್ಟವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆಯೂ ಸಹ ದೇವಾಲಯದ ಆಸ್ತಿಯಾಗಿದ್ದ ಮರಗಳನ್ನು ಸಹ ಅಕ್ರಮವಾಗಿ ಕಟಾವು ಮಾಡಿ ಮಾರಾಟ ಮಾಡಲಾಗಿತ್ತು. ಹಿಂದೆಯೂ ಎಣಿಕೆ ಕಾರ್ಯದಲ್ಲಿ ಹಣ ಎಗರಿಸುತ್ತಿದ್ದ. ಅದರೆ ದುರದೃಷ್ಟವಶಾತ್ ಇಂದು ಸಿಕ್ಕಿಬಿದ್ದಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.ವ್ಯವಸ್ಥೆಯ ವೈಫಲ್ಯ ಹಾಗೂ ಭದ್ರತೆಯ ಪ್ರಶ್ನೆ:
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಇಂತಹ ದೊಡ್ಡ ದೇವಾಲಯಗಳಲ್ಲಿ ಹುಂಡಿ ಎಣಿಕೆ ಸಮಯದಲ್ಲಿ ಇನ್ನೂ ಹೆಚ್ಚಿನ ಬಿಗಿ ಭದ್ರತೆ ಹಾಗೂ ಪಾರದರ್ಶಕತೆ ಇರಬೇಕಾದ ಅಗತ್ಯತೆ ಇದೆ. ಇಂತಹ ಜವಾಬ್ದಾರಿಯುತ ಜಾಗಗಳಲ್ಲಿ ಕೆಲಸ ಮಾಡುವ ನೌಕರರ ನಡತೆ ಹಾಗೂ ಹಿನ್ನೆಲೆಯ ಬಗ್ಗೆ ಕಟ್ಟುನಿಟ್ಟಾದ ನಿಗಾ ಇಡಬೇಕಾದ ಅನಿವಾರ್ಯತೆ ಇದೆ.ಸ್ಥಳೀಯರ ಜಾಗರೂಕತೆಗೆ ಶ್ಲಾಘನೆ:
ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಸೇವಾಕರ್ತರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ಹಣ ಲೂಟಿಯಾಗುವುದು ತಪ್ಪಿದಂತಾಗಿದೆ. ಇವರ ಕಾರ್ಯ ಶ್ಲಾಘನೀಯ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದರು.ಭಕ್ತರ ಹಾಗೂ ಸಾರ್ವಜನಿಕರ ಆಕ್ರೋಶ:
ಮುಜರಾಯಿ ಇಲಾಖೆಯು ಇಂತಹ ಭ್ರಷ್ಟ ಸಿಬ್ಬಂದಿಗಳನ್ನು ಕೇವಲ ಸಸ್ಪೆಂಡ್ ಮಾಡುವುದಷ್ಟೇ ಅಲ್ಲದೆ, ಸೇವೆಯಿಂದ ಕಾಯಂ ಆಗಿ ವಜಾಗೊಳಿಸಿ ಸೂಕ್ತ ಕಾನೂನು ಶಿಕ್ಷೆ ಕೊಡಿಸಬೇಕಿದೆ. ದೇವಸ್ಥಾನದ ಆಸ್ತಿ ಮತ್ತು ಭಕ್ತರ ಕಾಣಿಕೆಗೆ ಸೂಕ್ತ ಭದ್ರತೆ ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ.ಹುಂಡಿಯಲ್ಲಿ ೧೩.೮೮.೬೦೫ ರು. ಸಂಗ್ರಹ:
ಗುರುವಾರ ಬೆಳಿಗ್ಗೆಯಿಂದ ನಡೆದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಹುಂಡಿಯಲ್ಲಿ ೧೩.೮೮.೬೦೫ ಲಕ್ಷ ರು. ಸಂಗ್ರಹವಾಗಿದೆ. ಅನ್ನದಾಸೋಹ ಹುಂಡಿಯಲ್ಲಿ ೫೫ ಸಾವಿರ ಹಣ ಸಂಗ್ರಹವಾಗಿದೆ ಎಂದು ಇಓ ಮಂಜುನಾಥ್ ತಿಳಿಸಿದರು. ಈ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಎಡಿಸಿ ಮಂಗಳಾ, ದೇಗುಲ ಇಓ ಮಂಜುನಾಥ್, ಪೇಷ್ಕರ್ ಸುರೇಶ್ ಬಾಬು, ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಅಮರೇಶ, ಅಜಯ್ ಇದ್ದರು.