ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗೇರರು: ಸಿಎಂ ಸಿದ್ದರಾಮಯ್ಯ

| Published : May 22 2024, 12:54 AM IST

ಸಾರಾಂಶ

ಮೊದಲಬಾರಿಗೆ 1983 ರಲ್ಲಿ ನಾವು ಒಟ್ಟಿಗೆ ಶಾಸಕರಾದವರು ಅಂದಿನಿಂದ ಕೊನೆಯವರೆಗೆ ಆತ್ಮೀಯ ಸ್ನೇಹಿತರಾಗಿದ್ದರು ಎಂದು ಸಿಎಂ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಸಂತ ಬಂಗೇರ ಅವರದ್ದು ನಿಷ್ಟುರ ನೇರ ನಡೆನುಡಿಯ ವ್ಯಕ್ತಿತ್ವ. ಸತ್ಯವನ್ನು ಹೇಳಲು ಎಂದಿಗೂ ಹಿಂಜರಿದವರಲ್ಲ, ಯಾವುದೇ ಸನ್ನಿವೇಶ, ಸಂದರ್ಭಗಳಿರಲಿ ಸತ್ಯವನ್ನು ನೇರವಾಗಿ ಹೇಳುವುದು ಅವರ ವಿಶೇಷಗುಣವಾಗಿತ್ತು. ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗೇರ ಅವರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳ್ತಂಗಡಿಯಲ್ಲಿ ಮಂಗಳವಾರ ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಬಂಗೇರರು ಬಡವರ ಪರವಾಗಿ ಕೆಲಸ ಮಾಡಿದರೇ ಹೊರತು ತನಗಾಗಿ ಏನೂ ಮಾಡಿದವರಲ್ಲ ಅವರು ಐದು ಬಾರಿ ಶಾಸಕರಾದರೂ ಎಂದೂ ಮಂತ್ರಿ ಆಗಲು ಪ್ರಯತ್ನಿಸಿದವರಲ್ಲ. ಮೊದಲಬಾರಿಗೆ 1983 ರಲ್ಲಿ ನಾವು ಒಟ್ಟಿಗೆ ಶಾಸಕರಾದವರು ಅಂದಿನಿಂದ ಕೊನೆಯವರೆಗೆ ಆತ್ಮೀಯ ಸ್ನೇಹಿತರಾಗಿದ್ದರು ಎಂದು ಸಿಎಂ ಸ್ಮರಿಸಿದರು.

ನಾನು ಮತ್ತು ವಸಂತ ಬಂಗೇರ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು: ಸತ್ಯ, ಬಡವರ ಪರ ಕಾಳಜಿ, ರಾಜಿ ರಹಿತ ಜನಪರ ಕೆಲಸಗಳ ಮೂಲಕ ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿಕೊಂಡವರು ಬಂಗೇರ ಅವರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದರು.

2023 ರಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಈ ಬಾರಿ ಸ್ಪರ್ಧಿಸಿದ್ದರೆ ಖಂಡಿತಾ ಗೆದ್ದು ಮಂತ್ರಿಯಾಗುತ್ತಿದ್ದರು ಎಂದು ಸಿಎಂ ಹೇಳಿದರು. ವಸಂತ ಬಂಗೇರ ಅವರ ಸಾವಿನಿಂದ ರಾಜ್ಯ ರಾಜಕಾರಣ ಅತ್ಯಂತ ಬಡವಾಗಿದೆ. ಇವರ ಆರೋಗ್ಯ ಚೇತರಿಸಿಕೊಳ್ಳುತ್ತದೆ ಮತ್ತಷ್ಟು ಕಾಲ ನಮ್ಮ ಜೊತೆಗೆ ಇರುತ್ತಾರೆ ಎನ್ನುವ ಆಸೆ ಇತ್ತು. ಆದರೆ ನಮ್ಮನ್ನು ಅಗಲಿಬಿಟ್ಟಿರುವುದು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಜನಾರ್ದನ ಪೂಜಾರಿ, ಸ್ಪೀಕರ್ ಯು.ಟಿ. ಖಾದರ್ ಮತ್ತು ವಸಂತ ಬಂಗೇರ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.ಬಸ್‌ ನಿಲ್ದಾಣಕ್ಕೆ ಬಂಗೇರ ಹೆಸರು

ಬೆಳ್ತಂಗಡಿಯ ನೂತನ ಬಸ್‌ ನಿಲ್ದಾಣಕ್ಕೆ ವಸಂತ ಬಂಗೇರ ಅವರ ಹೆಸರಿಡಲು ಸರ್ಕಾರ ಸಿದ್ಧವಿದೆ. ಜೊತೆಗೆ ಅವರ ಪ್ರತಿಮೆಯನ್ನು ವೃತ್ತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.