ಬಂಗಿ ದೊಡ್ಡ ಮಂಜುನಾಥ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಕಾದಂಬರಿ, ನಾಟಕ, ಲೇಖನ, ಪ್ರಬಂಧ ಹಾಗೂ ಸಣ್ಣಕತೆಗಳ ಮೂಲಕ ತಮ್ಮದೇ ಆದ ಸಾಹಿತ್ಯಿಕ ಗುರುತನ್ನು ಮೂಡಿಸಿದ್ದಾರೆ.

ಕಂಪ್ಲಿ: ಪಟ್ಟಣದಲ್ಲಿ ನ.13ರಂದು ನಡೆಯಲಿರುವ ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಲೇಖಕ, ಸಾಹಿತಿ ಬಂಗಿ ದೊಡ್ಡ ಮಂಜುನಾಥ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಂಗಿ ದೊಡ್ಡ ಮಂಜುನಾಥ ಅವರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಹಾಗೂ ಸಾಧನೆ ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಬಂಗಿ ದೊಡ್ಡ ಮಂಜುನಾಥ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಕಾದಂಬರಿ, ನಾಟಕ, ಲೇಖನ, ಪ್ರಬಂಧ ಹಾಗೂ ಸಣ್ಣಕತೆಗಳ ಮೂಲಕ ತಮ್ಮದೇ ಆದ ಸಾಹಿತ್ಯಿಕ ಗುರುತನ್ನು ಮೂಡಿಸಿದ್ದಾರೆ. ಇದುವರೆಗೆ ಒಂಬತ್ತು ಕಾದಂಬರಿ ಹಾಗೂ ಒಂದು ಏಕಾಂಕ ನಾಟಕ ರಚಿಸಿದ್ದಾರೆ. ಕಂಪ್ಲಿ ಕುರಿತ ಸಂಶೋಧನಾ ಲೇಖನಗಳ ಸಂಪಾದಕರಾಗಿ ಹಾಗೂ ಸಿರಿಗನ್ನಡ ಕವನ ಸಂಕಲನದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ವಿವಿಧ ಲೇಖನ, ಪ್ರಬಂಧ ಮತ್ತು ಸಣ್ಣಕತೆಗಳು ನಾಡಿನ ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ ಎಂದು ವಿವರಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಬಂಧ ಸಂಕಲನದ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವುದು ಇವರ ಸಾಹಿತ್ಯಿಕ ಸಾಧನೆಗೆ ಮತ್ತೊಂದು ಗರಿಯಾಗಿದೆ. ಇವರ ಬೆಂಕಿಯ ಶೀತ ಕಾದಂಬರಿಗೆ ಸೇಡಂನ ರಾಜ್ಯಮಟ್ಟದ ಕೋಡೆಕಲ್ಲ ಚನ್ನಬಸವಣ್ಣ ಪ್ರಕಾಶನದ ಕಂದ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಪ್ರಸ್ತುತ ಪತ್ರಿಕಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಅವರು ತಾಲೂಕು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯಿಕ ಬದುಕು ಮತ್ತು ಕಾದಂಬರಿಗಳ ಕುರಿತಾಗಿ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು 2025-26ನೇ ಸಾಲಿನಲ್ಲಿ ಕಿರುಪ್ರಬಂಧ ರಚಿಸಿರುವುದು ಅವರ ಸಾಹಿತ್ಯದ ವ್ಯಾಪ್ತಿ ಹಾಗೂ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಇಂತಹ ಬಹುಮುಖ ಪ್ರತಿಭೆಯ ಲೇಖಕರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕಂಪ್ಲಿ ತಾಲೂಕಿನ ಸಾಹಿತ್ಯಾಸಕ್ತರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಕಾರ್ಯದರ್ಶಿ ಅಂಬಿಗರ ಮಂಜುನಾಥ, ಕೋಶಾಧ್ಯಕ್ಷ ಎಸ್.ಡಿ. ಬಸವರಾಜ, ಮುಖಂಡ ಎ.ಸಿ.ದಾನಪ್ಪ, ಕಾಳಿಂಗವರ್ಧನ ಹಾದಿಮನಿ, ಎಸ್. ಶಾಮಸುಂದರರಾವ್, ಯು.ಎಂ. ವಿದ್ಯಾಶಂಕರ್, ಡಾ.ಬಿ. ಸುನೀಲ್, ಬಿ.ಎಂ. ರುದ್ರಯ್ಯ, ಅಶೋಕ ಕುಕನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.