ಬಂಜಾರ ಸಮಾಜದಿಂದ ಗೆದ್ದಿರುವ ಏಕೈಕ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬಂಜಾರ ಸಮಾಜದ ಸಂಘಟನೆಗಳು, ಸಮಾಜ ಬಾಂಧವರು ಹಾಗೂ ಲಮಾಣಿ ಬೆಂಬಲಿಗರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿ: ಬಂಜಾರ ಸಮಾಜದಿಂದ ಗೆದ್ದಿರುವ ಏಕೈಕ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬಂಜಾರ ಸಮಾಜದ ಸಂಘಟನೆಗಳು, ಸಮಾಜ ಬಾಂಧವರು ಹಾಗೂ ಲಮಾಣಿ ಬೆಂಬಲಿಗರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಮಾವಣೆಗೊಂಡಿದ್ದ ಬಂಜಾರ ಸಮಾಜದ ಮುಖಂಡರು, ಪದಾಧಿಕಾರಿಗಳು, ಶಾಸಕರ ಅಭಿಮಾನಿಗಳು ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು. ಹೊಸ್ಮನಿ ಸಿದ್ದಪ್ಪ ವೃತ್ತ, ಪಿ.ಬಿ. ರಸ್ತೆ ಮಾರ್ಗವಾಗಿ ಸಾಗಿ ಜೆ.ಎಚ್. ಪಟೇಲ್ ವೃತ್ತವನ್ನು ತಲುಪಿದರು. ರುದ್ರಪ್ಪ ಲಮಾಣಿ ಪರ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್‌ನ ನಾಯಕರನ್ನು ಒತ್ತಾಯಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಬಂಜಾರ ಸಂತ ಸೇವಾಲಾಲ್ ಸಂಘದ ಜಿಲ್ಲಾಧ್ಯಕ್ಷ ವಿಷ್ಣುಕುಮಾರ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಏಕೈಕ ಬಂಜಾರ ಸಮುದಾಯದ ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಅವರು ಬ್ಯಾಡಗಿ ಹಾಗೂ ಹಾವೇರಿಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018ರ ಕಾಂಗ್ರೆಸ್ ಅವಧಿಯಲ್ಲಿ ಮುಜರಾಯಿ ಖಾತೆ ಸಚಿವರಾಗಿಯೂ ಸೇವೆ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಗೆದ್ದಿರುವ ಅವರಿಗೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಹಾಗಾಗಿ ವಿಧಾನಸಭೆ ಉಪ ಸಭಾಧ್ಯಕ್ಷರಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಅಧಿಕಾರ ನಿರ್ವಹಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನೂತನ ಮಂತ್ರಿಮಂಡಲ ರಚನೆಯಾಗಿದ್ದು, ಈ ಅವಧಿಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.ಬಳಿಕ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್.ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸುಧೀರ್ ಲಮಾಣಿ, ಐ.ಡಿ. ಲಮಾಣಿ, ಕರ್ನಾಟಕ ಸಂತ ಬಂಜಾರ ಸೇವಾಲಾಲ್ ಸಂಘದ ರಾಜ್ಯಾಧ್ಯಕ್ಷ ಜಯರಾಮ್ ಮಾಳಾಪುರ, ಮುತ್ತಪ್ಪ ಕೊರವರ, ತುಕ್ಕಪ್ಪ ಯಲ್ಲಾಪುರ, ನಿಂಗರಾಜ ನಾಯ್ಕ, ಸಂತೋಷ ಲಮಾಣಿ, ಪರಮೇಶ ಲಮಾಣಿ, ಜಯಪ್ಪ ಲಮಾಣಿ, ಸುಭಾಷ ಲಮಾಣಿ, ರವಿ ಲಮಾಣಿ, ಪಕ್ಷದ ಕಾರ್ಯಕರ್ತರಾದ ಮಲ್ಲೇಶಪ್ಪ ಬಂಕಾಪುರ, ಶಂಕರ ಬಾಲಕ್ಕನವರ, ಗೀತಾ ಪ್ರಕಾಶ ಸೇರಿದಂತೆ ಬಂಜಾರ ಸಮಾಜದ ಅನೇಕರುರು ಪಾಲ್ಗೊಂಡಿದ್ದರು.