ಸಾರಾಂಶ
ಮುಂಬೈಯ ಸ್ಮಿತ್ ಭಾವುಚಾ ಎಂಬಲ್ಲಿ ಪೋರ್ಚುಗೀಸರ ಹಡಗು ಸಿಕ್ಕಿಹಾಕಿಕೊಂಡಾಗ ಅದನ್ನು ತಮ್ಮ ಜಾಣತನದಿಂದ ದಡ ಸೇರಿಸಿದ ಸೇವಾಲಾಲರಿಗೆ ಪೋರ್ಚುಗೀಸರು ಮುತ್ತಿನ ಹಾರ ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಸೇವಾಲಾಲ್‌ರನ್ನು ಮೋತಿವಾಳೋ ಎಂದು ಕರೆಯುತ್ತಿದ್ದರು
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಷ್ಟ್ರದಲ್ಲಿಯೇ ಅತೀ ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿದ ಬಂಜಾರಾ ಸಮಾಜವಾಗಿದ್ದು, ಶ್ರಮಜೀವಿ ಮತ್ತು ಪ್ರಾಮಾಣಿಕತೆಯಾಗಿ ಬದುಕಬೇಕೆಂದು ಸಂತ ಸೇವಾಲಾಲರು ಮೌಲ್ಯಗಳನ್ನು ಸಾರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಸೇವಲಾಲ್ ಜಯಂತ್ಯುತ್ಸವ ಸಮಿತಿ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಂಬಾಣಿ ಸಮುದಾಯ ಸಾವಿರಾರು ವರ್ಷಗಳಿಂದ ನಗರ ಮತ್ತು ಗ್ರಾಮೀಣ ಜೀವನಗಳಿಂದ ದೂರವಿದ್ದು, ಅರಣ್ಯವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಇವರಲ್ಲಿನ ಅಜ್ಞಾನ ಅಂಧಕಾರ ದೂರ ಮಾಡಿ ಜ್ಞಾನ ಮಾರ್ಗ ತೋರಿದ ಸೇವಾಲಾಲರನ್ನು ಬಂಜಾರರು ಮೋತಿವಾಳು ಅಥವಾ ಲಾಲ ಮೋತಿ ಎಂದು ಕರೆಯುತ್ತಿದ್ದರು. ಮುಂಬೈಯ ಸ್ಮಿತ್ ಭಾವುಚಾ ಎಂಬಲ್ಲಿ ಪೋರ್ಚುಗೀಸರ ಹಡಗು ಸಿಕ್ಕಿಹಾಕಿಕೊಂಡಾಗ ಅದನ್ನು ತಮ್ಮ ಜಾಣತನದಿಂದ ದಡ ಸೇರಿಸಿದ ಸೇವಾಲಾಲರಿಗೆ ಪೋರ್ಚುಗೀಸರು ಮುತ್ತಿನ ಹಾರ ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಇವರನ್ನು ಮೋತಿವಾಳೋ ಎಂದು ಕರೆಯುತ್ತಿದ್ದರು ಎಂದರು.ಸಂತ ಸೇವಾಲಾಲ ಅವರು ಬಂಜಾರ ಸಮಾಜದ ಒಂದು ಶಕ್ತಿ ಬೆಳಕು ಆಗಿದ್ದಾರೆ. ಅವರ ಮೌಲ್ಯ, ಸಮಾಜಮುಖಿ ಕಾರ್ಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಜಿಪಂ ಸಿಇಒ ಗರೀಮಾ ಪನ್ವಾರ ಮಾತನಾಡಿ, ಸಂತ ಸೇವಾಲಾರ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನ ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆ ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಇವರ ಆದರ್ಶಗಳನ್ನು ಪಾಲಿಸೋಣ ಎಂದರು.ಈ ವೇಳೆ ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ- ಋಣ ನಿರ್ವಹಣೆ ಇಲಾಖೆಯ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಚವ್ಹಾಣ ಹಾಗೂ ಕಾಡಂಗೇರಾ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕ ರಾಜು ರಾಠೋಡ್ ವಿಶೇಷ ಉಪನ್ಯಾಸ ನೀಡಿದರು.
ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಯಂತಿ ಸಮಿತಿ ಜಿಲ್ಲಾಧ್ಯಕ್ಷ ದೇವರಾಜ ಎಲ್. ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಉತ್ತರಾದೇವಿ ಮಠಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ, ಕೃಷಿ ಇಲಾಖೆ ಅಧಿಕಾರಿ ರಾಜಕುಮಾರ, ಸಮಾಜದ ಮುಖಂಡ ತೇಜರಾಜ್ ರಾಠೋಡ್, ಪರಶುರಾಮ ಚವ್ಹಾಣ್, ವಕೀಲ ಗೋವಿಂದ ಜಾಧವ್, ಚಂದ್ರಶೇಖರ ಜಾಧವ್, ಮುಖಂಡ ಕಿಶನ್ ರಾಠೋಡ್ ಇತರರಿದ್ದರು.