ವಿದ್ಯಾರ್ಥಿ ಆತ್ಮಹತ್ಯೆ, ಪ್ರತಿಭಟನೆ: ಮೇಲ್ವಿಚಾರಕ ಅಮಾನತು

| Published : Feb 17 2024, 01:19 AM IST

ವಿದ್ಯಾರ್ಥಿ ಆತ್ಮಹತ್ಯೆ, ಪ್ರತಿಭಟನೆ: ಮೇಲ್ವಿಚಾರಕ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಫೆ.14ರಂದು ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಹಿರೇಹುಸೇನಪ್ಪ ಸಾವಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತೆದಾರ್ ಅವರು ಶುಕ್ರವಾರ ಮೇಲ್ವಿಚಾರಕ ರವಿಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಸಿಂಧನೂರು: ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಫೆ.14ರಂದು ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಹಿರೇಹುಸೇನಪ್ಪ ಸಾವಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತೆದಾರ್ ಅವರು ಶುಕ್ರವಾರ ಮೇಲ್ವಿಚಾರಕ ರವಿಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಮೃತ ವಿದ್ಯಾರ್ಥಿ ಹಿರೇಹುಸೇನಪ್ಪ ಅವರ ತಾಯಿ ಹುಸೇನಮ್ಮ ಅವರು ತಮ್ಮ ಮಗನು ವಿದ್ಯಾರ್ಥಿಗಳ ಮುಖಂಡನಾಗಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಆಗಾಗ್ಗೆ ಮೇಲ್ವಿಚಾರಕರನ್ನು ಕೇಳುತ್ತಿದ್ದ. ಸರಿಯಾದ ಊಟ, ನೀರಿನ ವ್ಯವಸ್ಥೆ, ಸಮರ್ಪಕವಾದ ಆಹಾರ, ಶೌಚಾಲಯ ವ್ಯವಸ್ಥೆ ನೀಡುವಂತೆ ಒತ್ತಾಯಿಸುತ್ತಿದ್ದ. ಇದರಿಂದ ಕುಪಿತರಾದ ಅಧಿಕಾರಿಗಳು ಆತನಿಗೆ ಜಾತಿ ನಿಂದನೆ ಮಾಡುವ ಮೂಲಕ ಅವಮಾನ ಮಾಡಿರುವುದ ಹಿನ್ನೆಲೆಯಲ್ಲಿ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಬಸವರಾಜ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ ಶುಕ್ರವಾರ ಬೆಳಗ್ಗೆ ಛಲವಾದಿ ಮಹಾಸಭಾದಿಂದ ಸಾರ್ವಜನಿಕ ಆಸ್ಪತ್ರೆ ಮತ್ತು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಾ.ಕೆ ಮತ್ತು ಮೇಲ್ವಿಚಾರಕ ರವಿಚಂದ್ರ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಂದ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಲಾಯಿತು.

ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ತನಕ ಆಸ್ಪತ್ರೆಯಿಂದ ಶವ ತೆಗೆದುಕೊಂಡು ಹೋಗುವುದಿಲ್ಲವೆಂದು ಛಲವಾದಿ ಮಹಾಸಭಾದ ಮುಖಂಡರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಹೇಶ ಪೋತೆದಾರ್ ಸ್ಥಳಕ್ಕೆ ಭೇಟಿ ನೀಡಿ ಮೃತ ವಿದ್ಯಾರ್ಥಿಯ ಕುಟುಂಬದವರಿಗೆ 4.12 ಲಕ್ಷ ರು. ಪರಿಹಾರದ ಚೆಕ್ ವಿತರಣೆ ಮಾಡಿದರು. ಅಲ್ಲದೆ ವಿದ್ಯಾರ್ಥಿಗಳ ಬೇಡಿಕೆಯಂತೆ ಘಟನೆ ಕುರಿತು ಪರಿಶೀಲನೆ ನಡೆಸಿ ಮೇಲ್ವಿಚಾರಕ ರವಿಚಂದ್ರ ಅವರನ್ನು ಸ್ಥಳದಲ್ಲಿಯೇ ಸೇವೆಯಿಂದ ಅಮಾನತುಗೊಳಿಸಿದರು.

ಈ ವೇಳೆ ತಹಸೀಲ್ದಾರ್ ಅರುಣ ದೇಸಾಯಿ ಛಲವಾದಿ ಮಹಾಸಭಾದ ಮುಖಂಡರಾದ ರಾಮಣ್ಣ ಗೋನವಾರ, ನರಸಪ್ಪ ಕಟ್ಟಿಮನಿ, ಹನುಮಂತಪ್ಪ ವಕೀಲ, ಅಯ್ಯಪ್ಪ ವಕೀಲ, ಹನುಮಂತಪ್ಪ ಹಂಪನಾಳ, ಚನ್ನಪ್ಪ ಅಮೀನಗಡ, ದುಗ್ಗಪ್ಪ ಮಲ್ಲಾಪುರ, ವೀರೇಶ ಹಂಚಿನಾಳ, ಕೆ.ಅಂಬಣ್ಣ ಮಲ್ಲಾಪುರ, ಮೌನೇಶ ಜಾಲವಾಡಗಿ ಇದ್ದರು.