ಗಂಗಾವತಿ: ನಗರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತರಕ್ಷಣೆಯೇ ನನ್ನ ಆದ್ಯತೆಯಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಜಗಜೀವನ್ ರಾಮ್ ವೃತ್ತದ ಬಳಿ ಜರುಗಿದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ₹30 ಕೋಟಿ ವೆಚ್ಚದ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 60:40ರ ಅನುಪಾತ ಹಾಗೂ ಎನ್‌ಜಿಟಿ ನಿಧಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, 8 ತಿಂಗಳ ಒಳಗಾಗಿ ಯೋಜನೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ನಗರದ ಭದ್ರತೆ ಬಲಪಡಿಸಲು ಕೆಕೆಆರ್‌ಡಿಬಿ ಅನುದಾನದ ₹2 ಕೋಟಿ ವೆಚ್ಚದಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳು ಹಾಗೂ ವಿಡಿಯೋ ವಾಲ್, ಸರ್ವರ್ ವ್ಯವಸ್ಥೆಯನ್ನು ಉದ್ಘಾಟಿಸಲಾಗಿದೆ ಎಂದರು.

ಬೀದರ್ ಮತ್ತು ಮೈಸೂರು ನಗರಗಳ ಆನಂತರ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಈ ಸುಧಾರಿತ ಎಐ ಸುರಕ್ಷತಾ ವ್ಯವಸ್ಥೆ ಅಳವಡಿಸಿಕೊಂಡ ಕರ್ನಾಟಕದ ಪ್ರಥಮ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಗಂಗಾವತಿ ಪಾತ್ರವಾಗಿದೆ. ಈ ತಂತ್ರಜ್ಞಾನವು ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೂರಕವಾಗಿದ್ದು, ಅಪರಾಧಮುಕ್ತ ಹಾಗೂ ಸುರಕ್ಷಿತ ಗಂಗಾವತಿ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ ಎಂದರು.


ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಎಂ. ಗುಂಡೂರು, ನಗರಸಭಾ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಕಾರ್ಯಪಾಲಕ ಅಭಿಯಂತರ ಶರಣಪ್ಪ ಎಸ್. ನಾಯಕ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ, ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ್, ಮನೋಹರಗೌಡ, ಪರಶುರಾಮ ಮಡ್ಡೇರ್, ಅಮರಜ್ಯೋತಿ ನರಸಪ್ಪ, ತಿಪ್ಪೇರುದ್ರಸ್ವಾಮಿ, ಚಂದ್ರಶೇಖರ ಹಿರೂರು, ಡಿ.ಕೆ. ಆಗೋಲಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.