ಗಜೇಂದ್ರಗಡ: ತಾಲೂಕಿನ ೧೭ ತಾಂಡಾದ ನಾಯಕ, ಕಾರಬಾರಿ, ಡಾವ್, ಗುರುಹಿರಿಯರ ಹಾಗೂ ಯುವಕರ ಸಮ್ಮುಖದಲ್ಲಿ ಇತ್ತೀಚೆಗೆ ಕಾಲಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ವರದಕ್ಷಿಣೆ, ಕನ್ಯಾ ಶುಲ್ಕ ನಿಷೇಧಿಸಿ, ಸರಳ ಮದುವೆಗೆ ಠರಾವು ಪಾಸ್ ಮಾಡಲಾಯಿತು.
ದಿನನಿತ್ಯದ ಜೀವನ ಸಾಗಿಸಲು ಬೆಲೆ ಏರಿಕೆ ದುಸ್ತರ ಮಾಡಿದ್ದು, ಇಂತಹ ದಿನಗಳಲ್ಲಿ ಮದುವೆ ಎಂದರೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಎಲ್ಲಿಲ್ಲದ ಒತ್ತಡವಾಗುತ್ತದೆ. ಬಡ ಕುಟುಂಬಗಳು, ಹೆಣ್ಣು ಹೆತ್ತವರ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಆಚರಣೆಗಳನ್ನು ನಿಷೇಧಿಸುವ ನಿರ್ಧಾರವನ್ನು ಹಿರಿಯರು ಪ್ರಕಟಿಸಿ ಠರಾವು ಪಾಸ್ ಮಾಡಲಾಯಿತು.ವರದಕ್ಷಿಣೆಗೆ ಕಡಿವಾಣ, ಮದುವೆಗಾಗಿ ಮಾಡುವ ದುಂದುವೆಚ್ಚಕ್ಕೆ ತಡೆ, ಮದ್ಯಪಾನ ಸೇವನೆ, ಡಿಜೆಗೆ ಸಂಪೂರ್ಣ ನಿಷೇಧ. ಮದುವೆ ಜವಳಿಗಾಗಿ, ಕಿರಾಣಿಗಾಗಿ ನೂರಾರು ಜನರು ಹೋಗದೆ ಗರಿಷ್ಠ ೨೧ ಜನರು ತೆರಳುವುದು. ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ದುಂದುವೆಚ್ಚದ ಊಟ ಹಾಕಿಸುವಂತಿಲ್ಲ. ಮದುಮಗಳಿಗೆ ಜೀವನೋಪಾಯಕ್ಕೆ ಬೇಕಾದ ಅಗತ್ಯ ಬಾಂಡೆ ಸಾಮಾಗ್ರಿಗಳನ್ನು ಮಾತ್ರ ಹಾಕಬೇಕು.ಖರ್ಚಿನಲ್ಲಿ ಸಮಪಾಲು: ಹೆಣ್ಣಿನ ಮನೆಯ ಮುಂದೆ ಮದುವೆ ಮಾಡಿದರೆ ಅರ್ಧ ಖರ್ಚು ಹಂಚಿಕೆ ಮಾಡಬೇಕು. ತಾಳಿಯಲ್ಲಿ ಗಂಡು- ಹೆಣ್ಣಿನ ಕಡೆಯವರು ಇಬ್ಬರು ಒಂದೊಂದು ತಾಳಿ ಕೊಡಿಸಬೇಕು, ತಾಳಿಗುಂಡು ಐದು ಗ್ರಾಂ ಒಳಗೆ ಇರಬೇಕು. ಸಂಪ್ರದಾಯದಂತೆ ಬಳೆಗಳನ್ನು ಮಾತ್ರ ಮಹಿಳೆಯರಿಗೆ ಕೊಡಿಸಬೇಕು. ಹೀಗೆ ಅನೇಕ ಉಪಯುಕ್ತ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅಲ್ಲದೆ, ಹಾಡ್ ಬಕರಾ ಅಂದರೆ ವ್ಯಕ್ತಿಯೊಬ್ಬ ಸಾವಿಗೀಡಾದಾಗ ಮೂರನೇ ದಿನ ಮಾಡುವ ಮಾಂಸಾಹಾರಿ ಊಟವನ್ನು ನಿಷೇಧಿಸಲಾಯಿತು. ಯಾವುದೇ ಸಮಾಜದವರು, ಬೀಗರು ಪ್ರಾಣಿಯನ್ನು ಬಲಿ ಕೊಡದೆ, ಕುಟುಂಬಸ್ಥರ ದುಃಖದಲ್ಲಿ ಪಾಲ್ಗೊಂಡು ಸಾಂತ್ವನ ಹೇಳುವುದು, ಧೈರ್ಯ ತುಂಬುವುದು ಹಾಗೂ ಸಂಪ್ರದಾಯದ ಪದ್ಧತಿಯನ್ನು ಮಾತ್ರ ಆಚರಣೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.ಇತರ ತಾಂಡಾಗಳ ಮನವೊಲಿಕೆ: ಇದೇ ನಿಯಮವನ್ನು ದೇಶದ ಯಾವುದೇ ತಾಂಡಾದ ಜತೆಗೆ ಸಂಬಂಧ ಬೆಳೆಸಿದರೆ ಪಾಲನೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಒಂದು ವೇಳೆ ೧೭ ತಾಂಡಾ ಹೊರತುಪಡಿಸಿ ಇತರೆ ಜಿಲ್ಲೆಯ ತಾಂಡಾದವರು ಹೆಚ್ಚಿನ ವರದಕ್ಷಿಣಿ, ದುಂದುವೆಚ್ಚಕ್ಕೆ ಮುಂದಾದರೆ ಹಿರಿಯರು ತಿಳಿಸಿ ಹೇಳಬೇಕು.
ಅವರು ಸಹ ಇಲ್ಲಿ ಕೈಗೊಳ್ಳಲಾದ ನಿರ್ಧಾರವನ್ನು ಪಾಲನೆ ಮಾಡುವಂತೆ ಮನವೊಲಿಸಿ ಸಂಬಂಧಗಳನ್ನು ಬೆಳೆಸಬೇಕು. ವರದಕ್ಷಿಣೆ ಬೇಡಿಕೆ ಹಾಗೂ ಇತರೆ ವಿಷಯಗಳ ಬಗ್ಗೆ ಇಲ್ಲಿ ಕೈಗೊಳ್ಳಲಾದ ನಿರ್ಧಾರವನ್ನು ಯಾರಾದರೂ ತಿರಸ್ಕರಿಸಿದರೆ ತಾಂಡಾದ ಹಿರಿಯರು ಕೈಗೊಳ್ಳುವ ಕ್ರಮಕ್ಕೆ ಬದ್ಧರಾಗಬೇಕು ಎಂಬ ಮಾತಿಗೆ ಸಮ್ಮತಿ ಸೂಚಿಸಲಾಯಿತು. ಈ ವೇಳೆ ಸುರೇಶ ರಾಠೋಡ, ಯಮನಪ್ಪ ರಾಠೋಡ, ಮನ್ನುನಾಯಕ ರಾಠೋಡ, ದುರುಗಪ್ಪ ಮಾಳೋತ್ತರ, ಶಿವಪುತ್ರಪ್ಪ ಮಾಳೋತ್ತರ, ಗೋವಿಂದಪ್ಪ ಗುಗಲಲೋತ್ತರ, ತುಕ್ಕಪ್ಪ ರಾಠೋಡ, ಪಡಿಯಪ್ಪ ಚವ್ಹಾಣ ಸೇರಿದಂತೆ ಗಜೇಂದ್ರಗಡ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಭೈರಾಪುರ, ಜನತಾ ಪ್ಲಾಟ್, ನೆಲ್ಲೂರು ಸರ್ಜಾಪುರ, ರುದ್ರಾಪುರ, ಅಮರಗಟ್ಟಿ, ಕೊಡಗಾನೂರ, ಬೆಣಚಮಟ್ಟಿ, ನಾಗರಸಕೊಪ್ಪ, ಗೌಡಗೇರಿ ತಾಂಡಾದ ಪ್ರಮುಖರು ಇದ್ದರು.