ಸಾರಾಂಶ
ಸರ್ಕಾರದ ವಿವಿಧ ಯೋಜನೆಗಳ ನಗದು ಹಣ ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ರೀತಿ ಜಮಾ ಆಗಬೇಕಾದರೆ ಬ್ಯಾಂಕ್ ಖಾತೆ ಮತ್ತು ಆಧಾರ್ ಮ್ಯಾಪಿಂಗ್ ಆಗರಬೇಕು.
ಜಿ.ಡಿ. ಹೆಗಡೆ
ಕಾರವಾರ:ಉತ್ತರ ಕನ್ನಡ ಜಿಲ್ಲೆ ಬ್ಯಾಂಕ್ ಖಾತೆ ಮತ್ತು ಆಧಾರ್ ಮ್ಯಾಪಿಂಗ್‌ನಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಒಟ್ಟೂ ಜಿಲ್ಲೆಯಲ್ಲಿ ಬಾಕಿಯಿದ್ದ ೧,೫೭,೭೯೮ ಖಾತೆಯ ಮ್ಯಾಪಿಂಗ್ ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವೃದ್ಧಾಪ್ಯ, ವಿಧವಾ ವೇತನ, ಗೃಹಲಕ್ಷ್ಮೀ, ಅನ್ನಭಾಗ್ಯದಂತಹ ವಿವಿಧ ಯೋಜನೆಗಳ ಹಣವನ್ನು ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕೆ ಆಧಾರ್‌ನೊಂದಿಗೆ ಬ್ಯಾಂಕ್ ಖಾತೆ (ಮ್ಯಾಪಿಂಗ್) ಜೋಡಣೆಯಾಗಿರಬೇಕು. ಆದರೆ ಈ ರೀತಿ ಜೋಡಣೆಯಾಗದೇ ಫಲಾನುಭವಿ ಖಾತೆಗೆ ಹಣ ಜಮಾ ಆಗುತ್ತಿರಲಿಲ್ಲ. ಹಲವರು ಬ್ಯಾಂಕ್‌ಗಳಿಗೆ ಆಧಾರ್ ಪ್ರತಿ ನೀಡಿದ್ದರೂ ಮ್ಯಾಪಿಂಗ್ ಆಗದೇ ತೊಂದರೆ ಆಗುತ್ತಿತ್ತು. ಇದರಿಂದ ಫಲಾನುಭವಿಗೆ ಸರ್ಕಾರದ ಯೋಜನೆಯ ಲಾಭ ಸಿಗುತ್ತಿರಲಿಲ್ಲ. ಕಾರಣ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ಆಧಾರ್ ಮ್ಯಾಪಿಂಗ್ ಆಗದೇ ಇರುವ ಅರ್ಜಿಗಳನ್ನು ಪರಿಶೀಲಿಸಿ ಆಧಾರ್ ಮ್ಯಾಪಿಂಗ್ ಮಾಡಿಸಿದೆ.ಡಿ. ೨ರಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನೀಡಿದ ವರದಿಯಲ್ಲಿ ಉತ್ತರ ಕನ್ನಡದಲ್ಲಿ ಬಾಕಿಯಿದ್ದ ಎಲ್ಲ ಅರ್ಜಿ ವಿಲೇವಾರಿ ಆಗಿವೆ. ಅಂಕೋಲಾ ೧೫,೬೯೯, ಭಟ್ಕಳ ೧೩,೫೬೩, ದಾಂಡೇಲಿ ೬,೩೨೩, ಹಳಿಯಾಳ ೧,೫೩೬೦, ಹೊನ್ನಾವರ ೨೧,೮೨೮, ಕಾರವಾರ ೧೫,೭೦೪, ಕುಮಟಾ ೧೬,೩೭೯, ಮುಂಡಗೋಡ ೧೨,೩೬೧, ಸಿದ್ದಾಪುರ ೧೦,೨೩೩, ಶಿರಸಿ ೧೨,೮೨೦, ಜೋಯಿಡಾ ೭,೯೫೫, ಯಲ್ಲಾಪುರ ೮,೫೭೩ ಖಾತೆಯನ್ನು ಮ್ಯಾಪಿಂಗ್ ಮಾಡಿ ವಿಲೇವಾರಿ ಮಾಡಲಾಗಿದೆ. ಈ ಮೂಲಕ ಎಲ್ಲ ಬಾಕಿ ಉಳಿದ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣವಾದಂತಾಗಿದ್ದು, ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಸರ್ಕಾರದ ವಿವಿಧ ಯೋಜನೆಗಳ ನಗದು ಹಣ ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ರೀತಿ ಜಮಾ ಆಗಬೇಕಾದರೆ ಬ್ಯಾಂಕ್ ಖಾತೆ ಮತ್ತು ಆಧಾರ್ ಮ್ಯಾಪಿಂಗ್ ಆಗರಬೇಕು. ನಮ್ಮ ಜಿಲ್ಲೆಯಲ್ಲಿ ಇಂತಹ ಮ್ಯಾಪಿಂಗ್ ಆಗುವ ಖಾತೆಗಳು ಬಾಕಿಯಿತ್ತು. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ವಿಲೇವಾರಿ ಮಾಡಲಾಗಿದೆ ಎಂದು ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಹೇಳಿದರು.