ಬ್ಯಾಂಕ್‌ವೊಂದು ಮತ್ತೊಂದು ಬ್ಯಾಂಕ್‌ನೊಂದಿಗೆ ವಿಲೀನಗೊಂಡ ತಕ್ಷಣ, ಮೂಲ ಬ್ಯಾಂಕ್ ಹೆಸರಿನಲ್ಲಿ ನೀಡಲಾದ ಚೆಕ್ ಅಸಿಂಧುವಾಗುವುದಿಲ್ಲ ಹಾಗೂ ಚೆಕ್ ನೀಡಿದ ವ್ಯಕ್ತಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರು : ಬ್ಯಾಂಕ್‌ವೊಂದು ಮತ್ತೊಂದು ಬ್ಯಾಂಕ್‌ನೊಂದಿಗೆ ವಿಲೀನಗೊಂಡ ತಕ್ಷಣ, ಮೂಲ ಬ್ಯಾಂಕ್ ಹೆಸರಿನಲ್ಲಿ ನೀಡಲಾದ ಚೆಕ್ ಅಸಿಂಧುವಾಗುವುದಿಲ್ಲ ಹಾಗೂ ಚೆಕ್ ನೀಡಿದ ವ್ಯಕ್ತಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಭದ್ರಮ್ಮ ಎಂಬುವರ ವಿರುದ್ಧದ ದಾಖಲಾಗಿರುವ ಚೆಕ್‌ಬೌನ್ಸ್ ಪ್ರಕರಣ
ಬೆಂಗಳೂರಿನ ಗೌಡನಪಾಳ್ಯ ನಿವಾಸಿ ಭದ್ರಮ್ಮ ಎಂಬುವರು ತಮ್ಮ ವಿರುದ್ಧದ ದಾಖಲಾಗಿರುವ ಚೆಕ್‌ಬೌನ್ಸ್ ಪ್ರಕರಣ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಈ ಆದೇಶ ನೀಡಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರ ಭದ್ರಮ್ಮ ಅವರು ಲೀಲಾವತಿ ವೆಂಕಟೇಶ್ ಎಂಬುವರಿಗೆ ನೀಡಿದ್ದ ವಿಜಯಾ ಬ್ಯಾಂಕ್ ಚೆಕ್ ಬೌನ್ಸ್ ಆಗಿತ್ತು. ಇದರಿಂದ ಲೀಲಾವತಿ ಅವರು ಭದ್ರಮ್ಮಗೆ ನೋಟಿಸ್ ಜಾರಿಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೀಲಾವತಿ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಭದ್ರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಭದ್ರಮ್ಮ ಪರ ವಕೀಲರು, ಅರ್ಜಿದಾರರು ವಿಜಯಾ ಬ್ಯಾಂಕ್‌ನಲ್ಲಿರುವ ಖಾತೆಯ ಚೆಕ್ ನ್ನು ದೂರುದಾರರಿಗೆ ನೀಡಿರಲಿಲ್ಲ. ಆದರೆ, ಕಳೆದು ಹೋಗಿತ್ತು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಳೆದು ಹೋಗಿದ್ದ ಚೆಕ್ ನ್ನು ಪಡೆದುಕೊಂಡಿರುವ ದೂರುದಾರರು, ಅದನ್ನು ದುರುಪಯೋಗ ಪಡಿಸಿಕೊಂಡು, ಬ್ಯಾಂಕ್‌ಗೆ ಹಾಕಿದ್ದಾರೆ. ಅಲ್ಲದೆ, ವಿಜಯಬ್ಯಾಂಕ್ 2019ರಲ್ಲಿ ಬ್ಯಾಂಕ್ ಆಫ್ ಬರೋಡಾದೊಂದಿಗೆ ವೀಲೀನಗೊಳಿಸಲಾಗಿತ್ತು ಮತ್ತು ಬ್ಯಾಂಕ್ ಸ್ವತಃ ಹಿಂಬರಹ ನೀಡಿದ್ದು, ಅಂತಹ ಬ್ಯಾಂಕ್ ಅಸ್ತಿತ್ವದಲ್ಲಿಲ್ಲ ಎಂಬುದಾಗಿ ತಿಳಿಸಿದೆ. ಹೀಗಾಗಿ ಅರ್ಜಿದಾರರ ಯಾವುದೇ ಅಪರಾಧ ಕೃತ್ಯವೆಸಗಿಲ್ಲ ಆದ್ದರಿಂದ ಪ್ರಕರಣ ರದ್ದುಮಾಡಬೇಕು ಎಂದು ಕೋರಿದ್ದರು.
ವಾದ ತಿರಸ್ಕರಿಸಿದ ಪೀಠ
ಈ ವಾದ ತಿರಸ್ಕರಿಸಿದ ಪೀಠ, ಅರ್ಜಿದಾರರ ವಿಜಯ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಬಳಿಕ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿತ್ತು. ಆದರೆ, ಬ್ಯಾಂಕ್ ವಿಲೀನವಾದ ತಕ್ಷಣ ಗ್ರಾಹಕರ ಖಾತೆ ರದ್ದಾಗುವುದಿಲ್ಲ. ಹಿಂದಿನ ಬ್ಯಾಂಕ್ ವ್ಯವಹಾರಗಳು ವಿಲೀನಗೊಂಡ ಬ್ಯಾಂಕ್ ಸುಪರ್ದಿಗೆ ಬರಲಿವೆ. ಹೀಗಾಗಿ ಬ್ಯಾಂಕಿಂಗ್ ಸಂಸ್ಥೆ ಬದಲಾವಣೆಯಾಗುತ್ತದೆಯೇ ಹೊರತು, ಗ್ರಾಹಕ ಮತ್ತು ಬ್ಯಾಂಕ್ ನಡುವಿನ ಸಂಬಂಧ ಅಲ್ಲ ಎಂದು ಪೀಠ ಹೇಳಿದೆ.
ಎರಡು ಬ್ಯಾಂಕ್‌ಗಳ ವಿಲೀನ ಬ್ಯಾಂಕಿಂಗ್ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಇದು ಹಣ ಪಡೆಯುವ ವ್ಯಕ್ತಿಯ ಕೃತ್ಯವಲ್ಲ. ಒಂದು ವೇಳೆ ವಿಲೀನವು ಹಿಂದಿನ ಬ್ಯಾಂಕ್ ಮೇಲೆ ನೀಡಲಾದ ಎಲ್ಲ ಚೆಕ್‌ಗಳನ್ನು ಸ್ವಯಂಚಾಲಿತವಾಗಿ ಅಸಿಂಧುಗೊಳಿಸುತ್ತದೆ ಎಂದು ಪರಿಗಣಿಸಿದರೆ, ವಿಲೀನ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ ಸಹ, ಹಣ ಪಡೆಯಬೇಕಾದ ವ್ಯಕ್ತಿಯೇ ನಷ್ಟ ಅನುಭವಿಸಬೇಕಾಗುತ್ತದೆ. ಚೆಕ್ ನೀಡಿದ ವ್ಯಕ್ತಿ ಇದರಿಂದ ಲಾಭ ಪಡೆದಂತಾಗಲಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.


