- ₹45.20 ಲಕ್ಷ ಮೌಲ್ಯದ 50 ಕೆಜಿ ಬೆಳ್ಳಿ ಕೊಡಿಸಿ ಮೋಸ । ನಗರ ಪೊಲೀಸ್‌ ಠಾಣೆಗೆ ದೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿದ ಖಾಸಗಿ ಬ್ಯಾಂಕ್‌ ಉದ್ಯೋಗಿಯೊಬ್ಬ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗನಿಗೆ ಒಟ್ಟು ₹45.20 ಲಕ್ಷ ಮೌಲ್ಯದ 50 ಕೆಜಿ ಬೆಳ್ಳಿ ನೀಡಿ ಯಾಮಾರಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರಿನ ಕಲ್ಯಾಣ ನಗರದ ನಿವಾಸಿ ವೈ.ಡಿ.ರಮೇಶ್ ವಂಚನೆಗೆ ಒಳಗಾದ ಗ್ರಾಮ ಲೆಕ್ಕಿಗ.ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿರುವ ವೈ.ಡಿ.ರಮೇಶ್‌ಗೆ ಖಾಸಗಿ ಬ್ಯಾಂಕ್‌ ಉದ್ಯೋಗಿ ಶಿವಪ್ರಸಾದ್‌ ಪರಿಚಯವಾಗಿತ್ತು. 2024ರಲ್ಲಿ ರಮೇಶ್‌ ಪತ್ನಿ ಪುಷ್ಪಾ ಅವರಿಗೆ ಸೇರಿದ ಕಡೂರಿನ ಮನೆ ಮಾರಾಟದ ಹಣ ಬಂದಿತ್ತು. ಈ ಹಣವನ್ನು ಬೇರೆ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಯೋಚನೆ ಮಾಡುತ್ತಿದ್ದ ಶಿವ ಪ್ರಸಾದ್‌ಗೆ ಚಿನ್ನ, ಬೆಳ್ಳಿ ಬೆಲೆ ಹೆಚ್ಚಾಗುತ್ತಿದ್ದು, ಹೂಡಿಕೆ ಮಾಡಿದರೆ ಭಾರೀ ಲಾಭ ಗಳಿಸಬಹುದೆಂದು ಶಿವಪ್ರಸಾದ್‌ ಸಲಹೆ ನೀಡಿದ್ದಾನೆ.ಜತೆಗೆ, ತನಗೆ ಚಿನ್ನ, ಬೆಳ್ಳಿಯ ವ್ಯಾಪಾರಿಗಳು ಚೆನ್ನಾಗಿ ಪರಿಚಯವಿದೆ ಎಂದು ಬಣಕಲ್ ನ ಬ್ರಾಮರಿ ಜ್ಯುಯಲ್ಲರ್ ವರ್ಕ್ಸ್ ನ ನಾಗರಾಜ್ ಎಂಬ ಅಕ್ಕಸಾಲಿಗನ ಬಳಿ ಕರೆದುಕೊಂಡು ಬಂದು ಪರಿಚಯ ಮಾಡಿಸಿದ್ದನು.ಪ್ರತಿ ಬೆಳ್ಳಿಗಟ್ಟಿಯನ್ನು ₹89ಕ್ಕೆ ಕೊಡುವುದಾಗಿ ವ್ಯಾಪಾರ ಮಾತುಕತೆ ನಡೆಸಲಾಗಿತ್ತು. ಈ ಪ್ರಕಾರ 50.830 ಕೆಜಿ ಬೆಳ್ಳಿಗೆ, ₹45.23 ಲಕ್ಷಕ್ಕೆ ಮಾತುಕತೆ ಮಾಡಿ ಬೆಳ್ಳಿಗಟ್ಟಿ ಕೊಡುವುದಾಗಿ ನಂಬಿಸಿದ್ದಾರೆ. ನಾಗರಾಜ್ ಹೆಸರಿಗೆ 2025ರ ಜನವರಿ 5 ರಂದು ಬೇಲೂರಿನ ಕರ್ನಾಟಕ ಬ್ಯಾಂಕಿನ ಖಾತೆಯಿಂದ ₹17 ಲಕ್ಷ ಚೆಕ್ ನೀಡಲಾಗಿತ್ತು. 2025ರ ಜನವರಿ 12 ರಂದು ₹27.50 ಲಕ್ಷ ನಗದು ಕೊಡಲಾಗಿತ್ತು.ಚಿನ್ನದ ವ್ಯಾಪಾರಿ ನಾಗರಾಜ್‌ ಮನೆಗೆ ಆಗಮಿಸಿ ಮೊದಲ ಹಂತದಲ್ಲಿ 14,930 ಕೆ ಜಿ ಬೆಳ್ಳಿ ಗಟ್ಟಿ, 2ನೇ ಹಂತದಲ್ಲಿ 19.900 ಕೆ ಜಿ ಬೆಳ್ಳಿ ಗಟ್ಟಿ ಕೊಟ್ಟು ಉಳಿದ ಬೆಳ್ಳಿ ಗಟ್ಟಿ ನೀಡುವುದಕ್ಕೆ ಸ್ವಲ್ಪ ಸಮಯ ಬೇಕೆಂದು ಹೇಳಿದ್ದರು. ಆ ಬಳಿಕ 2025ರ ಮೇ 10 ರಂದು ಉಳಿದ 16 ಕೆಜಿ ಬೆಳ್ಳಿ ಗಟ್ಟಿ ತಂದು ಕೊಟ್ಟಿದ್ದರು. ಆಗ ನಾಗರಾಜ್ ಹೆಸರಿಗೆ ₹70 ಸಾವಿರ ಚೆಕ್‌ ನೀಡಲಾಗಿತ್ತು.ಹಣದ ಅವಶ್ಯಕತೆ ಬಂದ ಹಿನ್ನೆಲೆಯಲ್ಲಿ ಮತ್ತು ಬೆಳ್ಳಿಯ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ 2025ರ ಮೇ ತಿಂಗಳಿನಲ್ಲಿಯೇ 20 ಕೆ.ಜಿ. ಬೆಳ್ಳಿ ಮಾರಾಟಕ್ಕೆ ಹೋದಾಗ 16 ಕೆ.ಜಿ. ಬೆಳ್ಳಿ ನಕಲಿ ಎಂದು ತಿಳಿದು ಬಂದಿತ್ತು.ಈ ಬಗ್ಗೆ ಶಿವಪ್ರಸಾದ್‌ ಹಾಗೂ ನಾಗರಾಜ್‌ ಗೆ ವಿಚಾರಿಸಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಆ ಬೆಳ್ಳಿಯನ್ನು ನಾವೇ ಮಾರಾಟ ಮಾಡಿ, ನಿಮಗೆ ಹಣ ಕೊಡುತ್ತೇವೆ ಎಂದು ಹೇಳಿ ಕಳೆದ ಏಪ್ರಿಲ್‌ 8 ರಂದು ಎಲ್ಲ 50 ಕೆ.ಜಿ ಬೆಳ್ಳಿಯನ್ನು ತೆಗೆದುಕೊಂಡು ಹೋದರು.ಆ ನಂತರ ಪೋನ್‌ ಮಾಡಿದಾಗ ಒಂದೆರೆಡು ದಿನದಲ್ಲಿ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದು ಈವರೆಗೆ ಹಣ ನೀಡಿಲ್ಲ. ಶಿವಪ್ರಸಾದ್‌ ಮತ್ತು ನಾಗರಾಜ್‌ ಮೇಲೆ ಸೂಕ್ತ ಕ್ರಮ ಕೈಗೊಂಡು ಹಣ ವಾಪಾಸ್‌ ಕೊಡಿಸುವಂತೆ ಮೇ 22 ರಂದು ರಮೇಶ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.