ಬ್ಯಾಂಕ್ ಹಾಗೂ ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬ್ಯಾಂಕ್ ಹಾಗೂ ವಿಮಾ ಕ್ಷೇತ್ರದ ವಿವಿಧ ಸಂಘಟನೆಗಳ ಸದಸ್ಯರು ನಗರದ ಹಳೆಯ ಬಸ್ ನಿಲ್ದಾಣದ ಬಳಿಯ ಎಲ್ಐಸಿ ಕಚೇರಿ ಮುಂಭಾಗ ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.
ಬಳ್ಳಾರಿ: ಬ್ಯಾಂಕ್ ಹಾಗೂ ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬ್ಯಾಂಕ್ ಹಾಗೂ ವಿಮಾ ಕ್ಷೇತ್ರದ ವಿವಿಧ ಸಂಘಟನೆಗಳ ಸದಸ್ಯರು ನಗರದ ಹಳೆಯ ಬಸ್ ನಿಲ್ದಾಣದ ಬಳಿಯ ಎಲ್ಐಸಿ ಕಚೇರಿ ಮುಂಭಾಗ ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರು ಮಂಡಿಸಿರುವ ವಿಮಾ ಕಾನೂನು ತಿದ್ದುಪಡಿ ಮಸೂದೆಯು ಸಾರ್ವಜನಿಕ ಹಿತಾಸಕ್ತಿ ವಿರೋಧಿ ನೀತಿಯಾಗಿದೆ. ಕೇಂದ್ರದ ತಿದ್ದುಪಡಿ ನೀತಿಯಿಂದ ವಿಮಾ ಹಾಗೂ ಬ್ಯಾಂಕಿಂಗ್ ಕ್ಷೇತ್ರವನ್ನು ಬಲಗೊಳಿಸಬೇಕೇ ವಿನಾ, ದುರ್ಬಲಗೊಳಿಸಬಾರದು. ಕೇಂದ್ರದ ನಿರ್ಧಾರ ವಿಮಾ ಪಾಲಿಸಿದಾರರ ವಿಶ್ವಾಸವನ್ನು ದುರ್ಬಲಗೊಳಿಸಲಿದ್ದು, ವಿಮಾ ವಲಯವನ್ನು ನಾಶಗೊಳಿಸುವ ವ್ಯವಸ್ಥಿತ ಹುನ್ನಾರ ಕೇಂದ್ರದ ತಿದ್ದುಪಡಿ ನೀತಿಯಿಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಸಾಧಕಗಳಿಗಿಂತ ಬಾಧಕಗಳೇ ಹೆಚ್ಚಾಗಿವೆ. ಜನರ ಹಿತ ಕಾಯುವ ಯಾವುದೇ ಕಾಳಜಿಗಳು ಹೊಸ ತಿದ್ದುಪಡಿ ನೀತಿಯಲ್ಲಿಲ್ಲ. ವಿದೇಶಿ ಬಂಡವಾಳ ದೇಸಿ ಉಳಿತಾಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅಪಾಯವಿದೆ. ದೇಸೀಯ ಉಳಿತಾಯ ಭಾರತದ ಆರ್ಥಿಕ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಗೊತ್ತಿದ್ದಾಗ್ಯೂ ಕೇಂದ್ರ ಸರ್ಕಾರ ವಿಮಾ ಹಾಗೂ ಬ್ಯಾಂಕ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆಸ್ಪದ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರಲ್ಲದೆ, ಹಣಕಾಸು ಸಚಿವರು ವಿದೇಶ ನೇರ ಬಂಡವಾಳ ಹೂಡಿಕೆಯಂಥ ಅತ್ಯಂತ ಅವೈಜ್ಞಾನಿಕವಾದ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ದೇಶದ ಸಣ್ಣ ಉಳಿತಾಯ ವಲಯವನ್ನು ರಕ್ಷಣೆ ಮಾಡಬೇಕು. ನಿಜಕ್ಕೂ ಕೇಂದ್ರಕ್ಕೆ ಜನಪರವಾದ ಕಾಳಜಿಯಿದ್ದರೆ ಸರ್ಕಾರ ಸ್ವಾಮ್ಯದ ವಿಮೆ ಹಾಗೂ ಬ್ಯಾಂಕ್‌ಗಳ ಬಲವರ್ಧನೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಬ್ಯಾಂಕ್ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟ, ಅಖಿಲ ಭಾರತ ವಿಮಾ ನೌಕರರ ಸಂಘ, ಅಖಿಲ ಭಾರತ ಎಲ್‌ಐಸಿ ಉದ್ಯೋಗಿಗಳ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೋರಾಟ ಸಮಿತಿಯ ಸಂಚಾಲಕ ಡಿ.ವಿ. ಸೂರ್ಯನಾರಾಯಣ ಅವರು ನೇತೃತ್ವ ವಹಿಸಿದ್ದರು.