ನಕಲಿ ದಾಖಲೆ ನೀಡಿ ಬ್ಯಾಂಕ್‌ಗೆ ವಂಚನೆ: ಮೂವರ ವಿರುದ್ಧ ಪ್ರಕರಣ

| Published : Jun 27 2024, 01:15 AM IST

ನಕಲಿ ದಾಖಲೆ ನೀಡಿ ಬ್ಯಾಂಕ್‌ಗೆ ವಂಚನೆ: ಮೂವರ ವಿರುದ್ಧ ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಏಪ್ರಿಲ್‌ನಲ್ಲಿ ಶಾಖೆಯ ವ್ಯವಸ್ಥಾಪಕಿ ಸಾಲದ ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿತರು ಬ್ಯಾಂಕಿಗೆ ನೀಡಿದ ದಾಖಲಾತಿಗಳು ನಕಲಿ ದಾಖಲಾತಿಗಳು ಎಂದು ಕಂಡುಬಂದಿದೆ.

ಶಿರಸಿ: ಕಾರು ಖರೀದಿಸುವ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ, ಕೆಡಿಸಿಸಿ ಬ್ಯಾಂಕ್‌ನ ಮಾರಿಗುಡಿ ಬಜಾರ್‌ನ ಮಹಿಳಾ ಶಾಖೆಗೆ ಮೋಸ ಮಾಡಿದ ಮೂವರ ವಿರುದ್ಧ ನಗರದ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಬಚಗಾಂವ ಸಮೀಪದ ಬಂದಗಳ ನಿವಾಸಿ ವಸೀಮ್ ಅಬ್ದುಲ್ ಜಲೀಲ್ ಪಟೇಲ್, ಅಬ್ದುಲ್ ಜಲೀಲ್ ಖಾಸೀಮ್ ಸಾಬ ಪಟೇಲ್ ಹಾಗೂ ಟಿಎಸ್‌ಎಸ್ ರಸ್ತೆಯ ನಿವಾಸಿ ವಿಘ್ನೇಶ್ವರ ಮಂಜುನಾಥ ಆಚಾರಿ ಮೇಲೆ ಪ್ರಕರಣ ದಾಖಲಾಗಿದೆ.

ವಸೀಮ್ ಅಬ್ದುಲ್ ಜಲೀಲ್ ಪಟೇಲ್ ಹುಂಡೈ ಅಲ್ಕಜರ್ ಕಾರನ್ನು ಖರೀದಿ ಮಾಡುವುದಾಗಿ ಕಳೆದ ಫೆ. ೧೯ರಂದು ಬ್ಯಾಂಕಿನ ನಿಗದಿತ ನಮೂನೆಯಲ್ಲಿ ₹೨೦,೫೦,೦೦೦ ಸಾಲದ ಅರ್ಜಿ ಸಲ್ಲಿಸಿದ್ದು, ಇನ್ನಿಬ್ಬರು ಜಾಮೀನುದಾರರಾಗಿ ಸಾಲದ ಅರ್ಜಿಗೆ ಮತ್ತು ಇನ್ನಿತರ ದಾಖಲೆಗಳಿಗೆ ಸಹಿ ಮಾಡಿದ್ದು, ಆರೋಪಿತರು ನೀಡಿದ ದಾಖಲೆಗಳ ಪ್ರಕಾರ ಆದಿಶಕ್ತಿ, ಆಟೋ. ಪ್ರೈ.ಲಿ. ಹುಬ್ಬಳ್ಳಿ ಇದರ ಖಾತೆ ಸಂಖ್ಯೆ ೯೨೩೦೨೦೦೫೮೪೮೪೦೬೩ಕ್ಕೆ ಮಂಜೂರು ಮಾಡಿದ ಸಾಲದ ಮೊತ್ತ ₹೨೦,೫೦,೦೦೦ ಸೇರಿ ₹೨೫.೫೪.೪೧೮ ಗಳನ್ನು ವರ್ಗಾಯಿಸಿದ್ದಾರೆ.

ಏಪ್ರಿಲ್‌ನಲ್ಲಿ ಶಾಖೆಯ ವ್ಯವಸ್ಥಾಪಕಿ ಸಾಲದ ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿತರು ಬ್ಯಾಂಕಿಗೆ ನೀಡಿದ ದಾಖಲಾತಿಗಳು ನಕಲಿ ದಾಖಲಾತಿಗಳು ಎಂದು ಕಂಡುಬಂದಿದೆ. ಆರೋಪಿತರು ಸೇರಿ ಕೆಡಿಸಿಸಿ ಬ್ಯಾಂಕ್‌ನ ಮಹಿಳಾ ಶಾಖೆಗೆ ಸುಳ್ಳು ಮತ್ತು ನಕಲು ದಾಖಲೆಗಳನ್ನು ನೀಡಿ ಯಾವುದೇ ಕಾರನ್ನು ಖರೀದಿ ಮಾಡದೇ ಸುಳ್ಳು ಬಿಂಬಿಸಿ ಕೇವಲ ಶೇ. ೮.೫ ಮಾಸಿಕ ಬಡ್ಡಿ ಆಧಾರದ ಮೇಲೆ ವಾಹನ ಸಾಲ ₹೨೦.೫೦.೦೦೦ ಪಡೆದಿದ್ದಾರೆ. ಅದರಲ್ಲಿ ಈವರೆಗೆ ಕಂತುಗಳನ್ನು ತುಂಬಿ, ಇನ್ನೂ ₹೧೮.೯೨.೪೮೯ ಬ್ಯಾಂಕಿಗೆ ವಂಚಿಸಿದ್ದಾರೆ ಎಂದು ಕೆಡಿಸಿಸಿ ಬ್ಯಾಂಕ್‌ನ ಮಾರಿಗುಡಿ ಬಜಾರ್‌ನ ಮಹಿಳಾ ಶಾಖೆಯ ವ್ಯವಸ್ಥಾಪಕಿ ಸೀಮಾ ವಿಠ್ಠಲ ಭಟ್ಟ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆ ಪಿಎಸ್‌ಐ ರತ್ನ ಕುರಿ ತನಿಖೆ ಕೈಗೊಂಡಿದ್ದಾರೆ.