ನಕಲಿ ದಾಖಲೆ ನೀಡಿ ಬ್ಯಾಂಕಿಗೆ ವಂಚನೆ: ದೂರು ದಾಖಲು

| Published : May 29 2024, 12:48 AM IST

ಸಾರಾಂಶ

ಈ ಕುರಿತು ಕೆಡಿಸಿಸಿ ಬ್ಯಾಂಕ್‌ನ ಮಂಚಿಕೇರಿ ಶಾಖಾ ವ್ಯವಸ್ಥಾಪಕ ರಾಮಕೃಷ್ಣ ಗಣಪತಿ ಉಪಾಧ್ಯ ದೂರು ನೀಡಿದ್ದು, ಮಂಗಳವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ: ವ್ಯಕ್ತಿಯೋರ್ವ ನಕಲಿ ದಾಖಲೆ ನೀಡಿ, ಕಾರು ಲೋನ್ ಪಡೆದು ಕೆಡಿಸಿಸಿ ಬ್ಯಾಂಕಿಗೆ ವಂಚನೆ ಮಾಡಿದ ಕುರಿತು ಮೇ ೨೮ರಂದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ ತಾಲೂಕಿನ ಭೈರುಂಬೆ ದೇವರಕೇರಿಯ ರಾಜಾರಾಮ ರಾಮಚಂದ್ರ ಹೆಗಡೆ, ಸಾಲಕ್ಕೆ ಜಾಮೀನುದಾರರಾದ ಮುಂಡಗೋಡ ತಾಲೂಕಿನ ಚಿಪಗೇರಿಯ ಮಹಾಬಲೇಶ್ವರ ರಾಧಾಕೃಷ್ಣ ಹೆಗಡೆ ಹಾಗೂ ಶಿರಸಿ ತಾಲೂಕಿನ ಲಂಡಕನಹಳ್ಳಿಯ ದಿನೇಶ ಲವು ಚಂಚ್ರೇಕರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ರಾಜಾರಾಮ ರಾಮಚಂದ್ರ ಹೆಗಡೆ ಕಳೆದ ಜ. ೨ರಂದು ಮಂಚಿಕೇರಿಯ ಕೆಡಿಸಿಸಿ ಬ್ಯಾಂಕಿನ ಶಾಖೆಗೆ ಬಂದು ಹುಂಡೈ ಕ್ರೆಟಾ ಕಾರು ಖರೀದಿಗೆ ₹೧೫ ಲಕ್ಷ ಸಾಲ ಬೇಕೆಂದು ಅರ್ಜಿ ನೀಡಿದ್ದಾನೆ. ಹುಬ್ಬಳ್ಳಿಯ ಶೋರೂಂವೊಂದರ ದರಪಟ್ಟಿ ನೀಡಿದ್ದು, ಸಾಲ ಮಂಜೂರಿ ಮಾಡಿ ಬ್ಯಾಂಕ್‌ನಿಂದ ಶೋರೂಂ ಖಾತೆಗೆ ₹೧೫ ಲಕ್ಷ ಹಣವನ್ನು ವರ್ಗಾಯಿಸಲಾಗಿತ್ತು. ನಿಯಮದಂತೆ ವಿಮೆ, ತೆರಿಗೆ ತುಂಬಿದ ದಾಖಲೆಗಳು, ಕಾರಿನ ಎರಡು ಬೀಗವನ್ನೂ ಆತ ಬ್ಯಾಂಕ್‌ಗೆ ನೀಡಿದ್ದ. ಅನುಮಾನ ಬಾರದಂತೆ ಒಂದು ಕಂತು ಸಾಲವನ್ನೂ ಮರುಪಾವತಿ ಮಾಡಿದ್ದ.ನಂತರ ಬ್ಯಾಂಕ್‌ನವರು ಕಾರನ್ನು ಒಮ್ಮೆ ಬ್ಯಾಂಕ್‌ಗೆ ಖುದ್ದಾಗಿ ಹಾಜರುಪಡಿಸುವಂತೆ ತಿಳಿಸಿದಾಗ ಬಂದಿರಲಿಲ್ಲ. ವಾಹನ ರಜಿಸ್ಟ್ರೇಷನ್‌ಗಾಗಿ ಅಗತ್ಯ ದಾಖಲೆಗಳನ್ನು ಆರ್‌ಟಿಒ ಕಚೇರಿಗೆ ಒದಗಿಸುವಂತೆ ಆತನಿಗೆ ನೀಡಿದ ನೋಟಿಸ್ ಮರಳಿ ಬಂದಿದೆ. ಆಗ ಜಾಗೃತರಾದ ಬ್ಯಾಂಕ್ ಸಿಬ್ಬಂದಿ ಆತ ನೀಡಿದ ದಾಖಲೆಗಳನ್ನು ಪ್ರಧಾನ ಕಚೇರಿಗೆ ಕಳುಹಿಸಿದ್ದು, ಅಲ್ಲಿ ಪರಿಶೀಲಿಸಿದಾಗ ಎಲ್ಲ ದಾಖಲೆಗಳೂ ನಕಲಿ ಎಂಬುದು ಪತ್ತೆಯಾಗಿದೆ. ಆತ ನೀಡಿದ ಕಾರಿನ ಬೀಗಗಳು ನಕಲಿಯಾಗಿರುವುದು, ವಾಹನ ನೋಂದಣಿ ಸಂಖ್ಯೆಯೂ ಕಾಲ್ಪನಿಕವಾಗಿರುವುದು ತಿಳಿದು ಬಂದಿದೆ.ಈ ಕುರಿತು ಕೆಡಿಸಿಸಿ ಬ್ಯಾಂಕ್‌ನ ಮಂಚಿಕೇರಿ ಶಾಖಾ ವ್ಯವಸ್ಥಾಪಕ ರಾಮಕೃಷ್ಣ ಗಣಪತಿ ಉಪಾಧ್ಯ ದೂರು ನೀಡಿದ್ದು, ಮಂಗಳವಾರ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.