ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
2023-24ನೇ ಸಾಲಿನಲ್ಲಿ ಬ್ಯಾಂಕ್ ₹186.25 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇರುದಾರರ ಹಾಗೂ ಗ್ರಾಹಕರ ಉತ್ತಮ ಬಾಂಧವ್ಯವೇ ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗಿದೆ. ಗ್ರಾಹಕರ, ಶೇರುದಾರರ ನಿರಂತರ ಸೇವೆಗೆ ಬ್ಯಾಂಕ್ ಸದಾ ಬದ್ಧವಾಗಿದೆ ಎಂದು ಮಾಜಿ ಶಾಸಕ, ಲಕ್ಷ್ಮೀ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಶೀಲವಂತ ಹೇಳಿದರು.ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಲ್ಲಿನ ಲಕ್ಷ್ಮೀ ಸಹಕಾರಿ ಬ್ಯಾಂಕಿನ 109ನೇ ವರ್ಷದ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಸನ್ 2023-24ನೇ ಸಾಲಿನಲ್ಲಿ ₹28,300.02 ಲಕ್ಷ ದುಡಿಯುವ ಬಂಡವಾಳ ಹೊಂದಿದ್ದು, 2023-24ನೇ ಸಾಲಿನಲ್ಲಿ ₹25,669.46 ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ. ಅಲ್ಲದೇ ತನ್ನ ಸದಸ್ಯರಿಗೆ ₹16,221.10 ಲಕ್ಷ ಸಾಲ ವಿತರಿಸಿದೆ. ಬ್ಯಾಂಕಿನ ನಿವ್ವಳ ಲಾಭ ₹186.25 (ತೆರಿಗೆಗೆ ಮೊದಲು) ಗಳಿಸಿದೆ. ಇದಕ್ಕೆಲ್ಲ ಗ್ರಾಹಕರ ಮತ್ತು ಶೇರುದಾರರ ಉತ್ತಮ ಆರ್ಥಿಕ ವ್ಯವಹಾರವೇ ಕಾರಣವಾಗಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದರಿಂದ ಬ್ಯಾಂಕ್ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಯಾವ ಗ್ರಾಹಕರ ಖಾತೆಗಳಿಗೆ ಕೆವೈಸಿ ಲಿಂಕ್ ಇದೆಯೋ ಆ ಖಾತೆಗೆ ಡಿವಿಡೆಂಡ್ ಹಣ ಜಮಾ ಮಾಡುತ್ತೇವೆ. ಕೆವೈಸಿ ಲಿಂಕ್ ಮಾಡಿಸದವರು ಆದಷ್ಟು ಬೇಗ ಲಿಂಕ್ ಮಾಡಿಸಿ. ನೇಕಾರರೇ ಹೆಚ್ಚಿನ ಗ್ರಾಹಕರಾಗಿರುವ ಬ್ಯಾಂಕಿಗೆ ಅವರ ಹಿತಾಸಕ್ತಿ ಕಾಪಾಡುವುದೇ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಜವಳಿ ಇಲಾಖೆಯಿಂದ ಸಂಪರ್ಕಿಸಿ, ನಮ್ಮ ಬ್ಯಾಂಕಿನ ನೇಕಾರ ಗ್ರಾಹಕರಿಗೆ ಸಿಗುವ ಸೌಲತ್ತುಗಳನ್ನು ಕೊಡಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜನಸ್ಮೇಹಿ ಮೊಬೈಲ್ ತಂತ್ರಾಂಶ (ಆ್ಯಪ್)ವನ್ನು ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕರು ಉದ್ಘಾಟಿಸಿದರು. ಬ್ಯಾಂಕ್‌ನ ಆಯ್ದ 6 ಜನ ಸದಸ್ಯರಿಗೆ ಸಾಂಕೇತಿಕವಾಗಿ ಬ್ಯಾಂಕಿನ ಎ.ಟಿ.ಎಂ ಕಾರ್ಡ್ ವಿತರಿಸಲಾಯಿತು. ಹಿಂದಿನ ವರ್ಷದ ನಡಾವಳಿಗಳನ್ನು ಬ್ಯಾಂಕಿನ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ದಾನೇಶ ಕರಣಿ ಸಭೆಯಲ್ಲಿ ಓದಿ ದೃಢಿಕರಿಸಿದರು. ಸಭೆಯ ಕಾರ್ಯ ಸೂಚಿಯನ್ನು ಬ್ಯಾಂಕ್‌ನ ಲೆಕ್ಕಾಧಿಕಾರಿ ಓದಿ ಒಪ್ಪಿಗೆ ಪಡೆದರು. ಬ್ಯಾಂಕಿನ ಉತ್ತಮ ಗ್ರಾಹಕರಿಗೆ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಗರಿಷ್ಠ ಅಂಕ ಪಡೆದು ಪಾಸಾದ ಬ್ಯಾಂಕಿನ ಗ್ರಾಹಕರ ಪ್ರತಿಭಾವಂತ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಬ್ಯಾಂಕಿನ ಉಪಾಧ್ಯಕ್ಷ ಕಮಲಕಿಶೋರ ಮಾಲಪಾಣಿ, ಆಡಳಿತ ಮಂಡಳಿ ನಿರ್ದೇಶಕರಾದ ಸಂಪತ್ ಕುಮಾರ ರಾಠಿ, ಸಂಜೀವ ಕಾರಕೂನ, ಗಣೇಶ ಶೀಲವಂತ, ಮುರಗೇಶ ರಾಜನಾಳ, ಸಂಗಪ್ಪ ಹುನಗುಂದ, ಪರಶುರಾಮ ಪವಾರ, ಈರಣ್ಣ ಕುರಹಟ್ಟಿ, ದೀಪಕ ನೇಮದಿ, ವಿಜಯಾ ಸಾವಳಗಿಮಠ, ಲಕ್ಷ್ಮೀಬಾಯಿ ರೂಡಗಿ, ಈರಣ್ಣ ಬಂಡಿವಡ್ಡರ, ಪರಶುರಾಮ ತಳವಾರ ಸೇರಿದಂತೆ ಇತರರು ಇದ್ದರು. ರವಿ ಶೇಬಿನಕಟ್ಟಿ ನಿರೂಪಿಸಿದರು. ಗುಂಡುಭಟ್ಟ ಜೋಶಿ ಪ್ರಾರ್ಥಿಸಿದರು. ಸಂಗಣ್ಣ ಹುನಗುಂದ ಸ್ವಾಗತಿಸಿದರು. ಪಿ.ಎನ್.ಪವಾರ ವಂದಿಸಿದರು.
ಬ್ಯಾಂಕ್ ಈಗಾಗಲೇ ತನ್ನ ಗ್ರಾಹಕರಿಗೆ ಆಧುನಿಕ ಸೇವೆಗಳಾದ ಸಿಟಿಎಸ್ ಚೆಕ್ ಸೌಲಭ್ಯ, ಆರ್ಟಿಜಿಎಸ್/ನೆಫ್ಟ್, ತ್ವರಿತ ಹಣ ವರ್ಗಾವಣೆಗಾಗಿ ಐಎಂಪಿಎಸ್ ನಂತಹ ಜನಸ್ನೇಹಿ ಸೇವೆಗಳನ್ನು ಒದಗಿಸುತ್ತಿದೆ. ಅತೀ ಶೀಘ್ರದಲ್ಲಿ ಯುಪಿಐ ಸೇವೆಯನ್ನು ಸಹ ಬ್ಯಾಂಕ್ ಆರಂಭಿಸಲಿದೆ.- ರಾಜಶೇಖರ ಶೀಲವಂತ,
ಲಕ್ಷ್ಮೀ ಸಹಕಾರಿ ಬ್ಯಾಂಕಿನ ಅಧ್ಯಕ್ಷರು.