ಸಾರಾಂಶ
ಅತ್ಯಂತ ಪುಟ್ಟ ಊರು ಗಡೆಗುಂಡಿಯಲ್ಲಾಪುರ ಶಾಲೆ ನಿಸರ್ಗ ಪ್ರೀತಿ, ಅಂತರ್ಜಲ ಸಂರಕ್ಷಣೆ ಸಂಸ್ಕಾರ, ಸಾವಯವ ಶಿಕ್ಷಣವೂ ಒಳಗೊಂಡಂತೆ, ಶಾಲೆಯಲ್ಲಿಯೇ ಬ್ಯಾಂಕ್ ತೆರೆದು ಉಳಿತಾಯ ಹಾಗೂ ವ್ಯವಹಾರಗಳ ಶಿಕ್ಷಣ ನೀಡುತ್ತಿದೆ.
ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ಅತ್ಯಂತ ಪುಟ್ಟ ಊರು ಗಡೆಗುಂಡಿಯಲ್ಲಾಪುರ ಶಾಲೆ ನಿಸರ್ಗ ಪ್ರೀತಿ, ಅಂತರ್ಜಲ ಸಂರಕ್ಷಣೆ ಸಂಸ್ಕಾರ, ಸಾವಯವ ಶಿಕ್ಷಣವೂ ಒಳಗೊಂಡಂತೆ, ಶಾಲೆಯಲ್ಲಿಯೇ ಬ್ಯಾಂಕ್ ತೆರೆದು ಉಳಿತಾಯ ಹಾಗೂ ವ್ಯವಹಾರಗಳ ಶಿಕ್ಷಣ ನೀಡುತ್ತಿದೆ.ತಾಲೂಕಿನ ಗಡೆಗುಂಡಿಯಲ್ಲಪುರ ಕೇವಲ ೨೩೫ ಜನಸಂಖ್ಯೆಯ ಸಣ್ಣ ಹಳ್ಳಿ. ಈ ಶಾಲೆಯಲ್ಲಿ ೧ ರಿಂದ ೫ನೇ ತರಗತಿಯ ವರ್ಗಗಳು ಇವೆ. ೨೮ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಮುಖ್ಯೋಪಾಧ್ಯಾಯ ಜಗದೀಶ ಗೂಳಿಯವರ ಹಾಗೂ ಸಹ ಶಿಕ್ಷಕ ರಫಿಉಲ್ಲಾ ಇಲ್ಲಿದ್ದಾರೆ. ಈ ಊರಿನಲ್ಲಿ ಶಾಲೆಯಿಂದ ಹೊರಗುಳಿದ ಒಂದು ಮಗುವೂ ಇಲ್ಲ.
ಈ ಶಾಲೆಯಲ್ಲಿ ಒಂದು ಬ್ಯಾಂಕ್ ಇದೆ. ಶಾಲೆಯ ಎಲ್ಲ ಮಕ್ಕಳು ಇಲ್ಲಿ ವಹಿವಾಟು ಮಾಡುತ್ತಾರೆ. ಬ್ಯಾಂಕಿಗೆ ಮ್ಯಾನೇಜರ್, ಕಾರ್ಯದರ್ಶಿ ವಿದ್ಯಾರ್ಥಿಗಳೇ ಆಗಿದ್ದಾರೆ. ಎಲ್ಲ ಖಾತೆ ಪುಸ್ತಕಗಳನ್ನು ಮಕ್ಕಳೆ ಬರೆಯುತ್ತಾರೆ. ಮುಖ್ಯ ಶಿಕ್ಷಕರು ವಾರಕ್ಕೊಮ್ಮೆ ವಹಿವಾಟು ಪರಿಶೀಲಿಸಿ ಅಗತ್ಯವಿದ್ದರೆ ಮಾರ್ಗದರ್ಶನ ಮಾಡುತ್ತಾರೆ. ಶಾಲೆಯ ಸೇರಿದ ಮಗು ಇಲ್ಲಿ ₹೫೦ ತುಂಬಿ ಖಾತೆ ತೆಗೆಯುತ್ತಾನೆ. ೫ನೇ ತರಗತಿ ಮುಗಿಯುವವರೆಗೆ ವಹಿವಾಟು ಮಾಡಿ, ೫ನೇ ತರಗತಿ ಮುಗಿದಾಗ ಅವನ ಒಟ್ಟು ಉಳಿತಾಯವನ್ನು ರಾಷ್ಟ್ರೀಕೃತ ಬ್ಯಾಂಕ್ ಚೆಕ್ ಮೂಲಕ ಅವನಿಗೆ ನೀಡಲಾಗುತ್ತದೆ. ಅಲ್ಲಿಯವರೆಗೆ ಈ ಹಣವನ್ನು ಒಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಡಲಾಗುತ್ತಿದ್ದು, ಒಟ್ಟು ಮೊತ್ತಕ್ಕೆ ಖಾತೆದಾರರಿಗೆ ಶೇ.೧ರಷ್ಟು ಬಡ್ಡಿಯನ್ನು ಸಹ ನೀಡಲಾಗುತ್ತದೆ. ₹೫೦ ಒಳಗಿನ ವಹಿವಾಟು ಮಗುವೇ ಮಾಡುತ್ತದೆ. ಅದಕ್ಕಿಂತ ಹೆಚ್ಚಿನ ಹಣ ತೆಗೆಯುವಾಗ ಪಾಲಕರು ಬಂದು ಸಹಿ ಹಾಕಿದ ನಂತರ ಮಗುವಿಗೆ ನೀಡಲಾಗುತ್ತದೆ. ಈಗ ಈ ಬ್ಯಾಂಕಿನಲ್ಲಿರುವ ಮೊತ್ತ ₹೩೨೫೭.ಸ್ವಚ್ಛ ಪರಿಸರ: ಇಲ್ಲಿನ ಏಳು ಗುಂಟೆಯಷ್ಟು ಜಾಗೆಯಲ್ಲಿರುವ ಎರಡು ಕೊಠಡಿಗಳ ಶಾಲೆ, ಅಲ್ಲೊಂದು ಅಡುಗೆ ಮನೆ, ಉಳಿದದ್ದೆಲ್ಲ ಗಿಡ ಮರ ಬಳ್ಳಿಗಳಿಂದ ಹಚ್ಚ ಹಸಿರಾಗಿ ಕಂಗೊಳಿಸುವ ಸ್ವಚ್ಛ ಪರಿಸರ ನೀಡಿದೆ. ಇಲ್ಲಿ ನೀರಿನ ಇಂಗು ಗುಂಡಿ ಇದೆ. ಕೊಳವೆ ಬಾವಿ ಇದೆ. ಕಾಂಪೋಸ್ಟ್ ಮತ್ತು ಎರೆಹುಳು ಗೊಬ್ಬರವನ್ನೂ ಮಾಡುತ್ತಾರೆ. ಹೊಸ ವಿನ್ಯಾಸದ ನಲಿಕಲಿ ಚಾರ್ಟಗಳು, ಹವಾಮಾನ ನಕ್ಷೆ, ಒಂದು ವರ್ಷದ ಕಲಿಕಾ ವೇಳಾಪಟ್ಟಿ, ದಾನಿಗಳ ಸಹಕಾರದಿಂದ ಇಲ್ಲಿ ಸ್ಮಾರ್ಟ್ ಕ್ಲಾಸ್, ಟಿವಿ, ಪ್ರೊಜೆಕ್ಟರ್, ಮೈಕ್‌ಸೆಟ್, ಶಾಲೆಗೆ ಪೆಂಡಾಲ್ ಸೆಟ್, ಇಡೀ ಶಾಲೆಯ ತುಂಬ ಮಹಾಪುರುಷರ ಭಾವ ಚಿತ್ರಗಳು, ಎರಡೂ ಕೊಠಡಿಗಳಲ್ಲಿ ಫ್ಯಾನ್ ಎಲ್ಲವೂ ಇಲ್ಲಿದೆ.ಅಚ್ಚುಕಟ್ಟಾದ ಸ್ವಚ್ಛ ಅಡುಗೆ ಮನೆ. ಶುದ್ಧ ಕುಡಿಯುವ ನೀರಿನ ಘಟಕ. ಸ್ವಚ್ಛ ಆಹಾರ ಧಾನ್ಯ. ಶುದ್ಧ ಗಾಳಿ ಬೆಳಕು ಇಲ್ಲಿನ ವಿಶೇಷ. ೭೦ ಅಡಿಕೆ ಮರ ಬೆಳೆಸಿದ್ದಾರೆ. ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ತಣ್ಣನೆಯ ವಾತಾವರಣ ಆಕರ್ಷಿಸುತ್ತದೆ. ಈ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಪರಿಸರ ಮಿತ್ರ, ಧಾರವಾಡ ವಿಭಾಗ ಮಟ್ಟದ ಪ್ರಶಸ್ತಿ, ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ ಪ್ರಶಸ್ತಿಗಳು ದೊರೆತಿವೆ.ಹದಿನೈದು ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ನಾನು ಮಕ್ಕಳಿಗಾಗಿ ಹೊಸ ಯೋಚನೆ ಮಾಡಿದಾಗ ಇಲ್ಲಿನ ಜನರು ನೀಡಿದ ಸಹಕಾರಕ್ಕೆ ನಾನು ಸೋತಿದ್ದೇನೆ ಮುಖ್ಯೋಪಾಧ್ಯಾಯ ಜಗದೀಶ ಗೂಳಿಯವರ ಹೇಳಿದರು.