ಕನ್ನಡಪ್ರಭ ವಾರ್ತೆ ಬೆಂಗಳೂರು

ಮಲಯಾಳಂ ನಟ ದುಲ್ಕರ್‌ ಸಲ್ಮಾನ್‌ ನಟನೆಯ ಲಕ್ಕಿ ಭಾಸ್ಕರ್‌ ಸಿನಿಮಾದ ಕತೆ ನೆನಪಿಸುವ ಪ್ರಕರಣವೊಂದು ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಲಾಕರ್‌ನಲ್ಲಿ ಗ್ರಾಹಕರು ಇಟ್ಟಿದ್ದ ₹4.12 ಕೋಟಿ ಮೌಲ್ಯದ 2.783 ಕೆಜಿ ಚಿನ್ನವನ್ನು ಕದ್ದು ಬಳಿಕ ಅಡಮಾನವಿಟ್ಟು ಜೂಜಾಡಿದ್ದ ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ವೊಂದರ ಸಹಾಯಕ ವ್ಯವಸ್ಥಾಪಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಎಂ.ಎಸ್‌.ಪಾಳ್ಯದ ನಿವಾಸಿ ಇ.ಕಿರಣ್‌ಕುಮಾರ್‌ ಬಂಧಿತನಾಗಿದ್ದು, ಆರೋಪಿಯಿಂದ 700 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬ್ಯಾಂಕ್‌ ಲಾಕರ್‌ನಲ್ಲಿದ್ದ ಚಿನ್ನ ಪಡೆಯಲು ಗ್ರಾಹಕಿ ಬಂದಾಗ ಕಳ್ಳತನ ಬಯಲಾಗಿದೆ. ಈ ಸಂಬಂಧ ಬ್ಯಾಂಕ್‌ನ ವಲಯ ಮುಖ್ಯಸ್ಥ ದಿಲೀಪ್‌ ಕುಮಾರ್‌ ನೀಡಿದ ದೂರಿನಂತೆ ಗಿರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಿರಣ್‌, ತನ್ನ ಕುಟುಂಬದ ಜತೆ ವಿದ್ಯಾರಣ್ಯಪುರ ಹತ್ತಿರದ ಎಂ.ಎಸ್. ಪಾಳ್ಯದಲ್ಲಿ ನೆಲೆಸಿದ್ದ. 2019ರಿಂದ ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ ಆತ, ಪ್ರಸ್ತುತ ಗಿರಿನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆನ್‌ಲೈನ್‌ ಬೆಟ್ಟಿಂಗ್ ವ್ಯಸನಕ್ಕೆ ಬಿದ್ದಿದ್ದ ಆತ ಕಳ್ಳರಿಂದ ಸುರಕ್ಷಿತವಾಗಿರಲೆಂದು ತನ್ನ ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನಕ್ಕೇ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ.ಕಳೆದ ನವೆಂಬರ್‌-ಜನವರಿ ಅಂತ್ಯದವರೆಗೆ ಬ್ಯಾಂಕ್‌ ಲಾಕರ್‌ನಲ್ಲಿ ಗ್ರಾಹಕರು ಇಟ್ಟಿದ್ದ 4.12 ಕೋಟಿ ರು. ಮೌಲ್ಯದ 2.783 ಗ್ರಾಂ. ಚಿನ್ನಾಭರಣಗಳನ್ನು ಹಂತ-ಹಂತವಾಗಿ ಕಿರಣ್ ಕಳವು ಮಾಡಿದ್ದ. ಈ ಆಭರಣಗಳನ್ನು ಬೇರೆ ಬೇರೆ ಖಾಸಗಿ ಫೈನಾನ್ಸ್‌ ಕಂಪನಿಗಳಲ್ಲಿ ಅಡವಿಟ್ಟು ಸುಮಾರು 2.5 ಕೋಟಿ ರು. ಪಡೆದಿದ್ದ. ಈ ಹಣದಲ್ಲಿ ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಜೂಜಾಡಿದ್ದ. ಈವರೆಗೆ ಬೆಟ್ಟಿಂಗ್‌ನಲ್ಲಿ ಆತ 5 ಕೋಟಿ ರು. ಕಳೆದಿದ್ದಾನೆ ಎನ್ನಲಾಗಿದೆ.

ಮೊದಲು ತನ್ನ ವೇತನ, ನಂತರ ಕುಟುಂಬದವರ ಆಭರಣ, ಸ್ನೇಹಿತರಿಂದ ಸಾಲ ಮಾಡಿ ಲಕ್ಷ ಲಕ್ಷ ಹಣ ಪಣಕ್ಕಿಟ್ಟು ಜೂಜಾಡಿ ಕೈ ಸುಟ್ಟುಕೊಂಡಿದ್ದ. ಇಷ್ಟಾದರೂ ಬುದ್ಧಿ ಕಲಿಯದ ಆತ ಕೊನೆಗೆ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಗ್ರಾಹಕರ ಬಂಗಾರವನ್ನೇ ಕದ್ದು ಜೂಜಾಡಿ ಕಿರಣ್ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆರೆಯಾಗಿದ್ದು ಹೇಗೆ?ಕಳೆದ ವರ್ಷ ಜೂನ್‌ನಿಂದ ಗಿರಿನಗರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದ ಕಿರಣ್ ಬಳಿ ಬ್ಯಾಂಕ್ ಲಾಕರ್‌ಗಳ ಕೀಗಳಿದ್ದವು. ಗ್ರಾಹಕರ ಲಾಕರ್ ತೆಗೆಯುವ ಅಧಿಕಾರ ಸಹ ಆತನಿಗೆ ಇತ್ತು. ಹಣದ ಅವಶ್ಯಕತೆ ಬಿದ್ದಾಗಲೆಲ್ಲ ಗ್ರಾಹಕರ ಲಾಕರ್ ಬೀಗ ತೆಗೆದು ಚಿನ್ನ ಕಳವು ಮಾಡುತ್ತಿದ್ದ. ಇದಕ್ಕಾಗಿ ಬೆಳಗ್ಗೆ ಕಚೇರಿಗೆ ಬೇಗ ಬಂದು ಅಥವಾ ಸಂಜೆ ನೌಕರರು ಹೊರಟ ಬಳಿಕ ಕೈಚಳಕ ತೋರಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.


ಬ್ಯಾಂಕ್‌ ಲಾಕರ್‌ನಲ್ಲಿ ಆಭರಣ ಇಡುವ ಮುನ್ನ ಗ್ರಾಹಕರಿಂದ ಚಿನ್ನದ ಲೆಕ್ಕ ಪರಿಶೀಲಿಸಿ ಸಹಿ ಪಡೆಯುವುದು ಕಿರಣ್ ಜವಾಬ್ದಾರಿ. ಅಲ್ಲದೆ, ಆತನ ಸಮ್ಮುಖದಲ್ಲೇ ಗ್ರಾಹಕರು ಲಾಕರ್‌ನಲ್ಲಿ ಚಿನ್ನಾಭರಣಗಳನ್ನು ಇಡುತ್ತಿದ್ದರು. ಹೀಗಾಗಿ ಆರೋಪಿಗೆ ಯಾವ್ಯಾವ ಲಾಕರ್‌ನಲ್ಲಿ ಎಷ್ಟು ಚಿನ್ನವಿದೆ ಎಂಬ ಸ್ಪಷ್ಟ ಮಾಹಿತಿ ಇತ್ತು. ಹೆಚ್ಚಿನ ಪ್ರಮಾಣದಲ್ಲಿದ್ದ ಚಿನ್ನದಲ್ಲಿ ಗ್ರಾಂ. ಲೆಕ್ಕದಲ್ಲಿ ಕದ್ದು ಬಳಿಕ ಅದನ್ನು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡಮಾನವಿಟ್ಟು ಕಿರಣ್ ಹಣ ಪಡೆಯುತ್ತಿದ್ದ. ಹೀಗೆ ಬೆಳಗ್ಗೆ 10 ಲಕ್ಷ ರು. ಪಡೆದರೆ ಸಂಜೆ ವೇಳೆಗೆ ಬೆಟ್ಟಿಂಗ್‌ನಲ್ಲಿ ಕಳೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ತಪ್ಪೊಪ್ಪಿಗೆಬ್ಯಾಂಕ್‌ನಲ್ಲಿ ಚಿನ್ನ ಅಡಮಾನವಿಟ್ಟು ಸಾಲ ಪಡೆದಿದ್ದ ಗ್ರಾಹಕಿಯೊಬ್ಬರು, ಫೆ.2 ರಂದು ಸಾಲ ಮರುಪಾವತಿಸಿ ಆಭರಣ ಮರಳಿ ಪಡೆಯಲು ಬಂದಿದ್ದರು. ಆಗ ವ್ಯವಸ್ಥಾಪಕರು ಲಾಕರ್ ತೆರೆದು ಗ್ರಾಹಕಿಗೆ ಆಭರಣದ ಲೆಕ್ಕ ಒಪ್ಪಿಸುತ್ತಿದ್ದರು. ಆ ವೇಳೆ ಚಿನ್ನಾಭರಣಗಳಿದ್ದ ಪೊಟ್ಟಣ ತೆರೆದಾಗ ಪ್ರತಿಯೊಂದರಲ್ಲಿ ಕೆಲ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಗೊಂಡ ವ್ಯವಸ್ಥಾಪಕರು, ಕೂಡಲೇ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಂತರಿಕ ವಿಚಾರಣೆ ನಡೆಸಿದಾಗ ಕಿರಣ್ ಮೇಲೆ ಶಂಕೆ ಮೂಡಿದೆ. ಆತನನ್ನು ವಲಯ ಮುಖ್ಯಸ್ಥ ದಿಲೀಪ್ ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಕೂಡಲೇ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಕಿರಣ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಟ್ಟಿಂಗ್‌ ನಲ್ಲಿ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗ್ರಾಹಕರ ಚಿನ್ನ ಸುರಕ್ಷಿತ, ಆತಂಕ ಬೇಡ: ಡಿಸಿಪಿ

ತಮ್ಮ ಚಿನ್ನದ ವಿಚಾರವಾಗಿ ಬ್ಯಾಂಕ್‌ನ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಸಂತ್ರಸ್ತ ಗ್ರಾಹಕರಿಗೆ ಅವರ ಆಭರಣ ಶೀಘ್ರದಲ್ಲೇ ಬ್ಯಾಂಕ್ ಮೂಲಕ ಮರಳಿಸಲಾಗುತ್ತದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.ಬ್ಯಾಂಕ್‌ನಲ್ಲಿ 2.783 ಕೆಜಿ ಆಭರಣವನ್ನು ಕದ್ದು ವಿವಿಧ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಅಡಮಾನವಿಟ್ಟಿದ್ದು ತನಿಖೆಯಲ್ಲಿ ದಾಖಲೆಗಳು ಪತ್ತೆಯಾಗಿವೆ. ಆ ಚಿನ್ನವನ್ನು ಕಾನೂನು ಪ್ರಕಾರ ವಶಕ್ಕೆ ಪಡೆದು ಬ್ಯಾಂಕ್‌ಗೆ ಹಿಂತಿರುಗಿಸಲಾಗುತ್ತದೆ. ಆನಂತರ ಗ್ರಾಹಕರಿಗೆ ಬ್ಯಾಂಕ್‌ನವರು ಹಸ್ತಾಂತರಿಸಲಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.