ಬಳ್ಳಾರಿ: ಬ್ಯಾಂಕ್ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವರ ಹಣದಿಂದಲೇ ಬ್ಯಾಂಕ್ ಗಳು ವ್ಯವಹಾರ ನಡೆಸುತ್ತಿವೆ. ಮುಖ್ಯವಾಗಿ ಜಿಲ್ಲಾ ಲೀಡ್ ಬ್ಯಾಂಕ್ ಸಭೆಗಳು ನಡೆಯುತ್ತಿಲ್ಲ. ಇದರಿಂದ ರೈತ ಕಲ್ಯಾಣ ವಿಮುಖವಾಗುತ್ತಿದೆ ಎಂದು ಸಂಸದ ಈ.ತುಕಾರಾಂ ಅವರು ಬೇಸರ ವ್ಯಕ್ತಪಡಿಸಿದರು.ನಗರದ ಜಿಪಂನ ಹೊಸ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಬುಧವಾರ ಎಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” ಸಮಿತಿಯ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸಂಘಟಿತ ವಲಯದಲ್ಲಿನ ಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಲು ಅವರಿಗೆ ಸಾಲ ಸೌಲಭ್ಯ ನೀಡಲು ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆಯಡಿ ಲೋನ್ ಗಾಗಿ ಸಲ್ಲಿಸಿದ ಅರ್ಜಿಗಳಲ್ಲಿ ಮಂಜೂರಾತಿಗಳಿಗಿಂತ ತಿರಸ್ಕಾರಗೊಂಡಿರುವ ಅರ್ಜಿಗಳೇ ಹೆಚ್ಚಾಗಿವೆ. ಯಾವ ಕಾರಣಕ್ಕೆ ತಿರಸ್ಕಾರಗೊಂಡಿವೆ? ಎಂದು ಅಧಿಕಾರಿಗಳು ಉತ್ತರಿಸಬೇಕು. ಈ ಯೋಜನೆಯು ಜಿಲ್ಲೆಯಲ್ಲಿ ಸಾಕಾರಗೊಂಡಿಲ್ಲ. ಕೇಂದ್ರದ ಯಾವುದೇ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ ಶೆಡ್ ಬಳಕೆಯಾಗುತ್ತಿಲ್ಲ. ರಸ್ತೆಯಲ್ಲಿ ರೈತರು ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿಗೆ ಹೋಗುವಂತೆ ನಿರ್ದೇಶನ ನೀಡಬೇಕು. ಸಂಡೂರು ತಾಲೂಕಿನಲ್ಲಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ವಾಹನ ತೂಕ ಸೇತುವೆ ನಿರ್ಮಿಸಲಾಗಿದೆ. ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ. ಕೇಂದ್ರ, ರಾಜ್ಯ ಅನುದಾನ ದುರ್ಬಳಕೆಯಾಗಿದೆ. ನಿಮಗೆ ಜವಾಬ್ದಾರಿಯಿಲ್ಲವೇ ಎಂದು ಎಪಿಎಂಸಿ ಉಪನಿರ್ದೇಶಕರನ್ನು ಸಂಸದರು ಪ್ರಶ್ನಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅತ್ಯಾಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮಾಡಲು ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚಿಸಿದರು.ರ್‍ಯಾಗಿಂಗ್- ಸಿಸಿಟಿವಿ ಅಳವಡಿಸಿ:
ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಕಂಡುಬರುತ್ತಿವೆ. ರಾತ್ರಿ ವೇಳೆ ಗಸ್ತು ಪಡೆ ಹೆಚ್ಚಿಸಬೇಕು. ಇಸ್ಪೀಟ್, ಜೂಜಾಟ, ಅಕ್ರಮ ದಂಧೆ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು. ನಗರದಲ್ಲಿ ಪದವಿ, ಪದವಿಪೂರ್ವ ಕಾಲೇಜುಗಳಲ್ಲಿ ರ‍್ಯಾಗಿಂಗ್ ಚಟುವಟಿಕೆ ಕಂಡುಬರುತ್ತಿದ್ದು, ಕಾಲೇಜು ಆವರಣಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಹಂಚಿಕೆಯಾದ ಅನುದಾನ ಮಾಹಿತಿ, ಅನುಷ್ಠಾನದ ವಿವರ, ಕಾಮಗಾರಿ ಪ್ರಗತಿ ಹಾಗೂ ಅಧಿಕಾರಿಗಳ ಸಮಯ ಉಳಿತಾಯಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡು ತಹಶೀಲ್ದಾರ್, ತಾಪಂ ಇಒಗಳಿಗೆ ಎನ್‌ಎಂಡಿಸಿ ಸಿಎಸ್‌ಆರ್ ಅನುದಾನದಡಿ ಜೂನ್ ಒಳಗಾಗಿ ಟ್ಯಾಬ್ ವಿತರಿಸಲು ಮುಂದಡಿ ಇಡಲಾಗುವುದು. ಇದರಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿಯಲ್ಲಿ ಪಾರ್ಲಿಮೆಂಟ್ ಮಾದರಿಯಲ್ಲಿ ಕಾಗದರಹಿತ ಡಿಜಿಟಲ್ ದಿಶಾ, ಕೆಡಿಪಿ ಸಭೆ ನಡೆಸಲಾಗುವುದು ಎಂದರು.
ಸರ್ಕಾರಿ ಆಸ್ಪತೆಗಳಲ್ಲಿ ಔಷಧಿ ಕೊರತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಜಿಲ್ಲೆಯಲ್ಲಿ ಯಾವುದಾದರೂ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕಂಡುಬಂದಿದೆಯೇ? ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ವಿಚಾರಿಸಿದರು. ಇದಕ್ಕೆ ಪ್ರತ್ರಿಕ್ರಿಯಿಸಿದ ಡಿಎಚ್‌ಒ ಡಾ.ಯಲ್ಲಾ ರಮೇಶ್ ಬಾಬು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಔಷಧಿಗಳ ಕೊರತೆ ಕಂಡುಬಂದಿಲ್ಲ ಎಂದು ಸಭೆಗೆ ತಿಳಿಸಿದರು.ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಸಂಡೂರು ಶಾಸಕಿ ಈ.ಅನ್ನಪೂರ್ಣ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮಹಮ್ಮದ್ ಹಾರಿಸ್ ಸುಮೇರ್, ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ, ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಪಂ ಇಒಗಳು ಹಾಗೂ ಇತರರು ಉಪಸ್ಥಿತರಿದ್ದರು.