ಅನುಕಂಪದ ಉದ್ಯೋಗ ನೀಡಲು ಬ್ಯಾಂಕ್‌ ನಕಾರ; ಕ್ರಮ ಎತ್ತಿ ಹಿಡಿದ ಹೈಕೋರ್ಟ್‌

| Published : Feb 28 2024, 02:31 AM IST

ಸಾರಾಂಶ

ಮೃತ ಉದ್ಯೊಗಿಯ ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ನಿರಾಕರಿಸಿದ ಖಾಸಗಿ ಬ್ಯಾಂಕಿನ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೃತ ಉದ್ಯೊಗಿಯ ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ನಿರಾಕರಿಸಿದ ಖಾಸಗಿ ಬ್ಯಾಂಕಿನ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಅನುಕಂಪದ ಆಧಾರದ ಮೇಲೆ ತನಗೆ ಉದ್ಯೋಗ ನೀಡಲು ಬ್ಯಾಂಕ್‌ ನಿರಾಕರಿಸಿದ ಕ್ರಮ ಪ್ರಶ್ನಿಸಿ ಮೃತ ಉದ್ಯೋಗಿ ಕಾವೇರಪ್ಪ ಅವರ ವಿವಾಹಿತ ಪುತ್ರಿ ಕೆ.ಲಕ್ಷ್ಮಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮುಗದಂ ಅವರ ಪೀಠ ಆದೇಶಿಸಿದೆ.

ಮೃತ ಉದ್ಯೋಗಿಯ ಕುಟುಂಬಕ್ಕೆ ಭವಿಷ್ಯ ನಿಧಿ, ಗ್ರಾಚ್ಯುಟಿ ಸೇರಿದಂತೆ ಇನ್ನಿತರ ಸೌಲಭ್ಯಗಳ (ಟರ್ಮಿನಲ್‌ ಬೆನಿಫಿಟ್ಸ್‌) ಅಡಿಯಲ್ಲಿ 30 ಲಕ್ಷ ಹಣ ಪಾವತಿಸಿದ ಮತ್ತು ಮೃತ ಉದ್ಯೋಗಿಯ ಪತ್ನಿಗೆ ಮಾಸಿಕ 28 ಸಾವಿರ ರು. ಪಿಂಚಣಿ ನೀಡುತ್ತಿರುವ ಬ್ಯಾಂಕಿನ ಕ್ರಮವನ್ನು ಪರಿಗಣಿಸಿದ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿವರ:

ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಕಾವೇರಪ್ಪ ಅವರು ಅನಾರೋಗ್ಯದಿಂದ 2022ರ ಅ.7ರಂದು ಸಾವನ್ನಪ್ಪಿದ್ದರು. ತಂದೆಯ ಸಾವಿನ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಉದ್ಯೋಗ ನೀಡುವಂತೆ ಕೋರಿ ಅರ್ಜಿದಾರೆ ಲಕ್ಷ್ಮೀ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರೆಯು ವಿವಾಹಿತರಾಗಿರುವ ಕಾರಣ, ತಂದೆಯ ಮೇಲೆ ಅಲಂಬಿತರಾಗಿರುವುದಾಗಿ ಹೇಳಿಕೊಂಡು ಅನುಕಂಪದ ಉದ್ಯೋಗದ ಹಕ್ಕು ಕ್ಲೇಮು ಮಾಡಲಾಗದು ಎಂದು ತಿಳಿಸಿದ್ದ ಬ್ಯಾಂಕ್‌, ಲಕ್ಷ್ಮೀ ಅವರ ಅರ್ಜಿ ತಿರಸ್ಕರಿಸಿತ್ತು. ಇದರಿಂದ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತನಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ. ಪತಿಯು ಬೀದಿ ಬದಿ ವ್ಯಾಪಾರಿಯಾಗಿದ್ದು, ಸಾಕಾಗುವಷ್ಟು ಆದಾಯ ಇಲ್ಲ. ತಂದೆ ಸಾವನ್ನಪ್ಪುವ ಮುನ್ನ ಪೋಷಕರು ತಮ್ಮೊಂದಿಗೆ ನೆಲೆಸಿದ್ದರು. ಹಾಗಾಗಿ, ಅನುಕಂಪದ ಉದ್ಯೋಗ ನೀಡಲು ಬ್ಯಾಂಕಿಗೆ ಆದೇಶಿಸಬೇಕು ಎಂದು ಲಕ್ಷ್ಮೀ ಕೋರಿದ್ದರು.

ಮತ್ತೊಂದೆಡೆ ಬ್ಯಾಂಕ್‌ ಪರ ವಕೀಲರು ಪಿಎಫ್‌, ಗ್ಯಾಚುಟಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಅಡಿಯಲ್ಲಿ 30 ಲಕ್ಷ ಹಣವನ್ನು ಮೃತ ಉದ್ಯೋಗಿಯ ಕುಟುಂಬಕ್ಕೆ ಪಾವತಿಸಲಾಗಿದೆ. ಕಾವೇರಪ್ಪ ಪತ್ನಿ ಮಾಸಿಕ 28,272 ರು. ಪಿಂಚಣಿ ಸ್ವೀಕರಿಸುತ್ತಿದ್ದಾರೆ. ಅರ್ಜಿದಾರೆ ವಿವಾಹಿತರಾಗಿದ್ದಾರೆ. ಹಾಗಾಗಿ, ಆಕೆಗೆ ಅನುಕಂಪದ ಉದ್ಯೋಗ ಕಲ್ಪಿಸದ ಬ್ಯಾಂಕಿನ ಕ್ರಮ ಸೂಕ್ತವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಉದ್ಯೋಗಿ ಕುಟುಂಬಕ್ಕೆ ಬ್ಯಾಂಕ್‌ನಿಂದ 30 ಲಕ್ಷ ರು. ಹಣ ಪಾವತಿಸಲಾಗಿದೆ. ಮೃತ ಉದ್ಯೋಗಿಯ ಪತ್ನಿಗೆ ಮಾಸಿಕ 28,272 ರು. ಪಿಂಚಣಿ ಸಹ ಪಾವತಿಸಲಾಗುತ್ತಿದೆ. ಹಾಗಾಗಿ ಅನುಕಂಪದ ಉದ್ಯೋಗವೆಂಬ ಹೆಚ್ಚುವರಿ ಬೆಂಬಲದ ಅಗತ್ಯವಿಲ್ಲದೆ ತಮ್ಮ ಜೀವನ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟು ಲಕ್ಷ್ಮಿ ಅವರ ಅರ್ಜಿ ವಜಾಗೊಳಿಸಿದೆ.