ಸಾರಾಂಶ
ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ಬ್ಯಾಂಕಿಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಹುಬ್ಬಳ್ಳಿ: ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ಬ್ಯಾಂಕಿಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಇಲ್ಲಿನ ಗೋಪನಕೊಪ್ಪದ ನಿವಾಸಿ ಮಂಜುನಾಥ್ ಹಬೀಬ್ (28) ಎಂಬಾತನೇ ಬಂಧಿತ ಆರೋಪಿ. ಈತ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದನಂತೆ. ಹಣ ಕಳೆದುಕೊಂಡ ಈತ ಹಣ ಪಡೆದುಕೊಳ್ಳಲು ಬ್ಯಾಂಕ್ ಸುಲಿಗೆ ಮಾಡಲು ಯೋಚಿಸಿದ್ದಾನೆ.ಅದರಂತೆ ಗುರುವಾರ ಸಂಜೆ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾಶ್ ಕೌಂಟರ್ ಬಳಿ ತೆರಳಿದ್ದಾನೆ. ಬ್ಯಾಂಕಿನ ನೌಕರರ ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿ ಕೂಡಲೇ ₹10 ಲಕ್ಷ ದುಡ್ಡನ್ನು ಬ್ಯಾಗ್‌ನಲ್ಲಿ ಹಾಕಿ, ಇಲ್ಲದಿದ್ದಲ್ಲಿ ಈ ನೌಕರರನ್ನು ಸುಮ್ಮನೆ ಬಿಡಲ್ಲ ಎಂದು ಹೆದರಿಸಿದ್ದಾನೆ.
ಕೂಡಲೇ ಇತರೆ ನೌಕರರು ಆ ನೌಕರನ ರಕ್ಷಣೆಗೆ ತೆರಳಿದ್ದಾರೆ. ಇದರಿಂದ ಗಾಬರಿಯಾದ ಈತ ಕೂಡಲೇ ಎಲ್ಲರನ್ನು ತಳ್ಳಿಕೊಂಡು ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ. ಈ ಕುರಿತಂತೆ ಬ್ಯಾಂಕಿನ ಸಿಬ್ಬಂದಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕಾರ್ಯಾಚರಣೆಗೆ ಇಳಿದ ಪೊಲೀಸರು, ಸಿಸಿ ಟಿವಿ ಫುಟೇಜ್ ವೀಕ್ಷಿಸಿ, 5 ಗಂಟೆ ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಪಿಎಂಸಿ ಠಾಣೆಯ ಪಿಐ ಸಮಿವುಲ್ಲಾ ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಬ್ಯಾಗ್ ಹಾಗೂ ಎರಡು ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.