ರಾಮನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಒದಗಿಸುವ ಸಾಲ, ಸಹಾಯಧನಗಳನ್ನು ನಿಗದಿತ ಅವಧಿಯಲ್ಲಿ ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳ ಅಗತ್ಯಗಳಿಗೆ ಶೀಘ್ರವಾಗಿ ಸ್ಪಂದಿಸಿ ಸಾಲ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಸಂಸದ ಡಾ.ಸಿ.ಎನ್. ಮಂಜುನಾಥ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕರ್‌ಗಳ ಜಿಲ್ಲಾ ಸಮಾಲೋಚನಾ ಸಮಿತಿ (ಡಿಎಲ್‌ಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯಲ್ಲಿ ಮಾತನಾಡಿದ ಅವರು, ಕೃಷಿ, ಸ್ವಯಂ ಉದ್ಯೋಗ, ಶಿಕ್ಷಣ ಸಾಲ, ಮಹಿಳಾ ಸಬಲೀಕರಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ವಿತರಣೆ ಸೇರಿದಂತೆ ವಿವಿಧ ಬ್ಯಾಂಕಿಂಗ್ ಯೋಜನೆಗಳ ಪ್ರಗತಿ ಪರಿಶೀಲಿಸಿದರು.ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸುವುದು, ಫಲಾನುಭವಿಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುವಂತೆ ಬ್ಯಾಂಕರ್‌ಗಳಿಗೆ ಸೂಚಿಸಿದರು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಅಟಲ್ ಪೆನ್ಷನ್ ಯೋಜನೆ ಕುರಿತು ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸಬೇಕು. ಸರ್ಕಾರದ ವಿವಿಧ ಜನಪರ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಲ ಸಹಾಯಧನದ ಹಣ ವಿಳಂಬವಿಲ್ಲದೇ ಬ್ಯಾಂಕ್‌ಗಳು ತಲುಪಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್‌ಗಳ ಶಾಖೆಗಳಲ್ಲಿ ಕಡ್ಡಾಯವಾಗಿ ಒಬ್ಬರಾದರೂ ಕಡ್ಡಾಯವಾಗಿ ಕನ್ನಡ ಬಲ್ಲವರಾಗಬೇಕು. ಇದರಿಂದ ಬ್ಯಾಂಕ್ ಗ್ರಾಹಕರ ಅದರಲ್ಲೂ ಗ್ರಾಮೀಣ ಗ್ರಾಹಕರ ಕುಂದುಕೊರತೆಗಳನ್ನು ಬಗೆಹರಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರದ ಸರ್ಕಾರದ ಯೋಜನೆಗಳಡಿ ಸಾಲ-ಸಹಾಯಧನ ಸೌಲಭ್ಯಕ್ಕಾಗಿ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗಧಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ಹಲವು ಪ್ರಮುಖ ಬ್ಯಾಂಕ್‌ಗಳ ಶಾಖೆಗಳಲ್ಲಿ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಶೀಘ್ರವಾಗಿ ವಿಲೇ ಮಾಡುವ ಮೂಲಕ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ಅನುಕೂಲವಾಗಲಿದೆ ಎಂದರು.


ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಶಾಖಾ ವ್ಯವಸ್ಥಾಪಕರು ತಮ್ಮ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಬ್ಯಾಂಕುಗಳಿಗೆ ಸಂಬಂಧಿಸಿದ ವಿಷಯಗಳು ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಪರೀಕ್ಷೆಗಳನ್ನು ಎದುರಿಸುವುದರಿಂದ ಸ್ಥಳೀಯರು ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ, ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಜಿಲ್ಲಾ ಲೀಡ್ ಬ್ಯಾಂಕ್ ಆದ ಯೂನಿಯನ್ ಬ್ಯಾಂಕ್ ವತಿಯಿಂದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆಗಳನ್ನು ನಿಯಮಿತವಾಗಿ ನಡೆಸಿ ಯೋಜನೆಗಳಡಿ ಸಲ್ಲಿಕೆಯಾಗಿರುವ ಅರ್ಜಿ ಪರಿಶೀಲನೆ ನಡೆಸಬೇಕು ಎಂದು ಮಂಜುನಾಥ್ ಹೇಳಿದರು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಅಟಲ್ ಪೆನ್ಷನ್ ಯೋಜನೆಯಡಿ ಹೆಚ್ಚು ಗುರಿ ಸಾಧಿಸಿದ ಬ್ಯಾಂಕ್‌ಗಳ ಶಾಖಾ ವ್ಯವಸ್ಥಾಪಕರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯಡಿ ಸಾಧಿಸಿರುವ ಪ್ರಗತಿ, ಖೇತಿ ಬಚಾವೋ ಅಭಿಯಾನ ಹಾಗೂ ಕೃಷಿಕ ಅಪ್ಲಿಕೇಶನ್, ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವನಿಧಿ), ಪಿಎಂ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ), ಪಿಎಂ ಸೂರ್ಯ ಘರ್ ಯೋಜನೆ, ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ ಯೋಜನೆ (ಪಿಎಂಎಫ್ ಎಂಇ) ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್ ಬಿವೈ ಮತ್ತು ಎಪಿವೈ ಯೋಜನೆಗಳ ಪ್ರಗತಿ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಪಂ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮೋಹನ್ ಕುಮಾರ್, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು, ಇಲಾಖೆಗಳ ಪ್ರತಿನಿಧಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್ ................

ಕೇಂದ್ರದ ಜನಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಬ್ಯಾಂಕುಗಳು ಹಾಗೂ ಸಂಬಂಧಿತ ಇಲಾಖೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ದೇಶದಲ್ಲಿ ಕೆಲವರು ಸಾವಿರಾರು ಕೋಟಿ ಸಾಲ ಪಡೆದು ಮರುಪಾವತಿಸದೆ ವಿದೇಶಗಳಿಗೆ ತೆರಳುವ ಘಟನೆಗಳು ನಡೆಯುತ್ತಿವೆ. ಆದರೆ ಜನಸಾಮಾನ್ಯರು ಹಾಗೂ ರೈತರು ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸುತ್ತಾರೆ. ಆದಕಾರಣ ಬ್ಯಾಂಕುಗಳು ರೈತರು ಮತ್ತು ಸಾಮಾನ್ಯರ ಬಗ್ಗೆ ಹೆಚ್ಚಿನ ವಿಶ್ವಾಸ ಇಟ್ಟು, ಅಗತ್ಯ ಸಾಲ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು.

- ಡಾ.ಸಿ.ಎನ್.ಮಂಜುನಾಥ್, ಸಂಸದರು

18ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕರ್‌ಗಳ ಜಿಲ್ಲಾ ಸಮಾಲೋಚನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆಯಿತು.