ಸಾಲ, ಠೇವಣಿ ಅನುಪಾತವನ್ನು ಮತ್ತಷ್ಟು ಸುಧಾರಿಸಲು ಎಲ್ಲ ಬ್ಯಾಂಕ್‌ಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

ಧಾರವಾಡ:

ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರ ಜಾರಿಗೆ ತರುತ್ತಿರುವ ವಿವಿಧ ಜನಹಿತ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಬೇಕಾದರೆ ಬ್ಯಾಂಕ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಜಿಪಂ ಸಭಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಬ್ಯಾಂಕರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ವಿಶೇಷವಾಗಿ ಕೃಷಿ, ಸಣ್ಣ ಉದ್ಯಮ, ಸ್ವ ಉದ್ಯೋಗ, ಮಹಿಳಾ ಸ್ವ-ಸಹಾಯ ಗುಂಪುಗಳು ಹಾಗೂ ಯುವಕರಿಗೆ ನೀಡಲಾಗುವ ಸಾಲ ಸೌಲಭ್ಯಗಳು ಸರಿಯಾದ ಸಮಯದಲ್ಲಿ ಲಭ್ಯವಾಗುವಂತೆ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಬ್ಯಾಂಕ್‌ಗಳ ಸಾಲ ವಿತರಣೆ ಮತ್ತು ಠೇವಣಿ ಸಂಗ್ರಹಣೆಯ ಪ್ರಗತಿ ಪರಿಶೀಲಿಸಿ, ಸಾಲ, ಠೇವಣಿ ಅನುಪಾತವನ್ನು ಮತ್ತಷ್ಟು ಸುಧಾರಿಸಲು ಎಲ್ಲ ಬ್ಯಾಂಕ್‌ಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ತಿಳಿಸಿದರು.

ಡಿಜಿಟಲ್‌ ಬಗ್ಗೆ ಅರಿವು ಮೂಡಿಸಿ:ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ನಗದು ರಹಿತ ವಹಿವಾಟು ಉತ್ತೇಜಿಸುವ ಮೂಲಕ ಆರ್ಥಿಕ ಶಿಸ್ತನ್ನು ಬೆಳೆಸಿಕೊಳ್ಳಬೇಕು ಮತ್ತು ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಗ್ರಾಹಕರಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸಾಲ ವಿತರಣೆಗೆ ವಿಳಂಬ ಬೇಡ:

ಸ್ವ-ಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಸಾಲ ಮಂಜೂರಾತಿಯಲ್ಲಿ ಅನಗತ್ಯ ವಿಳಂಬ ಆಗಬಾರದು ಮತ್ತು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ದೊರೆಯುವಂತೆ ಕ್ರಮಕೈಗೊಳ್ಳಬೇಕು. ಯುವಕರಲ್ಲಿ ಉದ್ಯಮಶೀಲತೆ ಬೆಳೆಸಲು ಬ್ಯಾಂಕ್‌ಗಳು ಮಾರ್ಗದರ್ಶನ ಮತ್ತು ಹಣಕಾಸು ನೆರವು ಒದಗಿಸಬೇಕೆಂದು ಭುವನೇಶ ಪಾಟೀಲ ತಿಳಿಸಿದರು.

ಸರ್ಕಾರಿ ಹಾಗೂ ಅರೆ ಸರ್ಕಾರಿ ಬ್ಯಾಂಕಿನವರು ಸಿಎಸ್‌ಆರ್ ಚಟುವಟಿಕೆ ಕೈಗೊಂಡು, ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ತೆರೆಯುವುದು, ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಮ್‌ ತೆರೆಯುವುದು, ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿ ಸೇರಿದಂತೆ ಮುಂತಾದ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ, ಕ್ರಮವಹಿಸಬೇಕು ಎಂದು ಹೇಳಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಗ್ರಾಹಕರಿಗೆ ಉತ್ತಮವಾಗಿ ಸ್ಪಂದಿಸಬೇಕು. ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಲೀನಗೊಂಡ ಮೇಲೆ ರೈತರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕು ಎಂದರು.

ಸ್ಥಳೀಯ ಭಾಷೆಯ ಸಮಸ್ಯೆ ಬ್ಯಾಂಕ್‌ಗಳಲ್ಲಿ ಕಂಡು ಬರುತ್ತಿದ್ದು ರೈತರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಗಳು ಹೆಚ್ಚಾಗಿ ಬರುವುದಿಲ್ಲ. ಬ್ಯಾಂಕಿನವರು ಸ್ಥಳೀಯ ಭಾಷೆಗೆ ಅತಿ ಹೆಚ್ಚು ಆದ್ಯತೆ ನೀಡಬೇಕು ಅಥವಾ ಬ್ಯಾಂಕ್‌ನಲ್ಲಿ ಕನ್ನಡ ಮಾತನಾಡುವವರು ಮ್ಯಾನೇಜರ್ ಜತೆ ಇದ್ದು, ರೈತರಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದ ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬಳೆ, ಬ್ಯಾಂಕ್ ಆಫ್ ಬರೋಡಾ ಉಪ-ಪ್ರಾದೇಶಿಕ ವ್ಯವಸ್ಥಾಪಕ ಅಮರೇಶ ಗೌಡ, ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ತೊದಲಬಾಗಿ ಇದ್ದರು.