ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಶ್ರೇಷ್ಠ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ಶಿವಮೊಗ್ಗ: ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಶ್ರೇಷ್ಠ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆ, ಬನ್ನಂಜೆ ಅಭಿಮಾನಿಗಳ ಬಳಗ, ಹಾಗೂ ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಬನ್ನಂಜೆ 90 ರ ವಿಶ್ವ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತೀಯ ಸಂಸ್ಕೃತಿ, ಅಧ್ಯಾತ್ಮಿಕ, ಸಾಹಿತ್ಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಬನ್ನಂಜೆ ಪಾತ್ರ ಪ್ರಮುಖವಾಗಿತ್ತು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ವೈಶಿಷ್ಟ್ಯಪೂರ್ಣವಾದ ಇಂತಹ ಕಾರ್ಯಕ್ರಮಕ್ಕೆ ಶ್ರೀಗಂಧ ಸಂಸ್ಥೆ ಸದಾ ಬೆಂಬಲವಾಗಿರಲಿದೆ ಎಂದರು.ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಬನ್ನಂಜೆ ಮಧ್ವಾಚಾರ್ಯರ ಕಟ್ಟಾ ಅನುಯಾಯಿ ಆಗಿದ್ದರೂ ಕೂಡ ಬೇರೆ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದವರು. ಬೌದ್ಧ, ಜೈನ, ಇಸ್ಲಾಂ ಮೊದಲಾದ ಧರ್ಮಗಳ ಬಗ್ಗೆ ತಿಳಿದುಕೊಂಡು ಉಪನ್ಯಾಸ ನೀಡುತ್ತಿದ್ದರು. ಜ್ಞಾನದ ಬುತ್ತಿಯನ್ನು ಹಂಚಿದವರು ಬನ್ನಂಜೆ ಎಂದು ಬಣ್ಣಿಸಿದರು.ಬನ್ನಂಜೆ ಸಾಂಸ್ಕೃತಿಕ ಪ್ರಜ್ಞೆ ಕುರಿತು ಮಾತನಾಡಿದ ನಿನಾಸಂ ನಿರ್ದೇಶಕ ಕೆ.ವಿ.ಅಕ್ಷರ, ಯಾವುದೇ ಒಂದು ಖಾನೆಯಲ್ಲಿಟ್ಟು ಬನ್ನಂಜೆ ನೋಡಲು ಸಾಧ್ಯವಿಲ್ಲ. ವೈವಿಧ್ಯದ ವ್ಯಕ್ತಿತ್ವವುಳ್ಳವರಾಗಿದ್ದರು. ಅವರ ಕಾವ್ಯಕ್ಕೆ ವ್ಯಾಪ್ತಿ ಇತ್ತು. ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಚಿಂತನಗೂ ವ್ಯಾಪ್ತಿ ಇತ್ತು ಎಂದರು.ದಿ ಹಿಂದೂ ಪತ್ರಿಕೆಗಾಗಿ ಅವರನ್ನು ಸಂದರ್ಶನ ಮಾಡಿದಾಗ ಅನೇಕ ಮಹತ್ವದ ಅಂಶಗಳು ಅವರಿಂದ ಹೊರ ಬಂದಿದ್ದವು. ಕ್ರಾಂತಿಕಾರಕ ಮನುಷ್ಯನಾಗಿಯೂ ನನಗೆ ಕಂಡಿದ್ದಾರೆ. ಸಂಸ್ಕೃತ ಬಲ್ಲವರ ಸಹವಾಸ ಸಾಕು ಎನ್ನುವ ಮನಸ್ಥಿತಿಗೆ ಬಂದಿದ್ದರು. ಆಧುನಿಕ ಜ್ಞಾನದ ಯುವ ಸಮುದಾಯದೊಂದಿಗೆ ವ್ಯವಹರಿಸಬೇಕಿದೆ ಎಂಬುದನ್ನು ವ್ಯಕ್ತಪಡಿಸಿದ್ದರು ಎಂದರು.ಭಗವದ್ಗೀತೆಯನ್ನು ಮನಶಾಸ್ತ್ರೀಯ ದೃಷ್ಟಿಯಲ್ಲಿಯೂ ನೋಡಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಒತ್ತು ನೀಡಿದ್ದರು. ಉತ್ತರ ರಾಮ ಚರಿತೆಯನ್ನು ಮತ್ತೆ ರಾಮನ ಕಥೆ ಎಂದು ಅನುವಾದಿಸಿದ್ದಾರೆ. ಶಾಂಕುಂತಲಾ ನಾಟಕವನ್ನು ನೆನಪಾದಳು ಶಕುಂತಲೆ ಎಂದು ಅನುವಾದ ಮಾಡುವ ಮೂಲಕ ಭಾರತೀಯ ತತ್ವಶಾಸ್ತ್ರವನ್ನೇ ಹೊಸ ದೃಷ್ಟಿಯಲ್ಲಿ ನೋಡಿದ್ದಾರೆ ಎಂದು ತಿಳಿಸಿದರು.ಜನಪ್ರಿಯ ಉಪನ್ಯಾಸಕರಾಗಿದ್ದರು. ಅವರ ಭಾಷಣವೆಂದರೆ ಆರ್ಕೆಸ್ಟ್ರಾ ಕ್ಕೆ ಸೇರಿದಂತೆ ಜನ ಕಿತ್ತೆದ್ದು ಬರುತ್ತಿದ್ದರು. ಇಂದು ರಾಜಕೀಯ, ಸಂಸ್ಕೃತಿ, ಅರ್ಥಶಾಸ್ತ್ರ ಎಲ್ಲದರಲ್ಲೂ ಬಿಕ್ಕಟ್ಟಿನಲ್ಲಿದ್ದೇವೆ. ಇಂದು ಹುಟ್ಟುತ್ತಿರುವ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಂಡಿಲ್ಲ. ಭೂತ ಮತ್ತು ವರ್ತಮಾನವನ್ನು ಸಮತೋಲನದಲ್ಲಿಟ್ಟು ನೋಡುತ್ತಿಲ್ಲ ಎಂದರು.ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು ಸಂಸ್ಕೃತಿ. ಅಂತಹ ಕೆಲಸವನ್ನು ಬನ್ನಂಜೆ ಮಾಡಿದ್ದಾರೆ. ನಮ್ಮ ದೇಶದ ಗತಕಾಲದ ಹಾಗೂ ವರ್ತಮಾನ ಕಾಲದ ಘಟನೆಗಳನ್ನು ಸಮೀಕರಿಸಿಕೊಂಡು ಮುನ್ನಡೆಯಬೇಕಿದೆ. ನಮ್ಮ ದೇಶದ ಭೂತ ಕಾಲೇ ಶ್ರೇಷ್ಠವೆಂಬ ಭ್ರಮೆ ಬೇಡ ಎಂಬುದನ್ನು ಪ್ರತಿಪಾದಿಸಿದ್ದರು ಎಂದರು.ಬನ್ನಂಜೆ ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಡುಪಿಯ ಅದಮಾರು ಮಠದ ಕಿರಿಯ ಶ್ರೀಗಳಾದ ಈಶ್ವರ ಪ್ರಿಯ ತೀರ್ಥರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಬನ್ನಂಜೆ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಎಲ್.ಉಪಾಧ್ಯಾಯ, ದುರ್ಗಾ ಲಾಡ್ಜ್ ಮಾಲೀಕ ಎಸ್.ವಿ.ದತ್ತಾತ್ರಿ, ನೀನಾಸಂ ನಿರ್ದೇಶಕರಾದ ಕೆ.ವಿ.ಅಕ್ಷರ, ವಿದಾನ್ ಜಿ.ಎಸ್.ನಟೇಶ್, ವೀಣಾ ಬನ್ನಂಜೆ ಇದ್ದರು. ಚಿಂತನಾ ರಾಮಾಯಣ ನೃತ್ಯ ರೂಪಕ ಪ್ರದರ್ಶಿಸಲಾಯಿತು.