ಸಾರಾಂಶ
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ಮತ್ತು ಬಹುವಚನಂ ಪುತ್ತೂರು ಆಶ್ರಯದಲ್ಲಿ ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಬಹುಶ್ರುತ ವಿದ್ವಾಂಸ, ಪ್ರಖ್ಯಾತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯ ಅವರ ನೆನಪಿನ ‘ವಿಶ್ವ ಬನ್ನಂಜೆ ೯೦ರ ನಮನ’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಅನಿವಾರ್ಯ ಕಾರಣದಿಂದ ಮಾತ್ರವಲ್ಲದೆ ಆಕ್ರಮಣದಿಂದಲೂ ಸಮಾಜದ ಪಥ ಬದಲಾವಣೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ಸರಿಪಡಿಸದಿದ್ದಲ್ಲಿ ವ್ರಣವಾಗಿ ಕಾಡುತ್ತದೆ. ಈ ಕಾಲಘಟ್ಟದಲ್ಲಿ ಸರಿಯಾದ ಮಾರ್ಗದಲ್ಲಿ ಅದನ್ನು ಸರಿಪಡಿಸಬಹುದಾದ ತಾಕತ್ತು ಬನ್ನಂಜೆ ಗೋವಿಂದಾಚಾರ್ಯ ಅವರಿಗಿತ್ತು. ಸಮಾಜದ ಪಥವನ್ನು ಬದಲಾಯಿಸಬಲ್ಲ ಸಾಮರ್ಥ್ಯ ಇರುವವರಲ್ಲಿ ಬನ್ನಂಜೆ ಅವರು ಅಗ್ರಗಣ್ಯರು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ಮತ್ತು ಬಹುವಚನಂ ಪುತ್ತೂರು ಆಶ್ರಯದಲ್ಲಿ ಭಾನುವಾರ ಪುತ್ತೂರಿನ ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಬಹುಶ್ರುತ ವಿದ್ವಾಂಸ, ಪ್ರಖ್ಯಾತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯ ಅವರ ನೆನಪಿನ ‘ವಿಶ್ವ ಬನ್ನಂಜೆ ೯೦ರ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬನ್ನಂಜೆ ಗೋವಿಂದಾಚಾರ್ಯ ಅವರ ಬದುಕು ಹೊಸ ಪಾಂಡಿತ್ಯ ಕಟ್ಟಿಕೊಡುತ್ತದೆ. ಸಂಸಾರಗಳ ನಡುವಿನ ಸನ್ಯಾಸಿಯಂತೆ ಬಾಳಿದ ಅವರು, ವೈಚಾರಿಕವಾಗಿ ವೈಭವದಂತೆ, ಮಾನಸಿಕವಾಗಿ ಭೈರಾಗಿಯಂತೆ ಬದುಕಿದವರು. ಎಲ್ಲ ಕೇತ್ರಗಳಲ್ಲೂ ಪಾಂಡಿತ್ಯ ಪ್ರದರ್ಶಿಸಿದ ಬನ್ನಂಜೆ ಅವರನ್ನು ಸಮಾಜದಲ್ಲಿ ಪರಿವರ್ತನೆಯ ದೃಷ್ಟಿಯಿಂದ ನಮ್ಮ ಕಾಲದ ಋಷಿ ಪರಂಪರೆಗೆ ಸೇರಿಸಬಹುದು ಎಂದರು.ಪ್ರಾಸ್ತಾವಿಕ ಮಾತುಗಳನ್ನಾಡಿದ ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಕಾರ್ಯಾಧ್ಯಕ್ಷ, ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಛಂದೋ ವಿರಾಟ ಪ್ರತಿಭೆಯಾಗಿದ್ದ ಬನ್ನಂಜೆ ಅವರು ಇಡೀ ಭಾರತದಲ್ಲೇ ಉಪನಿಷತ್ತುಗಳ ಮೇಲೆ ಸ್ವತಂತ್ರವಾದ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಬರೆದವರು ಎಂದರು.
ಜಿ.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬನ್ನಂಜೆ ೯೦ರ ನಮನ ಪುತ್ತೂರು ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಸ್ವಾಮಿ ಉಪಸ್ಥಿತರಿದ್ದರು.ವಿವಿಧ ಗೋಷ್ಠಿಗಳು ನಡೆದವು. ಚಿಂತಕ, ಸಾಹಿತಿ ಲಕ್ಷೀಶ ತೋಳ್ಪಾಡಿ ಅವರು ‘ಬನ್ನಂಜೆ ಸ್ಮರಣೆ’, ಪ್ರಾಧ್ಯಾಪಕ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ‘ಗುರು ಬನ್ನಂಜೆ’, ಭಾರತಿ ಕಲ್ಲೂರಾಯ ಅವರು ‘ವಿಶ್ವತೋಮುಖ ಬನ್ನಂಜೆ’ ಎಂಬ ವಿಚಾರವನ್ನು ಮಂಡಿಸಿದರು. ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ, ಬನ್ನಂಜೆ ಹಾಡುಗಬ್ಬ ಪ್ರಸ್ತುತ ಪಡಿಸಿದರು. ಖ್ಯಾತ ಸಿನಿಮಾ ನಿರ್ದೇಶಕ ಸುಚೇಂದ್ರ ಪ್ರಸಾದ್ ಮತ್ತು ತಂಡ ಡಾ.ವೀಣಾ ಬನ್ನಂಜೆ ವಿರಚಿತ ‘ನನ್ನ ಪಿತಾಮಹ’ ನಾಟಕ ಪ್ರದರ್ಶಿಸಿದರು.ಪುತ್ತೂರು ಬಹುವಚನಂನ ಡಾ. ಶ್ರೀಶ ಕುಮಾರ್ ಸ್ವಾಗತಿಸಿದರು. ಬಹುವಚನಂನ ರಂಗಕರ್ಮಿ ಐ.ಕೆ.ಬೊಳುವಾರು ನಿರ್ವಹಿಸಿದರು.