ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಅಂಬೇಡ್ಕರ್ ಭವನದ ವಿವಾದ ಮತ್ತೆ ಮುಂದುವರಿದಿದೆ.ತಾವು ನಡೆಸಿದ ಧರಣಿಯ ಸಂದರ್ಭ ಅಳವಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿದ್ದ ಬ್ಯಾನರ್‌ಗಳಿಗೆ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶ ಪಡಿಸಿದ್ದಾರೆಂದು ಆರೋಪಿಸಿ ಹೋರಾಟ ಸಮಿತಿಯ ಪ್ರಮುಖರು ಮಂಗಳವಾರ ಪ್ರತಿಭಟನೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಎಲ್.ದಿವಾಕರ್, ಪ್ರಮುಖರಾದ ಮೋಹನ್ ಮೌರ್ಯ, ಎಚ್.ಸಿ.ಸತೀಶ್, ಎ.ಪಿ.ದೀಪಕ್, ಕುಮಾರ್ ಮತ್ತಿತರರು ಸ್ಥಳಕ್ಕೆ ಆಗಮಿಸಿ ಬ್ಯಾನರ್ ನಾಶಪಡಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.ಈ ಸಂದರ್ಭ ಸುದ್ದಿಗಾರರೊಂದಿಗೆ ಅಧ್ಯಕ್ಷ ಎಚ್.ಎಲ್.ದಿವಾಕರ್ ಮಾತನಾಡಿ, ಅಂಬೇಡ್ಕರ್ ಭವನ ಕೆಲವೇ ಕೆಲವು ಮಂದಿಯ ಹಿಡಿತದಲ್ಲಿದೆ. ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ಶಾಖೆಗೆ ನೀಡಬೇಕೆನ್ನುವ ಬೇಡಿಕೆಯೊಂದಿಗೆ ಹೋರಾಟಕ್ಕಿಳಿದಿದ್ದೇವೆ. ಇದನ್ನು ಸಹಿಸದವರು ನನ್ನ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಹೋರಾಟಕ್ಕೆ ಬಳಸಿದ ಬ್ಯಾನರ್ ಬೆಂಕಿ ಹಚ್ಚಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗುತ್ತದೆ. ದುಷ್ಕೃತ್ಯವೆಸಗಿದವರನ್ನು 24 ಗಂಟೆಗಳ ಒಳಗಾಗಿ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಭವನದ ಮುಂದೆ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಡಾ.ಅಂಬೇಡ್ಕರ್ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ಎಂ.ನಂದ ಕುಮಾರ್, ಗೇಟ್ ತೆರೆದು ಭವನದೊಳಗೆ ಪ್ರವೇಶಿಸಿಸಿದರು. ದಲಿತ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆರೋಪಗಳನ್ನು ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ಹಣದಾಸೆಗೆ ಕೆಲವರು ಮಾಡುತ್ತಿರುವ ಆರೋಪ ಎಂದು ಹೇಳಿದರು.ದಲಿತ ಸಮುದಾಯದ ಅನುಕೂಲಕ್ಕಾಗಿ ಡಾ.ಅಂಬೇಡ್ಕರ್ ಭವನವನ್ನು ಅತ್ಯಂತ ಪರಿಶ್ರಮದಿಂದ ನಿರ್ಮಿಸಿದ್ದೇವೆ. ಆದರೆ ಇದೀಗ ನನ್ನ ವರ್ಚಸ್ಸು ಕುಂದಿಸಲು ನಿರಾಧಾರವಾದ ಆರೋಪ ಹೊರಿಸಲಾಗುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಭವನದ ಗೇಟ್‌ಗೆ ಬ್ಯಾನರ್ ಅಳವಡಿಸಲು ಅನುಮತಿ ನೀಡಿದವರು ಯಾರೆಂದು ಪ್ರಶ್ನಿಸಿದ ನಂದ ಕುಮಾರ್, ಬ್ಯಾನರ್‌ಗೆ ಬೆಂಕಿ ಹಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲವೆಂದು ಸ್ಪಷ್ಟಪಡಿಸಿದರು.---------------ಮಾತಿನ ಚಕಮಕಿ!
ಹೋರಾಟ ಸಮಿತಿಯ ಪ್ರಮುಖ ಹಾಗೂ ನಗರಸಭಾ ಸದಸ್ಯ ಎಚ್.ಸಿ.ಸತೀಶ್, ಬ್ಯಾನರ್‌ಗೆ ಬೆಂಕಿ ಹಚ್ಚಿ ನಾಶಪಡಿಸಿರುವುದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ನಗರ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆಯಿತು. ನಿಮ್ಮ ನಡುವಿನ ಗಲಾಟೆಯಲ್ಲಿ ಪೊಲೀಸರನ್ನು ಏಕೆ ಎಳೆದು ತರುತ್ತೀರಾ? ಸೋಮವಾರ ಪ್ರತಿಭಟನೆಗೆ ಮಾತ್ರ ಅನುಮತಿ ಪಡೆಯಲಾಗಿತ್ತು. ಆದರೆ ಅಂಬೇಡ್ಕರ್ ಭವನಕ್ಕೆ ಬೀಗ ಹಾಕಿದ್ದು ಯಾಕೆ? ಗೇಟ್‌ಗೆ ಯಾರಾದರೂ ಅಂಬೇಡ್ಕರ್ ಪೋಟೋ ಹಾಕುತ್ತಾರಾ ಎಂದು ವೃತ್ತ ನಿರೀಕ್ಷಕ ಪಿ.ಕೆ.ರಾಜು ಪ್ರಶ್ನಿಸಿದರು.ಈ ಸಂದರ್ಭ ಸತೀಶ್, ಗೇಟ್‌ಗೆ ಬ್ಯಾನರ್ ಹಾಕಿದನ್ನು ಸಮರ್ಥಿಸಿಕೊಂಡರು. ವೃತ್ತ ನಿರೀಕ್ಷಕ ಪಿ.ಕೆ.ರಾಜು ಹಾಗೂ ಸತೀಶ್ ನಡುವೆ ಮಾತಿನ ಚಕಮಕಿ ನಡೆಯಿತು.