ಬಸ್ ಸಂಚಾರ ತಡೆಗಟ್ಟಿ ಬನ್ನಿಗೋಳ ಗ್ರಾಮಸ್ಥರ ಪ್ರತಿಭಟನೆ

| Published : Oct 31 2025, 02:30 AM IST

ಬಸ್ ಸಂಚಾರ ತಡೆಗಟ್ಟಿ ಬನ್ನಿಗೋಳ ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಗ್ರಾಪಂ ಸದಸ್ಯ ಜಿ.ಮೋಹನರೆಡ್ಡಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗುತ್ತಿದೆ.

ಹಗರಿಬೊಮ್ಮನಹಳ್ಳಿ: ಸಕಾಲಕ್ಕೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಬನ್ನಿಗೋಳ ಗ್ರಾಮಸ್ಥರು ಬುಧವಾರ ರಾತ್ರಿ ೨ ಬಸ್‌ಗಳ ಸಂಚಾರ ತಡೆಗಟ್ಟಿ ಪ್ರತಿಭಟನೆ ನಡೆಸಿದರು.ಗ್ರಾಮದ ಗ್ರಾಪಂ ಸದಸ್ಯ ಜಿ.ಮೋಹನರೆಡ್ಡಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗುತ್ತಿದೆ. ಸಕಾಲದಲ್ಲಿ ಬಸ್ ಸಂಚಾರವಿಲ್ಲದೆ ಮುಂಜಾನೆ ೭ಕ್ಕೆ ಮನೆ ತೊರೆದ ವಿದ್ಯಾರ್ಥಿಗಳ ರಾತ್ರಿ ೮ಕ್ಕೆ ಮನೆ ಸೇರುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅಡ್ಡಿಯಾಗುತ್ತಿದೆ. ನಿಗದಿತ ಅವಧಿಯಲ್ಲಿ ಬಸ್ ಸಂಚಾರವಾಗದೆ ಸಮಸ್ಯೆಯಾಗಿದೆ. ಈ ಕುರಿತು ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸುವಂತೆ ಗ್ರಾಮದ ಮುಖಂಡರಾದ ಬಿ.ಹರೀಶ್, ಅಳವಂಡಿ ಪ್ರಕಾಶ, ಎಚ್.ಮಂಜುನಾಥ, ಮೌನೇಶ್, ದೇವಪ್ಪ, ಮುಕ್ತಿಯಾರ್ ಬಾಷಾ, ಬಾಲಾಜಿ ಇತರರು ಒತ್ತಾಯಿಸಿದರು. ಸ್ಥಳಕ್ಕೆ ತಂಬ್ರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ಕುರಿತು ಟ್ರಾಫಿಕ್ ಇನ್‌ಸ್ಪೆಕ್ಟರ್‌ ಸಂತೋಷ್ ನಾಯ್ಕ ಪ್ರತಿಕ್ರಿಯಿಸಿ, ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ಆಗಾಗ ಬ್ರೇಕ್‌ಡೌನ್ ಮತ್ತು ರಿಪೇರಿ ಸಮಸ್ಯೆ ಎದುರಿಸುಂತಾಗಿದೆ. ಈಗಾಗಲೇ ಮಾರ್ಗದಲ್ಲಿ ೪ ಬಸ್‌ಗಳನ್ನು ಹೊಸದಾಗಿ ಸಂಚರಿಸುತ್ತಿವೆ. ಗ್ರಾಮಸ್ಥರ ಬೇಡಿಕೆ ಕುರಿತಂತೆ ಕಂಟ್ರೋಲರ್‌ಗಳ ಸಭೆ ನಡೆಸಿ, ನಿಗದಿತ ಅವಧಿಯಲ್ಲಿ ಬಸ್‌ ಸಂಚಾರ ನಡೆಸುವಂತೆ ಸೂಚಿಸಲಾಗಿದೆ ಎಂದರು.