ಸಾರಾಂಶ
--
ಕನ್ನಡಪ್ರಭ ವಾರ್ತೆ ಮೈಸೂರುನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತವು ಶುಕ್ರವಾರ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲೆಗಳ ನೂರಾರು ಮಕ್ಕಳು ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ವಿಜಯ ವಿಠ್ಠಲ ಶಾಲೆಯ 300 ವಿದ್ಯಾರ್ಥಿಗಳು ಭಾರತಾಂಬೆಯ ಮಕ್ಕಳು ನಾವು ನೃತ್ಯ ಪ್ರದರ್ಶಿಸಿದರು. ನಂತರ ಜಿಎಸ್ಎಸ್ಎಸ್ ಶಾಲೆಯ 275 ವಿದ್ಯಾರ್ಥಿಗಳು ಚಕ್ ದೇ ಇಂಡಿಯಾ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು. ಅಂತಿಮವಾಗಿ ನಳಂದ ಇಂಗ್ಲಿಷ್ ಶಾಲೆಯ 225 ವಿದ್ಯಾರ್ಥಿಗಳು ಜೈ ಹೋ ಗೀತೆಗೆ ನೃತ್ಯ ಪ್ರದರ್ಶಿಸುತ್ತಾ ರಿಬ್ಬನ್ ಫಾರ್ಮೆಷನ್ ಮಾಡುವ ಮೂಲಕ ಗಮನ ಸೆಳೆದರು.
ಗಣರಾಜ್ಯೋತ್ಸವಕ್ಕೆ ಪ್ರೇಕ್ಷಕರ ಕೊರತೆಎಂದಿನಂತೆ ಗಣರಾಜ್ಯೋತ್ಸವ ಆಚರಣೆಯಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಂಡಿತು. ಮೈದಾನದ ಒಂದ ಕಡೆ ಬಿಟ್ಟರೇ ಉಳಿದೆಡೆಯಲ್ಲಾ ಖಾಲಿ ಖಾಲಿಯಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ನೂರಾರು ಮಕ್ಕಳು ಮತ್ತು ಅವರ ಪೋಷಕರನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿರಲಿಲ್ಲ. ಇನ್ನೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಹಾಜರಾತಿ ಪ್ರಮಾಣ ಸಹ ತೀರಾ ಕಡಿಮೆ ಇತ್ತು.
ಪೊಲೀಸರಿಂದ ಭದ್ರತೆಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ನೂರಾರು ಪೊಲೀಸರನ್ನು ಮೈದಾನ ಸುತ್ತಮುತ್ತ ನಿಯೋಜಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಎನ್.ಆರ್. ಉಪ ವಿಭಾಗದ ಎಸಿಪಿ ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ವಿವಿಧ ಠಾಣೆಗಳ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.