ದಾಬಸ್‍ಪೇಟೆ: ರಾಜ್ಯ ಸರ್ಕಾರ ಕುಲಕಸುಬಾದ ಸೇಂದಿ ನಿಷೇಧಿಸಿ ನಮ್ಮ ಸಮಾಜಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಅನ್ಯಾಯ ಎಸಗಿದೆ ಎಂದು ಈಡಿಗ ಸಮುದಾಯದ ಕರದಾಳು ಶಕ್ತಿಪೀಠದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಶ್ರೀಗಳ ನೇತೃತ್ವದ ಪಾದಯಾತ್ರೆ ಸೋಂಪುರಕ್ಕೆ ತಲುಪಿದ ಸಂದರ್ಭದಲ್ಲಿ ಸಮಾಜದ ಮುಖಂಡರು ರಾಷ್ಟ್ರೀಯ ಹೆದ್ದಾರಿ-48ರ ಬಳಿ ಶ್ರೀಗಳನ್ನುಗೌರವಯುತವಾಗಿ ಬರಮಾಡಿಕೊಂಡರು.ಮದ್ಯ ನಿಷೇಧಿಸಿ ಇಲ್ಲವೇ ಸೇಂದಿ ಇಳಿಸಲು ಅನುಮತಿಸಿ: ಶ್ರೀಗಳು ಮಾತನಾಡಿ, ಇದು ನಮ್ಮ 3ನೇ ಪಾದಯಾತ್ರೆಯಾಗಿದ್ದು ಸಮುದಾಯದ ಹಲವು ಮುಖಂಡರ ಇಚ್ಚಾಶಕ್ತಿ ಕೊರತೆಯಿಂದಾಗಿ ನಾವು ಈ ಸ್ಥಿತಿಯಲ್ಲಿದ್ದೇವೆ. ರಾಜ್ಯದಲ್ಲಿ ಮದ್ಯ ನಿಷೇಧಿಸದೆ ಕೇವಲ ನಮ್ಮ ಕುಲಕಸುಬಾದ ಸೇಂದಿಯನ್ನು ಮಾತ್ರ ನಿಷೇಧಿಸಿರುವುದು ಎಷ್ಟರ ಮಟ್ಟಿಗೆ ಸರಿ? ಮಧ್ಯವನ್ನು ನಿಷೇಧಿಸಿ ಇಲ್ಲವೇ ನಮಗೂ ಸೇಂದಿ ಇಳಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
18 ಬೇಡಿಕೆ ಈಡೇರಿಸಿ:ಬೆಂಗಳೂರಿನ ವಿಧಾನಸೌಧದ ಮುಂದೆ ಸರ್ಕಾರ ಜಗದ್ಗುರು ನಾರಾಯಣಗುರುಗಳ ಪುತ್ಥಳಿ ಸ್ಥಾಪನೆ ಮಾಡಬೇಕು, ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು. ಅನುದಾನ ನೀಡಬೇಕು, ಸೇಂದಿ ಮಾರಾಟಕ್ಕೆ ವ್ಯವಸ್ಥೆ ಜಾರಿ ಮಾಡಬೇಕು, ನೀರಾ ನಿಗಮ ಸ್ಥಾಪನೆ ಮಾಡಬೇಕು, ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಎಕರೆ ಜಮೀನು ನೀಡಿ ಸಮಾಜದ ವಿದ್ಯಾರ್ಥಿಗಳ ಐಎಎಸ್, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಕೋರ್ಸ್‍ಗಳು ಹಾಗೂ ಕುಲಕಸುಬು ತರಬೇತಿ ಕೇಂದ್ರ ಸ್ಥಾಪನೆ ಮಾಡುವುದೂ ಸೇರಿದಂತೆ ವಿವಿಧ 18 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು.
ಡಿಸಿಎಂ ಡಿಕೆಶಿ ಭರವಸೆ:
ರಾಜ್ಯದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮುಂತಾದ 26 ಸಹಜಾತಿಗಳ ವಿವಿಧ 18 ಬೇಡಿಕೆಗಳನ್ನು ಈಡೇರಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ಮಾಡಿ ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯಿದೆ ಎಂದರು.
ಮುಖಂಡ ವೆಂಕಟೇಶ್ ಮಾತನಾಡಿ, ನಮ್ಮ ಬೇಡಿಕೆಗಳಿಗೆ ಸರ್ಕಾರವನ್ನು ಒತ್ತಾಯಿಸುವುದಲ್ಲದೆ ನಮ್ಮ ಸಮಾಜದಲ್ಲಿ ಸ್ವಾಭಿಮಾನ ದಾನ ಹೆಚ್ಚಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜಗದ್ಗುರು ನಾರಾಯಣ ಗುರುಗಳ ಮೂರ್ತಿಯ ಮೆರವಣಿಗೆಯೊಂದಿಗೆ ಪ್ರಣವಾನಂದ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಸಾಗಿದೆ. ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸ್ವಾಮೀಜಿ ಹೇಳಿದ್ದು, ಸ್ವಾಮೀಜಿಯವರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿಅಧ್ಯಕ್ಷರಾದ ಪ್ರೇಮಾ ವಂಕಟೇಶ್, ಚಿಕ್ಕಮ್ಮ ಮಂಜುನಾಥ್, ವೆಂಕಟೇಶ್, ಮಹೇಶ್, ರಮೇಶ್, ಕೃಷ್ಣಪ್ಪ, ಸ್ವಾಮಿ ಹಾಜರಿದ್ದರು.
ಪೋಟೋ 3 :ದಾಬಸ್‍ಪೇಟೆಯ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಕರದಾಳು ಶಕ್ತಿಪೀಠ ಅಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿಯವರನ್ನು ಈಡಿಗ ಸಮಾಜದ ಮುಖಂಡರು ಸ್ವಾಗತಿಸಿದರು.