ಕನ್ನಡಪ್ರಭ ವಾರ್ತೆ ಟಿ. ನರಸೀಪುರತಾಲೂಕು ಮಟ್ಟದ ಅಧಿಕಾರಿಗಳು ಉಡಾಫೆ ಪ್ರವೃತ್ತಿ ಬಿಟ್ಟು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು, ಸಾರ್ವಜನಿಕ ಹಾಗೂ ಅಭಿವೃದ್ಧಿ ಕೆಲಸಗಳಲ್ಲಿ ಬೇಜವಾಬ್ದಾರಿತನ ತೋರಿದರೆ ಯಾವುದೇ ಮುಲಾಜಿಲ್ಲದೇ ಅಮಾನತು ಮಾಡಲು ಶಿಫಾರಸು ಮಾಡಬೇಕಾಗುತ್ತದೆ ಎಂದು ಸಂಸದ ಸುನಿಲ್ ಬೋಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಬನ್ನೂರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದ ನಂತರ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ತೀವ್ರ ವಾಗ್ದಾಳಿ ನಡೆಸಿದರು. ಪುರಸಭೆಯಲ್ಲಿ ಲಂಚ, ಮಧ್ಯವರ್ತಿಗಳ ಹಾವಳಿಪುರಸಭೆಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಮಧ್ಯವರ್ತಿಗಳಿಗೆ ಮತ್ತು ಯಾರೋ ಮಾಡಿದ ಶಿಫಾರಸ್ಸುಗಳಿಗೆ ಮಾನ್ಯತೆ ನೀಡಿ ಕೆಲಸ ಮಾಡಿಕೊಡಲಾಗುತ್ತಿದೆ ಎಂಬ ದೂರುಗಳಿವೆ. ಅಧಿಕಾರಿಗಳು ಲಂಚ ಪಡೆಯದೇ, ಮಧ್ಯವರ್ತಿಗಳಿಗೆ ಅವಕಾಶ ನೀಡದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಬನ್ನೂರು ಪಟ್ಟಣವನ್ನು ಮಾದರಿ ಮಾಡಲು ನಮ್ಮ ತಂದೆ ಡಾ. ಎಚ್.ಸಿ. ಮಹದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದಾಗ ನೀಡಿದ್ದ ಕೋಟ್ಯಂತರ ರೂ. ಅನುದಾನ ಹಾಗೂ ಯೋಜನೆಗಳನ್ನು ಅಧಿಕಾರಿಗಳೇ ಹಾಳು ಮಾಡಿದ್ದೀರಾ ಎಂದು ಕಿಡಿಕಾರಿದರು. ಸಿಸಿ ಕ್ಯಾಮೆರಾ ಮ್ಯೂಟ್, ಮನೆಯಿಂದಲೇ ನಿಯಂತ್ರಣಬನ್ನೂರು ಪುರಸಭೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪುರಸಭೆಯಲ್ಲಿರುವ ಸಿಸಿ ಕ್ಯಾಮೆರಾವನ್ನು ಮ್ಯೂಟ್ ನಲ್ಲಿಡಲಾಗಿದ್ದರೂ, ಯಾರೋ ಒಬ್ಬ ವ್ಯಕ್ತಿ ಮನೆಯಲ್ಲಿ ಕುಳಿತು ಸಿಸಿ ಕ್ಯಾಮೆರಾ ನೋಡಿ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾನೆ ಎಂದರೆ ವ್ಯವಸ್ಥೆ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂಬುದನ್ನು ಊಹಿಸಬಹುದು. ಜನಪ್ರತಿನಿಧಿಗಳ ಗಮನಕ್ಕೆ ತರದೆ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವಷ್ಟರ ಮಟ್ಟಿಗೆ ಅಧಿಕಾರಿಗಳು ಮುಂದುವರಿದಿದ್ದೀರಾ? ನೀವು ರಾಜಕೀಯ ಮಾಡಲು ಬಂದಿಲ್ಲ, ಅಭಿವೃದ್ಧಿ ಕೆಲಸ ಮಾಡಲು ಬಂದಿದ್ದೀರಿ. ಜಿಲ್ಲಾಧಿಕಾರಿಗಳೇ ಭಾನುವಾರವೂ ಕೆಲಸ ಮಾಡುತ್ತಿರುವಾಗ, ನೀವು ಜನಪ್ರತಿನಿಧಿಗಳ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಅವರು ತರಾಟೆಗೆ ತೆಗೆದುಕೊಂಡರು. ಲಂಚ ಆರೋಪ: ತನಿಖೆಗೆ ಡಿಸಿ ಆದೇಶ ಈ ಹಿಂದೆ ಬನ್ನೂರು ಪುರಸಭೆಯಲ್ಲಿದ್ದ ಮುಖ್ಯಾಧಿಕಾರಿ ಕುಮಾರ್ ಎಂಬಾತ ಲ್ಯಾಪ್ಟಾಪ್ ನೀಡಲು ವ್ಯಕ್ತಿಯೊಬ್ಬರಿಂದ 40 ಸಾವಿರ ರು. ಗಳನ್ನು ಗೂಗಲ್ ಪೇ ಮೂಲಕ ಲಂಚ ಪಡೆದಿದ್ದಾನೆ ಎಂದು ಸಂಸದರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಅಂತಹ ಪ್ರಕರಣ ನಡೆದಿದ್ದರೆ ಈಗಲೂ ಕಠಿಣ ಕ್ರಮ ಜರುಗಿಸುತ್ತೇನೆ. ಈ ಕೂಡಲೇ ಸಂಬಂಧಿಸಿದ ವಿವರಗಳನ್ನು ನೀಡಿ ಎಂದು ಪ್ರಸ್ತುತ ಮುಖ್ಯಾಧಿಕಾರಿ ಸತೀಶ್ ಅವರಿಗೆ ಆದೇಶಿಸಿದರು. ಜನಸಂಪರ್ಕ ಸಭೆಯಲ್ಲಿ ದೂರುಗಳ ಮಹಾಪೂರ ಅಧಿಕಾರಿಗಳ ಸಭೆಗೂ ಮುನ್ನ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ನೂರಾರು ಜನರು ಸಂಸದರಿಗೆ ತಮ್ಮ ಅಳಲು ತೋಡಿಕೊಂಡರು. ಮುಖಂಡರು ಹಾಗೂ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗರೆದರು.ಯುಜಿಡಿ ಕಾಮಗಾರಿ ಅಕ್ರಮ - ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ ಮಾತನಾಡಿ, ಹೌಸಿಂಗ್ ಬೋರ್ಡ್ನಲ್ಲಿ ಯಾವುದೇ ಕೆಲಸವಾಗಿಲ್ಲ. ಎಸ್ಟಿಮೇಟ್ ಪ್ರಕಾರ ಯುಜಿಡಿ (ಒಳಚರಂಡಿ) ಕೆಲಸವಾಗದಿದ್ದರೂ ಬಿಲ್ ಪಾಸ್ ಮಾಡಿಕೊಳ್ಳಲಾಗಿದೆ. ಪಟ್ಟಣದಲ್ಲಿ ಸ್ವಚ್ಛತೆಯೇ ಮಾಯವಾಗಿದೆ ಎಂದು ದೂರಿದರು. ಗುತ್ತಿಗೆದಾರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಿ:* ಪ್ರೊ. ಜ್ಞಾನಪ್ರಕಾಶ್ ಮಾತನಾಡಿ, ಬನ್ನೂರಿನ 23 ವಾರ್ಡ್ಗಳಲ್ಲಿ ರಸ್ತೆಗಳು ತಿಪ್ಪೆಗುಂಡಿಗಳಂತಾಗಿವೆ. ಯುಜಿಡಿ ಕಾಮಗಾರಿ ಮುಗಿಸದ ಗುತ್ತಿಗೆದಾರರನ್ನು ಮತ್ತು ಎಂಜಿನಿಯರ್ಗಳನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಿ. ಪಟ್ಟಣದಲ್ಲಿ ನಿವೇಶನ ಹಂಚಿಕೆಯಾಗಿ ಹಲವು ವರ್ಷಗಳಾಗಿದ್ದು, 50 ಎಕರೆ ಭೂಸ್ವಾಧೀನ ಪಡಿಸಿಕೊಂಡು ಸೈಟ್ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.ಯೋಜನಾ ನಿರ್ದೇಶಕಿ ಪ್ರಿಯದರ್ಶಿನಿ, ಉಪ ವಿಭಾಗಾಧಿಕಾರಿ ಆಶಪ್ಪ, ಎ. ಎನ್. ಸ್ವಾಮಿ, ಪುರಸಭೆಯ ಮಾಜಿ ಸದಸ್ಯ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಅಶೋಕ್, ಕೃಷ್ಣೇಗೌಡ, ಶಶಿಭೂಷಣ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್, ಅಧಿಕಾರಿಗಳಾದ ಸತೀಶ್ ಚಂದ್ರನ್, ಸಿಡಿಪಿಓ ಗೋವಿಂದರಾಜು ಇದ್ದರು.