ಶತ ಸಂಭ್ರಮೋತ್ಸವದ ಶುಭಾವಸರದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ಗುರುವಾರ ಶಾಲಾ ಶತಮಾನೋತ್ಸವ ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.

ಕಾಪು: ಶತ ಸಂಭ್ರಮೋತ್ಸವದ ಶುಭಾವಸರದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ಗುರುವಾರ ಶಾಲಾ ಶತಮಾನೋತ್ಸವ ವೇದಿಕೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಟೀ ಶರ್ಟ್, ಗೌರವ ಶಿಕ್ಷಕಿಯರಿಗೆ ಸಮವಸ್ತ್ರ, ಅಡುಗೆ ಸಿಬ್ಬಂದಿಗೆ ವೆಪ್ರಾನ್ ಹಸ್ತಾಂತರ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ದೇಶದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಶಾಲಾ ವಿದ್ಯಾರ್ಥಿಗಳಾಗಿದ್ದ, ಮುಂಬೈ ಉದ್ಯಮಿ ಬಂಟಕಲ್ಲು ಜನಾರ್ದನ ಆಚಾರ್ಯ ಪೊದಮಲೆ, ವಿಠಲ ಡಿ. ಪಾಟ್ಮರ್ ಡೊಂಬಿವಿಲಿ, ಪುಷ್ಪಾ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ವಿವಿಧ ಪರಿಕರಗಳನ್ನು ವಿತರಿಸಿ, ಅಂದಿನ ತಮ್ಮ ಶಾಲಾ ದಿನಗಳು, ಶಿಕ್ಷಕರ ಕಲಿಕಾ ಕೌಶಲ, ಪೆಟ್ಟುಗಳ ಮೆಲುಕು ಹಾಕಿ ಅನುಭವ ಹಂಚಿಕೊಂಡರು. ನಮ್ಮ ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಈ ಮೂರು ಹಳೆವಿದ್ಯಾರ್ಥಿಗಳನ್ನು ಮತ್ತು ನೂತನ ಬಟ್ಟಲು ಸ್ಯಾಂಡ್ ಕೊಡುಗೆ ನೀಡಿದ ಬಂಟಕಲ್ಲು ಲಯನ್ಸ್ ಅಧ್ಯಕ್ಷೆ ಜುಲಿಯಾನಾ ಮೋನಿಸ್ ಅವರನ್ನು ಸನ್ಮಾನಿಸಲಾಯಿತು. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಶಿಕ್ಷಕಿ ವಿನುತಾ ಆಚಾರ್ಯ ಪರಿಚಯಿಸಿದರು.ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ಶಾಲಾ ಸಂಚಾಲಕ ರಾಮದಾಸ್ ಪ್ರಭು ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ ಮಾಧವ ಕಾಮತ್ ಮಾತನಾಡಿ ಇದೇ ತಿಂಗಳ ೨೦ ಮತ್ತು ೨೧ ರಂದು ಶಾಲೆಯಲ್ಲಿ ಜರುಗಲಿರುವ ಹಳೆವಿದ್ಯಾರ್ಥಿಗಳ "ಬೃಹತ್ ಸಮ್ಮಿಲನ "ದಲ್ಲಿ ಎಲ್ಲಾ ಹಳೆವಿದ್ಯಾರ್ಥಿಗಳು ಭಾಗವಹಿಸುವಂತೆ ಕರೆಯತ್ತರು.

ಸಮಿತಿಯ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ದಿನೇಶ್ ದೇವಾಡಿಗ ನಿರೂಪಿಸಿದರು. ದಾಮೋದರ ಆಚಾರ್ಯ,ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ಸಮಿತಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.