ಸಾರಾಂಶ
ನಮಗೆ ಬಿಜೆಪಿ, ಕಾಂಗ್ರೆಸ್ ಎಲ್ಲವೂ ಸಮಾನ. ಬಂಟ ಜನಪ್ರತಿನಿಧಿಗಳು ರಾಜಕೀಯವಾಗಿ ಹೇಳಿಕೆ ನೀಡುವ ಬದಲು ನಿಮಗೂ ಜವಾಬ್ದಾರಿ ಇದೆ. ನಮ್ಮ ಬೇಡಿಕೆ ಈಡೇರಿಸಲು ಯಾವ ರೀತಿ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿಯಿಲ್ಲ. ಎಲ್ಲ ಪಕ್ಷಗಳ ಬಂಟ ಮುಖಂಡರನ್ನು ಭೇಟಿಯಾಗಿ ಮಾಡಿ ಮನವಿ ಮಾಡಿದ್ದೇವೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟರ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ಬಂಟರ ನಿಗಮ ಸ್ಥಾಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಸಂಘಕ್ಕೆ ಇದುವರೆಗೆ ಯಾವ ಸರ್ಕಾರದಿಂದಲೂ ಸಹಕಾರ ಸಿಕ್ಕಿಲ್ಲ. ಬಂಟ ಸಮುದಾಯ ನೋಡಲು ಬಲಿಷ್ಠ ಸಮಾಜ. ಆದರೆ ನಮ್ಮಲ್ಲೂ ಶೇ50ಕ್ಕಿಂತ ಅಧಿಕ ಕಡುಬಡವರಿದ್ದಾರೆ. ಜಾಗತಿಕ ಬಂಟರ ಸಂಘಕ್ಕೆ ಯಾವುದೇ ಆದಾಯವಿಲ್ಲ. ಇತರರಲ್ಲಿ ಹಣ ಸಂಗ್ರಹಿಸಿ ಸಹಾಯ ಮಾಡುತ್ತಿದ್ದೇವೆ. ಈ ಕಾರಣದಿಂದ ನಮಗೂ ನಿಗಮ, ಮೀಸಲಾತಿ ಬೇಕು ಎಂದು ಹೇಳಿದರು.ನಮಗೆ ಬಿಜೆಪಿ, ಕಾಂಗ್ರೆಸ್ ಎಲ್ಲವೂ ಸಮಾನ. ಬಂಟ ಜನಪ್ರತಿನಿಧಿಗಳು ರಾಜಕೀಯವಾಗಿ ಹೇಳಿಕೆ ನೀಡುವ ಬದಲು ನಿಮಗೂ ಜವಾಬ್ದಾರಿ ಇದೆ. ನಮ್ಮ ಬೇಡಿಕೆ ಈಡೇರಿಸಲು ಯಾವ ರೀತಿ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿಯಿಲ್ಲ. ಎಲ್ಲ ಪಕ್ಷಗಳ ಬಂಟ ಮುಖಂಡರನ್ನು ಭೇಟಿಯಾಗಿ ಮಾಡಿ ಮನವಿ ಮಾಡಿದ್ದೇವೆ ಎಂದರು.ಬಂಟರ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ವಿಶ್ವ ಬಂಟರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 500 ಕೋಟಿ ರು. ಮೀಸಲಿರಿಸುವುದಾಗಿ ಘೋಷಣೆ ಮಾಡಿದ್ದರೂ, ಇದೀಗ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹರೀಶ್ ಶೆಟ್ಟಿ ತಿಳಿಸಿದರು.
ನಿಗಮ ಸ್ಥಾಪನೆಗಾಗಿ ಸರ್ಕಾರಕ್ಕೆ ಡೆಡ್‌ಲೈನ್ ಕೊಡುವುದಿಲ್ಲ. ಸರ್ಕಾರ ಬಂದು ವರ್ಷ ಮಾತ್ರ ಆಗಿದೆ. ಚುನಾವಣೆಗೆ ಮೊದಲು ಇನ್ನೊಮ್ಮೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ, ಮಾಧ್ಯಮ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಇದ್ದರು.