ಸಾರಾಂಶ
ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆಯಾಗಿ 200 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ದೇವಳದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಶಾಲಾ ವಾಹನ, ದೇವಳದ ಪಟ್ಟದ ದೇವರು ಶ್ರೀನಿವಾಸ ಹಾಗೂ ಉತ್ಸವ ಮೂರ್ತಿ ಶ್ರೀವೆಂಕಟರಮಣನಿಗೆ ತಲಾ 50 ಪವನ್‌ನ ಚಿನ್ನದ ಸರ ಸಮರ್ಪಸಲಾಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಂಟ್ವಾಳ ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ದೇವಳದಲ್ಲಿ 200ನೇ ವರ್ಷದ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಸೋಮವಾರದಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.ದೇವಳದಲ್ಲಿ ಚಕ್ರಾಬ್ಜ ಮಂಡಲ ಪೂಜೆ, ಬಳಿಕ ಮಹಿಳೆಯರಿಂದ ಲಕ್ಷ ತುಳಸಿ ಪುಷ್ಪಾರ್ಚನೆ, ಕಾಶೀಮಠದ ವೃಂದಾವನದಲ್ಲಿ ಶ್ರೀ ಹನುಮಂತದೇವರಿಗೆ ಗಂಧಲೇಪನ, ಸಂಜೆ ದೇವಳದ ಮುಂಭಾಗದಲ್ಲಿರುವ ನೇತ್ರಾವತಿ ನದಿ ತೀರದಲ್ಲಿ ಸಮಾಜದ ಮಹಿಳೆಯರಿಂದ ಕುಂಕುಮಾರ್ಚನೆ ಹಾಗೂ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಪವಿತ್ರ ನೇತ್ರಾವತಿ ನದಿಗೆ ಗಂಗಾರತಿ ನೆರವೇರಿತು.
ನಂತರ ದೇವರಿಗೆ ದೀಪ ನಮಸ್ಕಾರ, ದೀಪಾಲಂಕಾರ,ರಾತ್ರಿ ಗೋಪುರೋತ್ಸವ, ಒಳಾಂಗಣ ಹನುಮಂತೋತ್ಸವ, ವಸಂತಪೂಜೆ,ಅಷ್ಠಾವಧಾನ ಸೇವೆ ನಡೆಯಿತು.ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆಯಾಗಿ 200 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ದೇವಳದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಶಾಲಾ ವಾಹನ, ದೇವಳದ ಪಟ್ಟದ ದೇವರು ಶ್ರೀನಿವಾಸ ಹಾಗೂ ಉತ್ಸವ ಮೂರ್ತಿ ಶ್ರೀವೆಂಕಟರಮಣನಿಗೆ ತಲಾ 50 ಪವನ್‌ನ ಚಿನ್ನದ ಸರ, ಶ್ರೀ ವೀರಮಾರುತಿಗೆ ಅಭರಣ ಹಾಗೂ ಬ್ರಹ್ಮರಥದಲ್ಲಿ ಶ್ರೀದೇವರು ಕುಳಿತುಕೊಳ್ಳುವ ಪೀಠಕ್ಕೆ 10 ಕೆ.ಜಿ. ಬೆಳ್ಳಿಯ ಪ್ರಭಾವಳಿಯನ್ನು ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೂಲಕ ಸಮರ್ಪಸಲಾಯಿತು.
ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು ಸಹಿತ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.